ಸಾರ್ವಜನಿಕರ ತಲೆಬೇನೆ ಹೆಚ್ಚಿಸಿದ ಇ-ಖಾತೆ!

ಚಿಕ್ಕಬಳ್ಳಾಪುರ ನಗರಸಭೆ ಕಚೇರಿ
CMC chikkaballapura
ಚಿಕ್ಕಬಳ್ಳಾಪುರ ನಗರಸಭೆ ಕಚೇರಿ
Published on

ಹಳೇ ಆಸ್ತಿಗಳಿಗೆ ದಾಖಲೆಯಿದ್ದರೂ ತಾಂತ್ರಿಕ ಸಮಸ್ಯೆ, ಕುಂಟು ನೆಪ ಹೇಳುವ ಸಿಬ್ಬಂದಿ



ಚಿಕ್ಕಬಳ್ಳಾಪುರ: ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಳೇ ಆಸ್ತಿ ಜಾಗಗಳಿಗೆ ಸಂಬಂಧಿಸಿದಂತೆ ಇ-ಖಾತೆ ಪಡೆಯುವುದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿದೆ.
ಹೌದು! ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಕಚೇರಿಯ ದಾಖಲೆ ಪುಸ್ತಕಗಳಲ್ಲಿ ಖಾತೆ ಸಂಖ್ಯೆ ಮತ್ತು ಮಾಹಿತಿ ನಮೂದಾಗಿ, ಮಾಹಿತಿ ಲಭ್ಯವಿದ್ದರೂ ಅಧಿಕಾರಿಗಳು ವಿದ್ಯುನ್ಮಾನ ಖಾತೆ (ಇ-ಖಾತೆ) ಕೊಡುತ್ತಿಲ್ಲ. ಹೊಸ ನಿಯಮಗಳ ಕುಂಟುನೆಪ ಹೇಳಿ ಸತಾಯಿಸುತ್ತಿರುವ ಆರೋಪ ಕೇಳಿ ಬರುತ್ತಿವೆ. ಪ್ರಸ್ತುತ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆದ ಬಡಾವಣೆಗಳಲ್ಲಿನ ನಿವೇಶನ ಮತ್ತು ಮನೆಗಳಿಗೆ ಮಾತ್ರ ತ್ವರಿತವಾಗಿ ಇ-ಖಾತೆ ನೀಡಲಾಗುತ್ತಿದೆ.

ಅನುಮೋದನೆ ನಿರೀಕ್ಷೆ
ಚಿಕ್ಕಬಳ್ಳಾಪುರ ನಗರ ಸೇರಿ ವಿವಿಧ ಬಡಾವಣೆಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಸ್ಥಳೀಯ ನಿವಾಸಿಗಳು ಇ-ಖಾತೆಗಾಗಿ ನಗರ ಯೋಜನಾ ಪ್ರಾಧಿಕಾರ ಮತ್ತು ನಗರಸಭೆಗೆ ಅಲೆಯುತ್ತಿದ್ದಾರೆ. ಅನೇಕ ಬಡಾವಣೆಗಳಿಗೆ ಅನುಮೋದನೆ ಪಡೆಯುವ ನಿರೀಕ್ಷೆಯಲ್ಲಿ ಸಾಕಷ್ಟು ಕಡೆ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ನಗರ ವ್ಯಾಪ್ತಿಯ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶದ ಸಂಯೋಜನೆಗೆ ನಗರಾಭಿವೃದ್ಧಿ ಇಲಾಖೆ ಸಮ್ಮತಿ ನೀಡಿದೆ. ಸ್ಥಿರಾಸ್ತಿ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು, ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ನೋಂದಾಯಿಸಲು ಆದೇಶಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ತಂತ್ರಾಂಶದಿಂದಲೇ ಅಆಸ್ತಿ ಮಾಹಿತಿ ಪಡೆಯುವುದು ಕಡ್ಡಾಯ
ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ 2006ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ತಂತ್ರಾಂಶವನ್ನು, ಜಮೀನಿನ ಸರ್ವೇ ನಕ್ಷೆ (ಸ್ಕೆಚ್)-ನಮೂನೆ 11ಇ ಇರುವ ಮೋಜಣಿ ತಂತ್ರಾಂಶದೊಂದಿಗೆ ಹಾಗೂ ಕಾವೇರಿ ತಂತ್ರಾಂಶವನ್ನು 2016ರಿಂದ ಗ್ರಾಪಂ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಇ-ಸ್ವತ್ತು ತಂತ್ರಾಂಶವನ್ನು ಸಂಯೋಜನೆಗೊಳಿಸಿದೆ. ಇದನ್ನು ಹೊರತು ಪಡಿಸಿದಂತೆ ನಗರ ಪ್ರದೇಶಗಳಲ್ಲಿನ ಕೃಷಿಯೇತರ ಆಸ್ತಿಗಳಿಗೆ ಇ-ಆಸ್ತಿ (ತಂತ್ರಾಂಶ) ರೂಪಿಸಿದ್ದು, ಇದನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದೊಂದಿಗೆ ಪ್ರಾಯೋಗಿಕವಾಗಿ ರಾಮನಗರ ಮತ್ತು ಕನಕಪುರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಸಂಯೋಜಿಸಲಾಗಿತ್ತು. ಇದು ಯಶಸ್ವಿಯಾಗಿದೆ. ಇದರಿಂದ ಸೆ.23ರಿಂದ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಎಲ್ಲ ಉಪನೋಂದಣಿ ಕಚೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಯನ್ನು ನೋಂದಾಯಿಸಲು ಆಸ್ತಿ ಮಾಹಿತಿಯನ್ನು ಕಡ್ಡಾಯವಾಗಿ ಇ-ಆಸ್ತಿ ತಂತ್ರಾಂಶದಿಂದಲೇ ಪಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಹಣ ಸಂಪಾದನೆ ಮಾರ್ಗ
ಹೊಸದಾಗಿ ಇ-ಖಾತೆ ನೀಡುವ ಪ್ರಕ್ರಿಯೆ ಕೆಲ ಸಿಬ್ಬಂದಿಗೆ ಹಣ ಸಂಪಾದನೆಯ ಮಾರ್ಗವಾಗಿದೆ. ಕಾನೂನು ನಿಯಮಗಳು ಮತ್ತು ಇತರ ದಾಖಲೆಗಳ ನೆಪದಲ್ಲಿ ಕಾಲಹರಣ ಮಾಡುತ್ತಿದ್ದು, ತ್ವರಿತ ಕೆಲಸಕ್ಕೆ ಇಂತಿಷ್ಟು ಲೆಕ್ಕದಲ್ಲಿ ವಸೂಲಿ ಮಾಡಲಾಗುತ್ತಿದೆ. ದೊಡ್ಡ ಕಟ್ಟಡ ಮಾಲೀಕರು ಕೇಳಿದಷ್ಟು ಕೊಟ್ಟು ಕೆಲಸ ಮುಗಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಎಲ್ಲ ದಾಖಲೆಗಳು ನಿಯಮಾನುಸಾರ ಇದ್ದರೂ ಇ-ಖಾತೆ ಮಾಡಿಸಿಕೊಳ್ಳಲು ಹಣ ಕೊಡಬೇಕು ಎನ್ನುವಂತಾಗಿದೆ.

