ಪರಿಸರಸ್ನೇಹಿ ಪೇಪರ್ ಗಣಪನತ್ತ ಭಕ್ತರ ಚಿತ್ತ

Paper Ganesha
Published on

ಪಂಕಜ ಕೆ.ಎಂ. ಬೆಂಗಳೂರು

ಗೌರಿ-ಗಣೇಶ ಹಬ್ಬ ಸಮೀಪಿಸುತ್ತಲೇ ನಗರದಲ್ಲಿ ಗೌರಿ-ಗಣೇಶ ಮೂರ್ತಿಗಳ ಮಾರಾಟ ಆರಂಭವಾಗಿವೆ. ಪಿಒಪಿ ಮೂರ್ತಿಗಳ ಮಾರಾಟ ಮತ್ತು ತಯಾರಿ ನಿಷೇಧ ಹಿನ್ನೆಲೆ ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳ ಜತೆಗೆ ಈ ಬಾರಿ ಪೇಪರ್ ಮೂರ್ತಿಗಳನ್ನೂ ತಯಾರಿಸಲಾಗುತ್ತಿದೆ.

ಕಳೆದ ಬಾರಿ ಹೊರ ರಾಜ್ಯಗಳಿಂದ ಪೇಪರ್ ಮೂರ್ತಿಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಗ್ರಾಹಕರು ಈ ಬಗೆಯ ಮೂರ್ತಿಗಳತ್ತ ಒಲವು ತೋರಿದ್ದರಿಂದ ಈ ವರ್ಷ ಕರ್ನಾಟಕದಲ್ಲೇ ತಯಾರಿಕೆ ಹೆಚ್ಚಾಗಿದೆ. ಮನೆಗಳಲ್ಲಿ ಪೂಜಿಸುವವರು ಮಣ್ಣಿನ ಮೂರ್ತಿಯೇ ಶ್ರೇಷ್ಠ ಎಂಬ ಕಾರಣಕ್ಕೆ ಎಂದಿನಂತೆಯೇ ಮಣ್ಣಿನ ಗಣಪ ಅಧಿಕ ಬೇಡಿಕೆ ಪಡೆದುಕೊಂಡಿದ್ದಾನೆ.

ಆಕರ್ಷಣೆ ಹಾಗೂ ವಿಶೇಷತೆಗಳಿಗೆ ಆದ್ಯತೆ ನೀಡುವ ಮಂದಿ ಹಾಗೂ ಸಂಘ- ಸಂಸ್ಥೆಗಳು ಈ ಬಾರಿ ಪೇಪರ್ ಗಣೇಶ ಮೂರ್ತಿಗಳತ್ತ ಆಸಕ್ತರಾಗಿದ್ದಾರೆ. ರಸ್ತೆಗಳಲ್ಲಿ, ಮೈದಾನಗಳಲ್ಲಿ ಸಾರ್ವಜನಿಕವಾಗಿ ಗಣೇಶ ಕೂರಿಸುವವರು ಪೇಪರ್ ಮೂರ್ತಿಗಳನ್ನು ಹೇಳಿ ಮಾಡಿಸುತ್ತಿದ್ದಾರೆ. ಗ್ರಾಹಕರು ಈಗಾಗಲೆ ತಯಾರಿಸಿರುವ ಈ ಬಗೆಯ ಮೂರ್ತಿಗಳಲ್ಲಿ ಶೇ. 60 ಮುಂಗಡವಾಗಿ ಕಾಯ್ದಿರಿಸಿದ್ದಾರೆ ಎನ್ನುತ್ತಾರೆ ಆರ್.ವಿ. ರಸ್ತೆಯ ವಿನಾಯಕ ಆ್ಯಂಡ್ ಕಂಪನಿ ಸಂಸ್ಥೆಯ ಮಾಲೀಕ ಎಂ. ಶ್ರೀನಿವಾಸ್.

