

ಬೆಂಗಳೂರು: ಕಡಿಮೆ ಪ್ರಮಾಣದಲ್ಲಿ ಹೊಗೆ ಉಗುಳುವ ದೇಶದ ಮೊದಲ ಪರಿಸರ ಸ್ನೇಹಿ ಬೋಯಿಂಗ್ ಹೊಂದಿರುವ ವಿಮಾನವನ್ನು ಆಕಾಸ ಏರ್ಲೈನ್ ಪರಿಚಯಿಸಿದೆ. ಬೋಯಿಂಗ್ 737 MAX , 737-8-200 ವಿಮಾನವು ಯುಎಸ್ಎನ ಸಿಯಾಟಲ್ನಿಂದ ಹೊರಟು ಮಂಗಳವಾರ ಬೆಂಗಳೂರಿಗೆ ತಲುಪಿದೆ.
ಈ ಬಗ್ಗೆ ಆಕಾಸ ಏರ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ ಮಾತನಾಡಿ, ಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು 20ಕ್ಕೆ ಹೆಚ್ಚಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಬೋಯಿಂಗ್ 737 MAX ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಇದು ಸಾಮಾನ್ಯ ಎಂಜಿನ್ಗಿಂತ ಶೇ.20ರಷ್ಟು ಕಡಿಮೆ ಹೊಗೆ ಉಗುಳಲಿದ್ದು, ಹೆಚ್ಚು ಪರಿಸರ ಸ್ನೇಹಿಯಾಗಿರುವುದು ಇದರ ವಿಶೇಷತೆ. ಈ ಬೋಯಿಂಗ್ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಅಲ್ಲದೆ ಬೇರೆ ವಿಮಾನಗಳಿಗಿಂತ ಶೇ.50ರಷ್ಟು ಕಡಿಮೆ ಶಬ್ದ ಮಾಡುತ್ತದೆ ಎಂದು ತಿಳಿಸಿದರು.
ಕಳೆದ ವರ್ಷ ಆಗಸ್ಟ್ನಲ್ಲಿ ವಾಣಿಜ್ಯ ಕಾರ್ಯಾಚರಣೆ ಪ್ರಾರಂಭಿಸಿದ ಆಕಾಸ ವಿಮಾನಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾಗಿದೆ. ಪ್ರಸ್ತುತ 20 ವಿಮಾನಗಳನ್ನು ಹೊಂದಿದೆ. ದೇಶದಲ್ಲಿ 16 ನಗರಗಳನ್ನು ಸಂಪರ್ಕಿಸುತ್ತಿದ್ದು, 35 ವಿವಿಧ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದೆ. ಈವರೆಗೆ 40 ಲಕ್ಷ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಿದ್ದಾರೆ.