ಹೆದ್ದಾರಿಯಲ್ಲಿ ಧೂಳು-ಕೆಸರಿನ ಮಜ್ಜನ

Btw_Highway
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬಿ.ಸಿ.ರೋಡಿನಿಂದ ಅಡ್ಡಹೊಳೆಯವರೆಗೆ ಚತುಷ್ಫಥ ಹೆದ್ದಾರಿ ಕಾಮಗಾರಿ ಮೇಲ್ನೋಟಕ್ಕೆ ಬಿರುಸಿನಿಂದ ನಡೆಯುತ್ತಿರುಂತೆ ಕಂಡರೂ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮಳೆಗಾಲದ ಸೀಸನ್ ಮುಗಿದಿದ್ದರೂ ಜಿಲ್ಲೆಯಲ್ಲಿ ಆಗಾಗ ಎಡೆಬಿಡದೆ ಸುರಿಯುವ ಮಳೆ ಕಾಮಗಾರಿಗೆ ಅಡ್ಡಪಡಿಸುತ್ತಿದೆ. ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿರುವುದರಿಂದ ಈ ರಸ್ತೆಯಲ್ಲಿ ನಿತ್ಯ ಪ್ರಯಾಣಿಸುವವರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಕೆಸರು- ಧೂಳಿನ ಅಭಿಷೇಕ

ಹೆದ್ದಾರಿಯಲ್ಲಿ ಕೆಸರು ಹಾಗೂ ಧೂಳಿನ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಮಳೆ ಬಂದರೆ ರಸ್ತೆಯಿಡೀ ಕೆಸರು ತುಂಬಿಕೊಂಡು ಕಂಬಳ ಗದ್ದೆಯಂತಾಗಿ ಬಿಡುತ್ತದೆ. ಬಿಸಿಲು ಕಾಣಿಸಿಕೊಂಡರೆ ಕೆಸರು ಧೂಳು ಆಗುತ್ತದೆ. ಇದರಿಂದಾಗಿ ಮಳೆ ಬಂದರೂ ಸಮಸ್ಯೆ, ಮಳೆ ಇಲ್ಲದಿದ್ದರೂ ಸಮಸ್ಯೆ. ಇದರ ನೇರ ಪರಿಣಾಮ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಾಚಾರಿಗಳ ಮೇಲಾಗುತ್ತಿದೆ. ಮಳೆಯಿರುವಾಗ ವಾಹನಗಳು ಸಂಚರಿಸುವ ವೇಗಕ್ಕೆ ಕೆಸರಿನ ಅಭಿಷೇಕವಾಗುತ್ತದೆ. ಮಳೆಯಿಲ್ಲದಿದ್ದರೆ ನಗರವಿಡೀ ಧೂಳು ತುಂಬಿಕೊಂಡು ಟ್ಯಾಂಕರ್ ಮೂಲಕ ನೀರು ಹಾಕಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಬಿ.ಸಿ. ರೋಡಿನ ಮುಖ್ಯವೃತ್ತ, ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ, ಮಾಣಿ ಹೀಗೆ ಪ್ರಮುಖ ಜಂಕ್ಷನ್‌ಗಳೆಲ್ಲಾ ಕೆಸರು, ಧೂಳಿನಿಂದ ತುಂಬಿಕೊಂಡು ವಾಹನ ಸವಾರರು, ಸಾರ್ವಜನಿಕರ ಜತೆ ಅಂಗಡಿ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿರದೆ ಇರುವುದರಿಂದ ರಸ್ತೆಯಲ್ಲೇ ನೀರು ನಿಂತು ಕೆಸರು ತುಂಬಿಕೊಳ್ಳುತ್ತಿದೆ.

ಉದ್ದಕ್ಕೂ ಇದೆ ಹೊಂಡ-ಗುಂಡಿ

ಕೆಲವೆಡೆ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದೆ. ಫ್ಲೈಓವರ್ ಇರುವ ಕಲ್ಲಡ್ಕ, ಅಂಡರ್‌ಪಾಸ್‌ಗಳಿರುವ ಪಾಣೆಮಂಗಳೂರು, ಮೆಲ್ಕಾರ್, ಮಾಣಿಯಲ್ಲಿ ಇರುವ ಸರ್ವಿಸ್ ರಸ್ತೆಗಳು ಹೊಂಡಗಳ ತಾಣವಾಗಿದೆ. ಬಿ.ಸಿ.ರೋಡಿನಿಂದ ಮಾಣಿಗಿರುವ ಕೇವಲ 13 ಕಿ.ಮೀ ದೂರ ಕ್ರಮಿಸಲು ಒಂದು ಗಂಟೆ ಬೇಕಾಗುತ್ತದೆ. ವಾಹನಗಳನ್ನು ವಾರಕ್ಕೆರಡು ಬಾರಿ ರಿಪೇರಿ ಮಾಡಿಸಿಕೊಳ್ಳ ಬೇಕಾಗುತ್ತದೆ.