ಪೇಪರ್ ಮೂರ್ತಿಗಳನ್ನು ತಯಾರಿಸುವುದು ಸುಲಭವಲ್ಲ. ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮರಗೆಣಸನ್ನು ಒಣಗಿಸಿ ಪುಡಿ ಮಾಡಿ ಅದನ್ನು ಬೇಯಿಸಿ, ಪೇಸ್ಟ್ ಮಾಡಿಕೊಂಡು ಅದಕ್ಕೆ ಕಾಚಿ ಪೇಪರ್ ಪುಡಿ ಮಾಡಿ, ಎರಡನ್ನೂ ಮಿಶ್ರಣಗೊಳಿಸಿ ಸುಮಾರು 12 ಅಡಿವರೆಗೂ ತಯಾರಿಸಲಾಗುತ್ತದೆ. ಇದಕ್ಕೆ ರಾಸಾಯನಿಕ ಮುಕ್ತ ಬಣ್ಣ (ವೆಜಿಟೇಬಲ್ ಕಲರ್) ಬಳಸಿ ಆಕರ್ಷಕವಾಗಿ ಕಾಣುವಂತೆ ಮಾಡಲಾಗುತ್ತದೆ. ಹೀಗೆ ತಯಾರಿಸುವ ಪೇಪರ್ ಗಣಪ ಪರಿಸರಸ್ನೇಹಿಯಾಗಿದ್ದು, ಹಗುರ ಮತ್ತು ನಿರ್ವಹಣೆಯೂ ಸುಲಭ. ಪೂಜೆ ನಂತರ ವಿಸರ್ಜನೆಗೂ ತೊಂದರೆ ಇಲ್ಲ. ಇದು ನೀರಿನಲ್ಲಿ ಸುಲಭವಾಗಿ ಕರಗಲಿದ್ದು, ಮೀನುಗಳಿಗೆ ಆಹಾರವಾಗಬಲ್ಲದು. ಆದರೆ ಈ ಮೂರ್ತಿಗಳ ತಯಾರಿಕೆ ಮಣ್ಣಿನ ಮೂರ್ತಿಗಿಂತಲೂ ದುಬಾರಿಯಾಗಿದೆ. ಇವುಗಳನ್ನು ಸಂಗ್ರಹಿಸಿಡುವುದು ಕಷ್ಟ. ಬೇಸಿಗೆಯಲ್ಲಿ ಏನೂ ತೊಂದರೆ ಇಲ್ಲ. ಆದರೆ ಚಳಿಗಾಲ ಮತ್ತು ಮಳೆಗಾಲದಲ್ಲಿ ತಣ್ಣನೆಯ ವಾತಾವರಣದಿಂದಾಗಿ ವಿಗ್ರಹಗಳು ಮೆತ್ತಗಾಗುತ್ತವೆ. ಇನ್ನು ಇದಕ್ಕಾಗಿ ತಮಿಳುನಾಡಿನಿಂದ ಕಾಚಿ ಪೇಪರ್ ಅನ್ನು ಬಂಡಲ್‌ಗಟ್ಟಲೆ ತರಿಸಲಾಗುತ್ತದೆ. ಹಾಗಾಗಿ ಈ ವಿಗ್ರಹಗಳ ಕೊಂಚ ದುಬಾರಿ ಎನ್ನುತ್ತಾರೆ ತಯಾರಕರು.

ವಿದೇಶಗಳಿಗೆ ಮಣ್ಣಿನ ಏಕದಂತ:

