ಕಟೀಲು ದುರ್ಗಾಪರಮೇಶ್ವರಿ ದರ್ಶನಕ್ಕೆ ಇ-ಪಾಸ್ ವ್ಯವಸ್ಥೆ ಜಾರಿ

temple-new
Published on

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೂನ್ 14ರಿಂದ ಭಕ್ತರಿಗೆ ದೇವರ ದರ್ಶನ ಸಿಗಲಿದೆ. ಆದರೆ ವ್ಯವಸ್ಥೆ ಈ ಹಿಂದಿಗಿಂತ ಭಿನ್ನವಾಗಿರಲಿದೆ. ಭಕ್ತರು ದೇವಸ್ಥಾನದ ವೆಬ್‌ಸೈಟ್‌ನಿಂದ ಉಚಿತ ಇ-ಪಾಸ್ ಪಡೆದುಕೊಂಡು ತಮ್ಮ ದರ್ಶನದ ಅವಕಾಶವನ್ನು ಕಾಯ್ದಿರಿಸಿಕೊಳ್ಳಬೇಕಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ದೇವಸ್ಥಾನವೊಂದು ದೇವರ ದರ್ಶನಕ್ಕೆ ಉಚಿತ ಇ-ಪಾಸ್ ವ್ಯವಸ್ಥೆ ಮಾಡುತ್ತಿರುವುದು ವಿಶೇಷ. ದೇವರ ದರ್ಶನಕ್ಕೆ ಸರ್ಕಾರ ಕೆಲ ನಿಯಮಗಳನ್ನು ರೂಪಿಸಿರುವುದರಿಂದ ಇದನ್ನು ಪಾಲಿಸಲು ಕಟೀಲು ದೇವಸ್ಥಾನದಲ್ಲಿ ಕೊಂಚ ಕಷ್ಟವಾಗಿತ್ತು. ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್, ಸರತಿ ಸಾಲಿನ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಸಿದ್ಧತೆ ಅಗತ್ಯವಿತ್ತು.

ಹೀಗಾಗಿ ಜೂನ್ 8ರಂದು ಕಟೀಲು ದೇಗುಲ ಭಕ್ತರಿಗೆ ಬಾಗಿಲು ತೆರೆದಿರಲಿಲ್ಲ. ಅಂತರ ಕಾಪಾಡಲು ದೇಗುಲದ ವಠಾರದಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಚೌಕಾಕಾರವನ್ನು ಬರೆಯಲಾಗಿದೆ. ಇ-ಪಾಸ್‌ಗೂ ಸಿದ್ಧತೆ ಮಾಡಲಾಗಿದ್ದು, ಪ್ರಾಯೋಗಿಕ ಪರೀಕ್ಷೆಯೂ ನಡೆದಿದೆ.

ಭಕ್ತರು ವೆಬ್‌ಸೈಟ್ ಮೂಲಕ ಹೆಸರು ನೋಂದಾಯಿಸಿ ಟಿಕೆಟ್ ಪಡೆಯಬಹುದು. ನಂತರ ದೇಗುಲಕ್ಕೆ ಭೇಟಿ ನೀಡಬಹುದು. ಪ್ರತಿ ಹದಿನೈದು ನಿಮಿಷಕ್ಕೆ ಅರವತ್ತು ಮಂದಿ ದೇವಸ್ಥಾನಕ್ಕೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 7.30ರಿಂದ ಸಾಯಂಕಾಲ 7.30ರತನಕ ಪ್ರವೇಶ ಅವಕಾಶ. ಸ್ಥಳೀಯ ಭಕ್ತರಿಗೆ ಇ-ಪಾಸ್ ಇಲ್ಲದೆ ದೇಗುಲಕ್ಕೆ ಭೇಟಿ ನೀಡಲು ಅವಕಾಶವಿದೆ. ಇವರಿಗೆ ಬೆಳಗ್ಗೆ 6ರಿಂದ 7.30ರವರೆಗಿನ ಸಮಯ. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಅನ್ನಪ್ರಸಾದ ಸೇರಿದಂತೆ ಯಾವುದೇ ಸೇವೆಗಳಿಗೆ ಅವಕಾಶ ಇಲ್ಲ ಎಂದು ದೇಗುಲ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net