

ಮಳವಳ್ಳಿ: ತಾಲೂಕಿನ ಕೆಂಬೂತಗೆರೆ ಗ್ರಾಮದಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯಕ್ತ ಆಶ್ರಯದಲ್ಲಿ ‘ವಿಶ್ವ ಪೌಷ್ಟಿಕ ಆಹಾರ ಸಪ್ತಾಹ’ ಕಾರ್ಯಕ್ರಮ ನಡೆಯಿತು.
ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೀದಿ ಬದಿಯಲ್ಲಿ ಕರಿದ ಕುರುಕಲು ತಿಂಡಿಗಳನ್ನು ಸೇವನೆ ಮಾಡುವುದರಿಂದ ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ತೀವ್ರ ತರಹದ ಪರಿಣಾಮ ಬೀರಲಿದೆ. ಫ್ರಿಡ್ಜ್‌ನಲ್ಲಿ ಇಟ್ಟ ತಂಗಳು ಆಹಾರ ಸೇವಿಸುವುದನ್ನು ಬಿಟ್ಟು ಅಗತ್ಯಕ್ಕೆ ತಕ್ಕಷ್ಟು ತಯಾರಿಸಿಕೊಂಡು ಬಿಸಿಯಾದ ಆಹಾರ ಸೇವಿಸಬೇಕೆಂದ ಅವರು, ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ತಿನ್ನಬೇಕು. ಅಂಗಡಿ, ಮಾರುಕಟ್ಟೆಗಳಲ್ಲಿ ಸಿಗುವ ವಿವಿಧ ಬಗೆಯ ಪದಾರ್ಥಗಳನ್ನು ತ್ಯಜಿಸಬೇಕೆಂದು ಕಿವಿಮಾತು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶೈಲಜಾ ಮಾತನಾಡಿ, ಕೇಂದ್ರ ಸರ್ಕಾರ ಪ್ರಸ್ತುತ ಸಾಲಿನಲ್ಲಿ ’ಸುಪೋಷಿತ ಕಿಶೋರಿ ಸಶಕ್ತ ನಾರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಹದಿಹರೆಯದವರನ್ನು ಸಬಲೀಕರಣ ಮಾಡುವುದರ ಜತೆಗೆ ರಾಷ್ಟ್ರವನ್ನು ಬಲಪಡಿಸುವ ಅಭಿಯಾನ ಆರಂಭಿಸಿದ್ದು, ಈ ಮೂಲಕ ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬರುವ ಅಪೌಷ್ಟಿಕತೆ ಹೋಗಲಾಡಿಸುವುದು ಹಾಗೂ ಗರ್ಭಿಣಿಯರಲ್ಲಿ ರಕ್ತಹೀನತೆ ತಪ್ಪಿಸುವ ಉದ್ದೇಶವಾಗಿದೆ. ಈ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾರ್ವಜನಿಕರ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಬಾಲ ವಿಕಾಸ ಸಮಿತಿ ಅಧ್ಯಕ್ಷೆ ವಿಜಯ ಮನು ಮಾತನಾಡಿ, ಪ್ರತಿಯೊಬ್ಬರೂ ದಿನನಿತ್ಯದ ಆಹಾರದಲ್ಲಿ ಸಮತೋಲಿತ ಆಹಾರ ಸೇವನೆ ಮಾಡುವುದನ್ನು ಬೆಳೆಸಿಕೊಳ್ಳಬೇಕು. ಎಣ್ಣೆಯಿಂದ ಕರಿದ ಆಹಾರ ಮತ್ತು ಬೇಕರಿ ತಿನಿಸುಗಳಿಂದ ಮಕ್ಕಳನ್ನು ದೂರ ಇಡಬೇಕು. ವೀಳ್ಯದೆಲೆ ಮತ್ತು ಹಸಿ ತರಕಾರಿಗಳನ್ನು ಸ್ವಚ್ಛಗೊಳಿಸಿ ನಿಯಮಿತವಾಗಿ ಸೇವಿಸಬೇಕೆಂದು ಸಲಹೆ ನೀಡಿದರು.
ಮೇಲ್ವಿಚಾರಕಿ ಸರಳಾ, ಗ್ರಾಮ ಪಂಚಾಯತಿ ಸದಸ್ಯರಾದ ಉಮೇಶ್, ಕೆಂಪಾಜಮ್ಮ ಸೇರಿದಂತೆ ಹಲವಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.