

ಚಿಂತಾಮಣಿ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯೆ ಹಾಗೂ ಡಿ ಗ್ರೂಪ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದು, ಪ್ರಕರಣ ಸಂಬಂಧ ಹಲ್ಲೆ ನಡೆಸಿದವರ ವಿರುದ್ಧ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.27ರಂದು ಸಂಜೆ ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ತಾಲೂಕಿನ ಮುರುಗಮಲ್ಲದ ಮಹಿಳೆಗೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಹೋಗುವಂತೆ ವೈದ್ಯೆ ಡಾ. ದಾಕ್ಷಾಯಿಣಿ ಸೂಚಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆ ಆಂಬುಲೆನ್ಸ್‌ಗಳು ಬೇರೆ ರೋಗಿಗಳ ಸೇವೆಗೆ ಹೋಗಿದ್ದರಿಂದ 108ರಲ್ಲಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಆಂಬುಲೆನ್ಸ್ ಬರುವುದು ತಡವಾಗಿದ್ದರಿಂದ ರೋಗಿಯ ತಂದೆ ಸೈಯದ್ ಮುಕ್ರಮ್ ಪಾಷಾ ಹಾಗೂ ಮತ್ತೊಬ್ಬ ಗಲಾಟೆ ಮಾಡಿ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿ ವೈದ್ಯೆ ಡಾ. ದಾಕ್ಷಾಯಣಿ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಆಸ್ಪತ್ರೆ ಡಿ.ಗ್ರೂಪ್ ನೌಕರ ಶ್ರೀನಿವಾಸ್, ವೆಂಕಟೇಶಪ್ಪ ಮತ್ತು ಚಾಲಕ ಮಂಜುನಾಥ್ ಮೇಲೂ ಮುಕ್ರಮ್ ಪಾಷಾ ಹಾಗೂ ಆತನ ಜತೆಯಲ್ಲಿದ್ದ ವ್ಯಕ್ತಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ ನಂತರ ತಡವಾಗಿ ಡಿ.3ರಂದು ನಗರಠಾಣೆಯಲ್ಲಿ ದೂರು ದಾಖಲಿಸಲಾಗಿದೆ.