ಪೆ.2ಕ್ಕೆ ಡಾ.ಎಚ್‌ಎನ್ ಶತಮಾನೋತ್ಸವ

WEB123
Published on

ಸಮಾರಂಭಕ್ಕೆ ಚಾಲನೆ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಷಪೂರ್ತಿ ಕಾರ್ಯಕ್ರಮ

ಗೌರಿಬಿದನೂರು: ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಹಾಗೂ ಅವರು ಓದಿದ ಮಾಧ್ಯಮಿಕ ಶಾಲೆಯ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ತಿಳಿಸಿದರು.

ಗೌರಿಬಿದನೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸೂರಿನಲ್ಲಿರುವ ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆ 1920ರಲ್ಲಿ ಪ್ರಾರಂಭವಾಗಿದ್ದು, ಶಿಕ್ಷಣ ಹಾಗೂ ವೈಚಾರಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರು ಅದೇ ವರ್ಷದಂದು ಗ್ರಾಮದಲ್ಲಿ ಜನಿಸಿದರು. 2020ರಲ್ಲಿ ಶಾಲೆ ಹಾಗೂ ನರಸಿಂಹಯ್ಯನವರ ಶತಮಾನೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಕರೊನಾ ಹಾಗೂ ಇತರ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. ಪ್ರಸಕ್ತ ಜ.31ರಂದು ಶಾಲೆ ಶತಮಾನೋತ್ಸವಕ್ಕೆ ದಿನಾಂಕ ನಿಗಡಿಪಡಿಸಲಾಗಿತ್ತಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯದೊತ್ತಡದಲ್ಲಿರುವುದರಿಂದ ಫೆ.2ಕ್ಕೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದರು.

ಮುಖ್ಯಮಂತ್ರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದು, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಡಾ.ಕೆ.ಸುಧಾಕರ್ ಮತ್ತಿತರರು ಭಾಗವಹಿಸಲಿದ್ದಾರೆ. ಮುಖ್ಯ ಭಾಷಣಕಾರ ತಾಲೂಕಿನವರೇ ಆದ ಸಾಹಿತಿ ಹಂಪ ನಾಗರಾಜಯ್ಯ ಭಾಗವಹಿಸಲಿದ್ದಾರೆ ಎಂದರು.

ಕುಗ್ರಾಮ ಹೊಸೂರಿನಲ್ಲಿ ಜನಿಸಿದ ಡಾ.ಎಚ್.ನರಸಿಂಹಯ್ಯ ಅವರು ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಸಾಗಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು. ತಾವು ಅನುಭವಿಸಿದ ಕಷ್ಟವನ್ನು ಗ್ರಾಮದ ಮಕ್ಕಳು ಅನುಭವಿಸಬಾರದು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎಂದು ಹೇಳುವ ಮೂಲಕ ಜನರಲ್ಲಿ ವೈಚಾರಿಕತೆಯ ಪ್ರಜ್ಞೆ ಬಿತ್ತಿದರು. ಆದ್ದರಿಂದ 2025ರ ವರ್ಷಪೂರ್ತಿ ಅವರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ನಡೆಸಿ ಜನಜಾಗೃತಿ ಮೂಡಿಸುವ ಹಾಗೂ ಅವರ ಸಂದೇಶಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನು ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಎಚ್.ಎನ್ ಅಭಿಮಾನಿ ಬಳಗ ಮಾಡಲಿದೆ ಎಂದರು.

ಸಂಘದ ಗೌರವಾಧ್ಯಕ್ಷ ಮಾನಸ ಅಸ್ಪತ್ರೆ ವೈದ್ಯ ಡಾ.ಶಶಿಧರ್ ಮಾತನಾಡಿ, ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಲ್ಲಿ ಎಚ್.ನರಸಿಂಹಯ್ಯ ಅವರ ಶಿಷ್ಯರಿದ್ದಾರೆ. ಅವರೆಲ್ಲರೂ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸಮಿತಿ ಕಾರ್ಯದರ್ಶಿ ರಾಮಕೃಷ್ಣ, ವಕೀಲ ಎಚ್.ಎಲ್.ವೆಂಕಟೇಶ್, ನಯಾಜ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net