ಯಾರಾದರೂ ಅವಸರದಿಂದ ವಾಹನ ನುಗ್ಗಿಸಿದರೆ ಟ್ರಾಫಿಕ್ ಜಾಮ್ ಕಿರಿಕಿರಿ. ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಹಿಟಾಚಿ, ಟಿಪ್ಪರ್‌ಗಳು ಅದೇ ರಸ್ತೆಯಲ್ಲಿ ತಮಗಿಷ್ಟ ಬಂದಂತೆ ಸಂಚರಿಸುತ್ತಿರುವುದರಿಂದ ಆಗಾಗ ಟ್ರಾಫಿಕ್ ಜಾಮ್ ಮಾಮೂಲಾಗಿಬಿಟ್ಟಿದೆ.

ಬಿ.ಸಿ.ರೋಡ್ ನಲ್ಲಿ ನೇತ್ರಾವತಿ ಸೇತುವೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದರೆ, ಪಾಣೆಮಂಗಳೂರು ಅಂಡರ್‌ಪಾಸ್‌ನಲ್ಲಿ ಕಾಮಗಾರಿ ಮಧ್ಯೆಯೇ ವಾಹನಗಳನ್ನು ಒಂದು ಕಡೆಯಿಂದ ಬಿಡಲಾಗುತ್ತಿದೆ. ಮೆಲ್ಕಾರ್ ಅಂಡರ್‌ಪಾಸ್ ಕೆಲಸ ಇನ್ನೂ ಪೂರ್ತಿಯಾಗಿಲ್ಲ. ಕಲ್ಲಡ್ಕದಲ್ಲಿ 2.1 ಕಿಮೀ ಉದ್ದಕ್ಕೆ ಫೈಓವರ್ ನಿರ್ಮಾಣಗೊಳ್ಳುತ್ತಿದೆ. ಮೇಲೆ ಕೆಲಸ ಕೆಳಗಿನಿಂದ ಸಂಚಾರ ಆಗಿದ್ದರಿಂದ ವಾಹನ ಸವಾರರ ಮೇಲೆ ಸಿಮೆಂಟ್ ಹುಡಿ, ಕಲ್ಲಿನ ಪುಡಿಗಳು ಬೀಳುತ್ತಿವೆ.

ಮಾಣಿ ಅಂಡರ್‌ಪಾಸ್ ಕೂಡ ಕೆಲಸ ಪೂರ್ತಿಯಾಗಿಲ್ಲ. ಗುಡ್ಡ ಇರುವಲ್ಲಿ ರಸ್ತೆ ವಿಸ್ತರಣೆ, ಮಣ್ಣು ತುಂಬಿಸಿ ರಸ್ತೆ ಸರಾಗವಾಗಿಸುವ ಕೆಲಸ ಹಲವೆಡೆ ಇನ್ನೂ ವೇಗ ಪಡೆದುಕೊಂಡಿಲ್ಲ.

ಟ್ರೋಲ್ ಆಗುತ್ತಿದೆ ರೋಡ್

ಚತುಷ್ಪಥ ಹೆದ್ದಾರಿಯ ಅವ್ಯವಸ್ಥೆ ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲಿಗರಿಗೆ ಆಹಾರವಾಗಿದೆ. ಯಕ್ಷಗಾನವೊಂದರ ಕಾಮಿಡಿ ತುಣುಕಿನಲ್ಲೂ ಕಲ್ಲಡ್ಕದಿಂದ ಮಾಣಿವರೆಗಿನ ಹೊಂಡ-ಗುಂಡಿ ಹಾಗೂ ಧೂಳು ಹಾಸ್ಯದ ವಸ್ತುವಾಗಿ ವೈರಲ್ ಆಗಿದೆ. ಕಲ್ಲಡ್ಕ ರಸ್ತೆಯಲ್ಲಿ ಸಾಗಲು ಕಂಬಳದ ಕೋಣವನ್ನು ವಾಹನವಾಗಿ ಬುಕ್ ಮಾಡುವ ದೃಶ್ಯ ಇಲ್ಲಿನ ಸ್ಥಿತಿಯನ್ನು ಅಣಿಕಿಸುವಂತಿತ್ತು. ಇತ್ತೀಚೆಗೆ ಮೆಲ್ಕಾರಿನಲ್ಲಿ ಅಂಡರ್‌ಪಾಸ್ ಮೇಲಿಂದ ಬೆಂಕಿಯುಂಡೆ ಬೀಳುತ್ತಿದೆ ಎಚ್ಚರ ಎನ್ನುವ ಶೀರ್ಷಿಕೆಯಡಿ ವೆಲ್ಡಿಂಗ್ ಕಾಮಗಾರಿ ಟ್ರೋಲ್ ಆಗಿತ್ತು.

