ಕಟೀಲು ತಾಯಿಗೆ ಭೂದಾನ ಸೇವೆ

temple new
Published on

ನಿಶಾಂತ್ ಶೆಟ್ಟಿ ಕಿಲೆಂಜೂರು
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಬಾರಿ ಬ್ರಹ್ಮಕಲಶೋತ್ಸವ ಸಂದರ್ಭ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಪೈಕಿ ದೇವಸ್ಥಾನಕ್ಕೆ ಅಗತ್ಯವಾಗಿರುವ ಭೂದಾನ ಸೇವೆಗೆ ಹೆಚ್ಚು ಮಹತ್ವ ನೀಡಲಾಗಿದೆ.
ಕಟೀಲು ದೇವಸ್ಥಾನ ನದಿ ಮಧ್ಯದ ದ್ವೀಪದಲ್ಲಿದ್ದು, ದೇವಸ್ಥಾನದೊಳಗೆ ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ವಸತಿಗೃಹ ಹಾಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದಲೂ ಸಮಸ್ಯೆಯಾಗಿದೆ. ಬಸ್ ನಿಲ್ದಾಣ ಕೂಡ ಕಿರಿದಾಗಿದ್ದು ಭಕ್ತರು ತಮ್ಮ ವಾಹನಗಳನ್ನು ಅಲ್ಲೇ ಪಾರ್ಕಿಂಗ್ ಮಾಡಬೇಕು. ವಿಶೇಷ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಿ ರಸ್ತೆ ಬ್ಲಾಕ್ ಆಗುವುದು ಸಾಮಾನ್ಯ.

ಪ್ರಸಕ್ತ ಬಜ್ಪೆ, ಕಟೀಲು, ಕಿನ್ನಿಗೋಳಿ ಹಾಗೂ ಉಲ್ಲಂಜೆ ರಸ್ತೆಗಳ ವಿಸ್ತರಣಾ ಕಾಮಗಾರಿ ಸಾಗುತ್ತಿದ್ದು, ರಸ್ತೆ ಬ್ಲಾಕ್ ಆಗುವ ಸಮಸ್ಯೆಗೆ ಕೊಂಚ ಮಟ್ಟಿ ಪರಿಹಾರ ಸಿಗಲಿದೆ. ಆದರೆ ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೆ ಪಾರ್ಕಿಂಗ್ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸ್ಥಳಾವಕಾಶ ಹೆಚ್ಚು ಬೇಕಿದೆ. ಈ ನಿಟ್ಟಿನಲ್ಲಿ ರಥಬೀದಿಯೂ ಅಗಲಗೊಳ್ಳುತ್ತಿದೆ. ಇಲ್ಲಿರುವ ಹಳೇ ಕಟ್ಟಡಗಳನ್ನು ಕೆಡವಲಾಗುತ್ತಿದೆ. ಅಂಗಡಿ ಮಾಲೀಕರ ಮನವೊಲಿಸಿ ಹಳೇ ಕಟ್ಟಡಗಳನ್ನು ತೆಗೆಯಲಾಗುತ್ತಿದೆ. ಈ ಮಧ್ಯೆ ದೇವಸ್ಥಾನಕ್ಕೆ ಜಮೀನು ಖರೀದಿಸಿ ನೀಡುವ ಭೂದಾನ ಸೇವೆಯನ್ನು ಭಕ್ತರೇ ಆರಂಭಿಸಿದ್ದಾರೆ. ಬ್ರಹ್ಮಕಲಶೋತ್ಸವಕ್ಕಾಗಿ ಅನೇಕ ಭಕ್ತರು ಸ್ವಯಂಸ್ಫೂರ್ತಿಯಿಂದ ತಮ್ಮ ಜಮೀನನ್ನು ತಾತ್ಕಾಲಿಕ ಪಾರ್ಕಿಂಗ್‌ಗಾಗಿ ನೀಡುತ್ತಿದ್ದಾರೆ.

