

ಪ್ರಶಾಂತ ರಿಪ್ಪನ್ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’
ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಕೊನೆಯದಾದ ಶ್ರೀ ಘೃಷ್ಣೇಶ್ವರ ಮಹಾದೇವ ಮಂದಿರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಘೃಷ್ಣೇಶ್ವರವು ಕೊನೆಯದು. ಮಹಾರಾಷ್ಟ್ರದ ಸಾಂಭಾಜಿನಗರ ಜಿಲ್ಲಾ ಕೇಂದ್ರದಿಂದ 30ಕಿ.ಮೀ. ದೂರದಲ್ಲಿದ್ದು, ವಿಶ್ವವಿಖ್ಯಾತ ಎಲ್ಲೋರ ಗುಹಾಂತರ ದೇವಾಲಯಗಳಿಂದ ಕೇವಲ 1ಕಿ.ಮೀ. ಅಂತರದಲ್ಲಿದೆ. ದೆಹಲಿ ಸುಲ್ತಾನರ ದಾಳಿಗೆ ಒಳಗಾದ ದೇವಾಲಯವು ವೆರೂಲ್ ರಾಜರಿಂದ ಪುನರ್ ಜೀರ್ಣೋದ್ಧಾರಗೊಂಡು, ಈಗಿರುವ ದೇವಾಲಯವು 17ನೇ ಶತಮಾನದಲ್ಲಿ ಅಹಲ್ಯಬಾಯಿ ಹೋಲ್ಕರ್ರಿಂದ ನಿರ್ಮಾಣಗೊಂಡಿದೆ.
ಪೌರಾಣಿಕ ನಂಬಿಕೆ ಪ್ರಕಾರ ದೇವಗಿರಿ ಪರ್ವತದ ಬಳಿ ಸುಧರ್ಮ ಮತ್ತು ಸುದೇಹ ಎಂಬ ದಂಪತಿಗಳಿದ್ದು, ಮಕ್ಕಳಿಲ್ಲದ ಕಾರಣಕ್ಕೆ ಪತ್ನಿಯ ಸಹೋದರಿ ಮಹಾಶಿವಭಕ್ತೆ ಘುಷ್ಮಾಳನ್ನು ಮದುವೆಯಾಗಿ ಪುತ್ರನನ್ನು ಪಡೆಯುತ್ತಾರೆ. ಆದರೆ ಸುದೇಹ ತಂಗಿಯ ಮಗನನ್ನು ಕೊಂದು ಸರೋವರಕ್ಕೆ ಹಾಕುತ್ತಾಳೆ. ಇದರಿಂದ ವಿಚಲಿತಳಾಗದ ಘುಷ್ಮ ಎಂದಿನಂತೆ ಶಿವಪೂಜೆಯಲ್ಲಿ ಮಗ್ನಳಾದಾಗ ಆಕೆಯ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವನು ದುಷ್ಟಬುದ್ದಿಯ ಸುದೇಹಳನ್ನು ಶಿಕ್ಷಿಸಲು ಮುಂದಾಗುತ್ತಾನೆ. ಆಗ ಘುಷ್ಮ ಅಕ್ಕನನ್ನು ಶಿಕ್ಷಿಸದಂತೆ, ಪುತ್ರನನ್ನು ಬದುಕಿಸುವಂತೆ ಹಾಗೂ ಇಲ್ಲಿಯೇ ನೆಲೆಸುವಂತೆ ಬೇಡುತ್ತಾಳೆ. ಅದರಂತೆ ತಥಾಸ್ತು ಎಂದ ಶಿವ ಅಲ್ಲಿ ಜ್ಯೋತಿರ್ಲಿಂಗ ಸ್ವರೂಪದಲ್ಲಿ ನೆಲೆಸಿದ್ದು ಘೃಷ್ಣೇಶ್ವರನೆಂದು ಪ್ರಸಿದ್ಧನಾಗಿದ್ದಾನೆ.
ಸಂಭಾಜಿನಗರದಲ್ಲಿ ವಿಮಾನ ನಿಲ್ದಾಣದಿಂದ 40ಕಿ.ಮೀ. ರಸ್ತೆ ಮಾರ್ಗದ ಮೂಲಕ ದೇವಾಲಯ ತಲುಪಬಹುದು.