ಆರ್.ವಿ. ರಸ್ತೆಯ ವಿನಾಯಕ ಆ್ಯಂಡ್ ಕಂ. ಸಂಸ್ಥೆಯ ತಯಾರಿಸುವ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೊರದೇಶಗಳಲ್ಲಿ ಬೇಡಿಕೆ ಹೆಚ್ಚಿದೆ. ಪ್ರತಿ ವರ್ಷದಂತೆ ಈ ಬಾರಿಯೂ 6ರಿಂದ 12 ಇಂಚ್‌ನ ಸುಮಾರು 5 ಸಾವಿರ ಮೂರ್ತಿಗಳನ್ನು ಮಂಗಳೂರಿನ ಬಂದರು ಮೂಲಕ ಮೂರು ತಿಂಗಳು ಮುಂಚಿತವಾಗಿಯೇ ಅಮೆರಿಕದ ನ್ಯೂಯಾರ್ಕ್‌ಗೆ ಕಳುಹಿಸಲಾಗಿದೆ. ಇದರ ಹೊರತಾಗಿಯೂ ಬೆಂಗಳೂರಿನಿಂದ ಈ ದೇಶಗಳಿಗೆ ಹೋಗುವವರು ಸ್ನೇಹಿತರಿಗಾಗಿ ಒಂದು ಅಡಿವರೆಗಿನ ಪೇಪರ್ ಮೂರ್ತಿಗಳನ್ನು ಕೊಂಡೊಯ್ಯುತ್ತಾರೆ ಎಂದು ಎಂ. ಶ್ರೀನಿವಾಸ್ ತಿಳಿಸಿದರು.

ಫೈಬರ್ ಗಣೇಶ:

ಪಿಒಪಿ ಗಣೇಶ ಮೂರ್ತಿಗಳ ಮಾರಾಟ ನಿಷೇಧ ಹಿನ್ನೆಲೆ ಸುಮಾರು 6 ರಿಂದ 18 ಅಡಿವರೆಗಿನ ಫೈಬರ್ ಗಣೇಶ ಮೂರ್ತಿಗಳನ್ನು ದಿನಕ್ಕೆ 10 ಸಾವಿರ ರೂ.ನಂತೆ ಬಾಡಿಗೆಗೆ ನೀಡಲಾಗುತ್ತದೆ. ದೊಡ್ಡ ಮೂರ್ತಿಗಳು ಮೂರು ದಿನಗಳಿಗೆ 50 ಸಾವಿರ ರೂ. ನಂತೆ ಬಾಡಿಗೆಗೆ ಲಭ್ಯವಿದೆ. ಬಾಂಡ್ ಪೇಪರ್ ಅಗ್ರೀಮೆಂಟ್ ಮಾಡಿಕೊಂಡು ಬಾಡಿಗೆ ನೀಡಲಾಗುತ್ತದೆ. ಇವನ್ನು ಸಾರ್ವಜನಿಕ ಗಣೇಶೋತ್ಸವಗಳಿಗೆ ಒಯ್ಯುತ್ತಾರೆ. ಇದರ ಜತೆಗೆ ಒಂದು ಅಡಿಯ ಮಣ್ಣಿನ ವಿಗ್ರಹವನ್ನೂ ನೀಡಲಾಗುತ್ತದೆ. ಪೂಜೆ ನಂತರ ಮೆರವಣಿಗೆ ಮಾಡಿ ಮಣ್ಣಿನ ವಿಗ್ರಹ ವಿಸರ್ಜಿಸಿ ಫೈಬರ್ ಗಣೇಶ ಮೂರ್ತಿಯನ್ನು ಹಿಂದಿರುಗಿಸುತ್ತಾರೆ.

ಆನ್‌ಲೈನ್‌ನಲ್ಲೂ ಕಾರ್ಯಾಗಾರ:

ಇತ್ತೀಚಿನ ವರ್ಷಗಳಲ್ಲಿ ಗೌರಿ- ಗಣೇಶ ಹಬ್ಬಗಳಲ್ಲಿ ಪರಿಸರಸ್ನೇಹಿ ಮೂರ್ತಿಗಳ ಆರಾಧನೆಯತ್ತ ಜನರು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಕೆಲ ಸಂಘ- ಸಂಸ್ಥೆಗಳು ಹಬ್ಬದ ಸಂದರ್ಭದಲ್ಲಿ ಶಾಲಾ- ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಮೂರ್ತಿ ತಯಾರಿಕೆ ಕುರಿತು ತರಬೇತಿ ನೀಡುತ್ತವೆ. ಆನ್‌ಲೈನ್ ವೇದಿಕೆಗಳ ಮೂಲಕ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರಗಳನ್ನು ನಡೆಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net