ಕಾಮಗಾರಿಗಳ ಮೇಲೆ ಹದ್ದಿನ ಕಣ್ಣಿರಲಿ

FotoJet (1)
Published on

ನಗರಸಭೆ ಸದಸ್ಯರಿಗೆ ಶಾಸಕ ಸಲಹೆ ನಾಮನಿರ್ದೇಶಿತ ಸದಸ್ಯನಿಂದ ಗೌರವ ಸ್ವೀಕಾರ

ಗೌರಿಬಿದನೂರು: ನಗರಸಭೆ ಸದಸ್ಯರು ಜನರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕು. ಜನ ಹಿತಾಸಕ್ತಿಗೆ ಸದಾ ಒತ್ತು ನೀಡಿದರೆ ಮಾತ್ರ ನಗರೋದ್ದಾರ ಸಾಧ್ಯ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.

ನಗರದ ಶಾಸಕರ ಗೃಹ ಕಚೇರಿಯಲ್ಲಿ ನಗರಸಭೆ ನೂತನ ನಾಮನಿರ್ದೇಶಿತ ಸದಸ್ಯ ಡಿ.ಜೆ. ಚಂದ್ರಮೋಹನ್ ಅವರಿಂದ ಗೌರವ ಸ್ವೀಕರಿಸಿ ಮಾತನಾಡಿದರು.

ಅಕ್ರಮ-ಅವ್ಯವಹಾರಗಳ ವಿರುದ್ಧ ಬೆಳಕು ಚೆಲ್ಲಿ ಸರ್ಕಾರದ ಘನತೆಯನ್ನು ಎತ್ತಿಹಿಡಿದು ನಗರದ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಜನಮನ ತಲುಪಿಸುವಲ್ಲಿ ಸದಸ್ಯರು ಮುಖ್ಯ ಪಾತ್ರ ವಹಿಸಬೇಕು ಎಂದರು.

ಕಾಮಗಾರಿಗಳ ಗುಣಮಟ್ಟ ಕಾಪಾಡುವಲ್ಲಿ ಎಲ್ಲ ಸದಸ್ಯರೂ ಹದ್ದಿನ ಕಣ್ಣಿಡಬೇಕು. ಗುಣಮಟ್ಟದಲ್ಲಿ ರಾಜಿಯಾದರೆ ಜನರ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಂದು ಎಚ್ಚರಿಸಿದರು.

ನಗರಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದಕ್ಕೆ ಅವಕಾಶ ನೀಡದೆ ಕೆಲಸ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ವಾರ್ಡ್‌ಗಳಿಗೆ ಭೇಟಿ ನೀಡಲಾಗುವುದು ಎಂದರು.

ಮಾಜಿ ಅಧ್ಯಕ್ಷ ಖಲೀಂಉಲ್ಲಾ, ಸದಸ್ಯರಾದ ಶ್ರೀಕಾಂತ್, ಮಂಜುಳಾ, ಶ್ರೀರಾಮಪ್ಪ, ಜಯರಾಮ್, ಆಶ್ರಯ ಸಮಿತಿ ಸದಸ್ಯರಾದ ನಾಗೇಂದ್ರ, ಖಲಂದರ್, ಮುಖಂಡರಾದ ಆರ್.ಆರ್.ರೆಡ್ಡಿ, ವೆಂಕಟರಾಮರೆಡ್ಡಿ, ಅಬ್ದುಲ್ಲಾ ಸೇರಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net