ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ
ವಿದ್ಯಾರ್ಥಿಗಳಷ್ಟೆ ಅಲ್ಲ ನಾವು ನೀವು ಎಲ್ಲರೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವಿಸುವುದು ಮುಖ್ಯ.ಮನೆಯಲ್ಲೆ ಮಾಡಿದ ಅಡುಗೆ, ಹಣ್ಣು, ತರಕಾರಿ ಸೇವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ತಾಲೂಕಿನ ವೈ.ಹುಣಸೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು&ನೆರವು ಹಾಗೂ ಪೌಷ್ಟಿಕ ಆಹಾರ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ದೈಹಿಕವಾಗಿ ಬೆಳೆಯುತ್ತಿರುವ ಹಂತದಲ್ಲಿದ್ದು, ಈ ಹಂತದಲ್ಲಿ ತರಕಾರಿ, ಸೊಪ್ಪು, ಹಣ್ಣು, ಮನೆಯಲ್ಲೇ ತಯಾರಿಸಿದ ಸಮತೋಲಿತ ಪೌಷ್ಟಿಕ ಆಹಾರ ಸೇವಿಸುವುದು ಮುಖ್ಯ.ಬೀದಿ ಬದಿ ತಯಾರಿಸುವ ಜಂಕ್ಫುಡ್, ಕರಿದ ಮಸಾಲೆ
ಪದಾರ್ಥಗಳ ಸೇವನೆ ತ್ಯಜಿಸಬೇಕೆಂದರು.
ಆರೋಗ್ಯ ಕೈ ಕೊಟ್ಟರೆ ಶಿಕ್ಷಣ, ಜ್ಞಾನ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಭವಿಷ್ಯ ಮುಸುಕಾಗಲಿದೆ. ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದೊಂದಿಗೆ ಉತ್ತಮ ಬದುಕು ನಿಮ್ಮದಾಗಲಿ ಎಂದರು. ಮೊಬೈಲ್ ಬಳಕೆ ಮಿತವಾಗಿರಲಿ,ಅಧ್ಯಯನ, ಜ್ಞಾನಾರ್ಜನೆಗಾಗಿ ಮಾತ್ರ ಮೊಬೈಲ್ನ ಬಳಕೆ ಇತಿ ಮಿತಿಯಲ್ಲಿ ಇರಲಿ ಎಂದು ಹೇಳಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿದ್ಯಾ ವಸದ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಕ್ಕಳು, ತಾಯಂದಿರ ಆರೋಗ್ಯಕ್ಕೆ ಒತ್ತು ನೀಡಲಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಇದುವರೆಗೂ ಮಕ್ಕಳ ಪೋಷಣೆಯಲ್ಲಿ ತಾಯಂದಿರ ಪಾತ್ರಕ್ಕೆ ಮಾತ್ರವೇ ಒತ್ತು ನೀಡಲಾಗುತ್ತಿತ್ತು. ಆದರೆ ಇದೀಗ ತಾಯಿಯ ಜತೆಗೆ ತಂದೆಯೂ ಕೂಡ ಮಗುವಿನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸುತ್ತಾರೆ ಎಂದು ಮನಗಂಡು ಪುರುಷರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿ ಭಾಗವಹಿಸುವಿಕೆ ಹೆಚ್ಚಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು.
ವಿವಿಧ ರೀತಿಯ ತರಕಾರಿ, ಸೊಪ್ಪು, ಹಣ್ಣುಗಳು, ಅಂಗನವಾಡಿ ಕಾರ್ಯಕರ್ತೆಯರು ಮನೆಯಲ್ಲಿ ತಯಾರಿಸಿದ ವಿವಿಧ ರೀತಿಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಿತರಿಸಲಾಯಿತು. ವಕೀಲರ ಸಂದ ಅಧ್ಯಕ್ಷ ಎ.ನಾರಾಯಣಸ್ವಾಮಿ ವಿದ್ಯಾರ್ಥಿಗಳಿಗೆ ಬ್ಯಾಗ್, ಲೇಖನಿ ಸಾಮಗ್ರಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ, ಹಿರಿಯ ವಕೀಲ ಎಂ.ಪಾಪಿರೆಡ್ಡಿ, ಸಿಡಿಪಿಒ ವಿದ್ಯಾವಸದ್, ವಕೀಲರ ಸಂದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಸಂದ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಮುಖಂಡರಾದ ನಾರಾಯಣಸ್ವಾಮಿ, ಕದಿರಿನಾಯಕನಹಳ್ಳಿ ರವಿ, ವಕೀಲ ಬಸವನಪರ್ತಿ ವೆಂಕಟೇಶ್, ಬೇಕರಿ ಗೌಡ, ಎಸ್.ಡಿ.ಎಂ.ಸಿ ಅಧ್ಯೆ ಚೈತ್ರಾ, ಮುಖ್ಯಶಿಕ್ಷಕಿ ಹಂಸವೇಣಿ, ಸಿ.ಆರ್.ಪಿ ಮಂಜುನಾಥ್ ಇದ್ದರು.