ಬೆಂಗಳೂರಿನ ಓಂಕಾರಾಶ್ರಮದಲ್ಲಿವೆ ದ್ವಾದಶ ಜ್ಯೋತಿರ್ಲಿಂಗಗಳು !

Omkarashrama
Published on

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’

ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಅಂತಹ ಜ್ಯೋತಿರ್ಲಿಂಗಗಳನ್ನು ಒಂದೇ ಕಡೆಯಲ್ಲಿ ಪ್ರತಿಷ್ಠಾಪಿಸಿರುವ ಬೆಂಗಳೂರಿನ ಓಂಕಾರಾಶ್ರಮದ ಕುರಿತು ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ಮೂಲ ದ್ವಾದಶ ಜ್ಯೋತಿರ್ಲಿಂಗಗಳು ದೇಶದ ವಿವಿಧ ಪ್ರಾಂತ್ಯಗಳಲ್ಲಿದ್ದು, ವಯೋಸಹಜ ನಿಶ್ಯಕ್ತಿ, ಆರ್ಥಿಕ ಸ್ಥಿತಿ ಇತ್ಯಾದಿ ಕಾರಣಗಳಿಂದ ಎಲ್ಲ ಕ್ಷೇತ್ರಗಳ ದರ್ಶನ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಅಂತಹ ಆಸ್ತಿಕ ಬಂಧುಗಳಿಗೆ ಹತ್ತಿರದಲ್ಲೆ 12 ಜ್ಯೋತಿರ್ಲಿಂಗಗಳನ್ನು ಒಂದೇ ಸ್ಥಳದಲ್ಲಿ ದರ್ಶನ ಮಾಡಿಸಬೇಕೆಂಬ ಸದುದ್ದೇಶದಿಂದ ಸ್ಥಾಪಿತಗೊಂಡಿರುವ ಕ್ಷೇತ್ರ ಓಂಕಾರಾಶ್ರಮ.

ಬೆಂಗಳೂರಿನ ಕೆಂಗೇರಿ ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀನಿವಾಸಪುರದ ಓಂಕಾರ ಹಿಲ್ಸ್‌ನಲ್ಲಿರುವ ಓಂಕಾರಾಶ್ರಮದ ಸಂಸ್ಥಾಪಕರು ಶ್ರೀ ಮಧುಸೂಧನಾನಂದ ಪುರಿ ಸ್ವಾಮೀಜಿ. 1995ರಲ್ಲಿ ಸ್ಥಾಪನೆಗೊಂಡಿರುವ ಆಶ್ರಮದ ಪ್ರತ್ಯೇಕ ಗರ್ಭಗುಡಿಯಲ್ಲಿ 12 ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಲಾಗಿದೆ. ಶಿವಲಿಂಗಗಳ ಕೆಳಗೆ ಸಾವಿರಾರು ಸಂಖ್ಯೆಯ ನರ್ಮದಾ ಬಾಣಲಿಂಗಗಳನ್ನು ಸ್ಥಾಪಿಸಲಾಗಿದ್ದು, ಆಗಮಿಸುವ ಭಕ್ತರ ಮನಸ್ಸನ್ನು ಏಕಾಗ್ರಗೊಳಿಸುವ ವೈಜ್ಞಾನಿಕ ಶಕ್ತಿ ಹೊಂದಿವೆ. ಹಾಗೂ ನಗರದ ಒತ್ತಡದ ವಾತಾವರಣದಿಂದ ಮುಕ್ತವಾಗಿರುವ ಓಂಕಾರಾಶ್ರಮವು ಧಾರ್ಮಿಕ, ಆಧ್ಯಾತ್ಮಿಕ ಪರಿಸರವನ್ನು ಪೂರ್ಣವಾಗಿ ಸೃಷ್ಟಿಸಿದ್ದು, ಭೇಟಿ ನೀಡುವವರಿಗೆ ಮಾನಸಿಕ ನೆಮ್ಮದಿ ನೀಡುತ್ತಿದೆ. ವಿಶೇಷವಾಗಿ ಶಿವರಾತ್ರಿಯಂದು ಎಲ್ಲ ಶಿವಲಿಂಗಗಳಿಗೆ ಅಭಿಷೇಕ, ಅಲಂಕಾರ, ಪೂಜೆ ನೆರವೇರಲಿದ್ದು, ಸಾವಿರಾರು ಜನ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net