ಹಳೇ ಬಡಾವಣೆ ಸಮಸ್ಯೆ
ಹಿಂದೆ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗಿ, ತಲೆ ಎತ್ತಿರುವ ಬಡಾವಣೆಗಳು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಆಸ್ತಿ ಖಾತೆ, ತೆರಿಗೆ ಸೇರಿ ಇತರ ದಾಖಲೆ ಹೊಂದಿವೆ. ಈಗಾಗಲೇ ಮನೆಗಳು ನಿರ್ಮಾಣವಾಗಿ ಜನರೂ ನೆಲೆಸಿದ್ದಾರೆ. ಆದರೆ, ಈ ಹಿಂದೆ ಪ್ರಾಧಿಕಾರದ ಅನುಮೋದನೆ ಪಡೆಯದ ಹಿನ್ನೆಲೆಯಲ್ಲಿ ಹಳೇ ಜಾಗಗಳಿಗೂ ಇ-ಖಾತೆ ನೀಡುತ್ತಿಲ್ಲ. ಇದರಿಂದ ಆಸ್ತಿ ವರ್ಗಾವಣೆ, ಮಾರಾಟ, ಬ್ಯಾಂಕ್ ಸಾಲ ಪಡೆಯುವುದು ಮತ್ತಿತರ ವ್ಯವಹಾರಗಳಿಗೆ ತೊಡಕಾಗಿದೆ.

ಇ-ಖಾತಾ ಸಂಯೋಜನೆ ಅನುಕೂಲ
್ಞ ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ವಂಚನೆ ತಡೆಯುವುದು.
್ಞ ಇ-ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯ.
್ಞ ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ, ಕಾನೂನು ತೊಂದರೆಗಳನ್ನು ತಪ್ಪಿಸುವುದು.

ಜಿಲ್ಲೆಯಲ್ಲಿ ನಗರದ ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ಕೃಷಿಯೇತರ ಜಾಗಗಳಿಗೆ ಸಂಬಂಧಿಸಿದಂತೆ ಇ-ಆಸ್ತಿ ಸಂಯೊಜನೆಯ ಸದುಪ ಯೋಗವನ್ನು ಸಾರ್ವಜನಿಕರು ಪಡೆದು ಕೊಳ್ಳಬೇಕು.

-ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ

ನಗರಸಭೆ ಆಸ್ತಿ ತೆರಿಗೆ ಪುಸ್ತಕದಲ್ಲಿ ಮಾಹಿತಿ, ಅಸೆಸ್‌ಮೆಂಟ್ ಸೇರಿ ಅಗತ್ಯ ದಾಖಲೆಗಳಿದ್ದರೂ, ಹಲವು ವರ್ಷಗಳಿಂದಲೂ ತೆರಿಗೆ ಪಾವತಿಸುತ್ತಿದ್ದರೂ, ಮನೆಯ ಜಾಗಕ್ಕೆ ಇ-ಖಾತೆ ನೀಡುತ್ತಿಲ್ಲ. ಸಿಬ್ಬಂದಿ ತಾಂತ್ರಿಕ ನೆಪ ಹೇಳುತ್ತಿದ್ದಾರೆ. ಲಿಖಿತ ದಾಖಲೆಗಳನ್ನು ವಿದ್ಯುನ್ಮಾನ ದಾಖಲೆಯನ್ನಾಗಿ ಪರಿವರ್ತಿಸಿ ಕೊಡಲು ಏನು ಸಮಸ್ಯೆ? ಹಣ ಕೊಟ್ಟವರಿಗೆ ಮಾತ್ರ ಒಳಗೊಳಗೆ ದಾಖಲೆ ನೀಡಲಾಗುತ್ತಿದೆ.
- ಸೀನಪ್ಪ ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net