ರಸ್ತೆಯಂಚಿನ ಜನರಿಗೆ ನರಕಯಾತನೆ

ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಜೀವನ ನರಕ ಸದೃಶವಾಗಿದೆ. ಕೃಷಿಭೂಮಿಗೆ ಮಳೆ ನೀರಿನೊಂದಿಗೆ ರಸ್ತೆಯ ಕೆಸರು ನುಗ್ಗಿ ಕೃಷಿ ನಾಶವಾಗುವ ಭೀತಿ ಎದುರಾಗಿದೆ. ಅನೇಕ ಮನೆಗಳಿಗೆ ಸಂಪರ್ಕಿಸುವ ದಾರಿಗಳು ಕಾಣೆಯಾಗಿವೆ. ಅಂಗಡಿ ವ್ಯಾಪಾರಿ ಮಳಿಗೆಗಳಿಗೆ ಗ್ರಾಹಕರು ಬರಲು ಸರಿಯಾದ ದಾರಿಯಲ್ಲದೆ ವ್ಯವಹಾರ ನಡೆಸಲು ಕಷ್ಟವಾಗುತ್ತಿದೆ. ರಸ್ತೆ ಅಗಲಗೊಳಿಸಲು ಸುತ್ತಮುತ್ತಲಿನ ಜಮೀನು ಅಗೆದ ಕಾರಣ ಅನೇಕ ಮನೆಗಳ ಅಡಿಪಾಯವೇ ಅಲುಗಾಡಲಾರಂಭಿಸಿದೆ.

ಪರ್ಯಾಯ ರಸ್ತೆಗಳ ಅವಲಂಬನೆ

ಬಿ.ಸಿ.ರೋಡು ಮಾಣಿ ಮಧ್ಯೆ ರಸ್ತೆ ತೀರಾ ಅಧ್ವಾನವಾಗಿರುವುದರಿಂದ ಪಾಣೆಮಂಗಳೂರು ಜಂಕ್ಷನ್ ಮೂಲಕ ನರಿಕೊಂಬು, ನೀರಪಾದೆ ರಸ್ತೆಯಲ್ಲಿ ಸಾಗಿ ದಾಸಕೋಡಿಯ ಮೂಲಕ ಹೆದ್ದಾರಿಯನ್ನು ಸಂಪರ್ಕಿಸಿ ಸ್ವಲ್ಪ ಮಟ್ಟಿಗೆ ರಸ್ತೆ ಸಂಕಷ್ಟದಿಂದ ತಪ್ಪಿಸಿಕೊಳ್ಳುತ್ತಾರೆ. ವಿಟ್ಲ, ಸಾಲೆತ್ತೂರು, ಸಜೀಪ, ಮುಡಿಪು ಕಡೆಗೆ ಹೋಗುವವರು ಪಾಣೆಮಂಗಳೂರು ಪೇಟೆ ರಸ್ತೆ ಮೂಲಕ ನಂದಾವರಕ್ಕೆ ಹೋಗಿ ಮಾರ್ನಬೈಲು ಸಂಪರ್ಕಿಸಿ ಮುಂದುವರೆಯುತ್ತಾರೆ. ಕಲ್ಲಡ್ಕ, ಅಮ್ಟೂರಿಗೆ ಹೋಗುವವರು ಈ ರಸ್ತೆಯನ್ನೇ ಅವಲಂಬಿಸುತ್ತಾರೆ. ಬಿ.ಸಿ.ರೋಡಿನಿಂದ ಉಪ್ಪಿನಂಗಡಿಗೆ ಹೋಗುವವರು ಧರ್ಮಸ್ಥಳ ರಸ್ತೆಯಲ್ಲಿ ಮಣಿಹಳ್ಳದವರೆಗೆ ಹೋಗಿ ಅಲ್ಲಿಂದ ಅಜಿಲಮೊಗರು, ಸರಪಾಡಿ ರಸ್ತೆಯ ಮೂಲಕ ಉಪ್ಪಿನಂಗಡಿಗೆ ಹೋಗುತ್ತಾರೆ.

ನಗರವನ್ನು ವಿಭಜಿಸಿದ ಅಂಡರ್‌ಪಾಸ್

ಪಾಣೆಮಂಗಳೂರು, ಮೆಲ್ಕಾರ್, ಮಾಣಿಯಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಈ ಮೂರು ಅಂಡರ್‌ಪಾಸ್‌ಗಳಿಂದ ನಗರ ಇಬ್ಭಾಗವಾದಂತಾಗಿದೆ. ಒಂದು ಭಾಗದ ಜನರಿಗೆ ಇನ್ನೊಂದು ಭಾಗವೇ ಕಾಣುವುದಿಲ್ಲ. ಆ ಭಾಗದಲ್ಲಿ ಏನಾಗುತ್ತಿದೆ ಎನ್ನುವ ಅರಿವೆ ಬಾರದಂತೆ ಅಂಡರ್‌ಪಾಸ್ ತಡೆಗೋಡೆಯಂತೆ ನಿರ್ಮಾಣಗೊಂಡಿದೆ. ಸ್ಥಳೀಯರ ಅಭಿಪ್ರಾಯ ಪಡೆಯದೇ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಮೆಲ್ಕಾರ್‌ನ ಸ್ಥಳೀಯರು ಹಾಗೂ ವ್ಯಾಪಾರಿಗಳು ಮೆಲ್ಕಾರ್ ಸಿಟಿ ಹೋರಾಟ ಸಮಿತಿ ರಚಿಸಿ ಜನಪ್ರತಿನಿಧಿಗಳಿಗೆ ಅಂಡರ್‌ಪಾಸ್ ಬೇಡ ಎಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net