ಜಮೀನು ಖರೀದಿಸಿ ದೇಗುಲಕ್ಕೆ ನೀಡಲು ಉತ್ಸುಕ
ದೇವಸ್ಥಾನ ಸಮೀಪದಲ್ಲಿರುವ ಸಿತ್ಲದಲ್ಲಿ ಈಗಾಗಲೇ ಆರು ಎಕರೆ ಎಪ್ಪತ್ತೊಂದು ಸೆಂಟ್ಸ್ ಜಮೀನಿನಲ್ಲಿ ಬ್ರಹ್ಮಕಲಶೋತ್ಸವ ಅನ್ನಪ್ರಸಾದ ವಿತರಣೆಗೆ ಚಪ್ಪರ ಹಾಕಲಾಗುತ್ತಿದೆ. ಇಲ್ಲಿರುವ ಜಮೀನನ್ನು ಖರೀದಿಸಿ ದೇವಸ್ಥಾನಕ್ಕೆ ನೀಡಲು ಭಕ್ತರು ಉತ್ಸುಕರಾಗಿದ್ದು, ಎರಡು ಎಕರೆ ಜಮೀನು ಖರೀದಿಗೆ ಚಾಲನೆ ಸಿಕ್ಕಿದೆ. ಕಟೀಲು ದೇವಸ್ಥಾನಕ್ಕೆ ಜಮೀನು ಖರೀದಿಸಿ ನೀಡುವುದಕ್ಕಾಗಿ ಬ್ರಹ್ಮಕಲಶೋತ್ಸವ ಬೆಂಗಳೂರು, ಮುಂಬೈ ಹಾಗೂ ಪುಣೆ ಸಮಿತಿಗಳು ಕಾರ‌್ಯಪ್ರವೃತ್ತವಾಗಿವೆ. ಮಾಣಿಲ ಸ್ವಾಮೀಜಿಯವರು ತನ್ನ ಟ್ರಸ್ಟ್ ವತಿಯಿಂದ ಮೂರು ಸೆಂಟ್ಸ್ ಜಮೀನು ಖರೀದಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅನೇಕ ಭಕ್ತರೂ ಭೂದಾನ ಸೇವೆಗೆ ಮುಂದಾಗಿದ್ದಾರೆ. ಇತರ ಸೇವೆಗಳಂತೆ ಕಟೀಲು ದೇವರಿಗೆ ಭೂದಾನ ನೀಡುವ ಸೇವೆಯೂ ಪುಣ್ಯದಾಯಕ ಎಂದು ಭಕ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದ್ದು, ಸ್ಥಳೀಯರು ಭೂಮಿಯನ್ನು ದೇವಸ್ಥಾನಕ್ಕಾಗಿ ಖರೀದಿಸುವುದಾದರೆ ನೀಡಲು ಒಪ್ಪಿದ್ದಾರೆ. ದೇಗುಲದ ಆಸುಪಾಸಿನವರೂ ‘ದೇವರಿಗಾಗಿ’ ಎಂದು ತಮ್ಮ ಭೂಮಿ ಮಾರಾಟಕ್ಕೆ ಒಪ್ಪುತ್ತಿದ್ದಾರೆ. ಹಾಗಾಗಿ ಭೂದಾನ ಸೇವೆಗೆ ಭಕ್ತರನ್ನು ಪ್ರೇರೇಪಿಸಲು ಸಮಿತಿಗಳು ಮುಂದಾಗುತ್ತಿದ್ದು, ಬ್ರಹ್ಮಕಲಶೋತ್ಸವ ಸಭೆಗಳಲ್ಲೂ ವಿನಂತಿಸಲಾಗುತ್ತಿದೆ.

ಕಟೀಲು ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಭಕ್ತರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗುತ್ತಿದ್ದೇವೆ. ಇಲ್ಲಿನ ವಸತಿಗೃಹ ಮತ್ತು ಪಾರ್ಕಿಂಗ್ ಸಮಸ್ಯೆ ನೀಗಲು ದೇವಳಕ್ಕೆ ಜಮೀನು ಖರೀದಿಸುವ ಯೋಜನೆ ಹಾಕಿಕೊಂಡಿದ್ದೇವೆ.ಸನತ್ ಕುಮಾರ್ ಶೆಟ್ಟಿ, ಕೊಡೆತ್ತೂರುಗುತ್ತು ಮೊಕ್ತೇಸರ, ಶ್ರೀ ಕ್ಷೇತ್ರ ಕಟೀಲುದೇವಸ್ಥಾನಕ್ಕೆ 15 -20 ಎಕರೆಯಷ್ಟು ಜಮೀನು ಖರೀದಿಗೆ ಚಿಂತಿಸಲಾಗಿದ್ದು, ಕಾನೂನುಗಳ ಕಾರಣಕ್ಕೆ ದೇವಸ್ಥಾನವೇ ನೇರವಾಗಿ ಜಮೀನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಭಕ್ತರೇ ಸ್ಥಳ ಖರೀದಿಸುವ ಯೋಜನೆಗೆ ಮುಂದಾಗಿದ್ದಾರೆ. ಕಟೀಲು ದೇವರಿಗೆ ಭೂಮಿ ಖರೀದಿಸುವ ಕಾರ‌್ಯಕ್ಕೆ ಕಾಣಿಕೆ ನೀಡಿದರೆ ತಮ್ಮ ಭೂಮಿಯೂ ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಈ ಭೂದಾನ ಸೇವೆಗೆ ಹೆಚ್ಚು ಮಹತ್ವ ಬರುತ್ತಿದೆ. ಭಕ್ತರು ಈ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಈ ಸೇವೆಗೆ ಮುಂದಾಗುತ್ತಿದ್ದಾರೆ.ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು, ಕಟೀಲಿನ ಭಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net