ಡಸ್ಟ್‌ಬಿನ್‌ನಲ್ಲಿ ಬಿದ್ದಿದ್ದಾರೆ ನಾಗೇಂದ್ರ - ಜನಾರ್ದನ ರೆಡ್ಡಿ ವ್ಯಂಗ್ಯ

Sanduru Janardhan Reddy New Home Innogration
ಸಂಡೂರಿನಲ್ಲಿ ಗೃಹ ಪ್ರವೇಶ ಸಂದರ್ಭ ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತರಿಕೇರಿ, ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಇತರರಿದ್ದರು.
Published on

ಸಂಡೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಸತ್ಯ ಹೊರಬಂತು. ಸುಳ್ಳು ಹೇಳಿದ್ದರೆ ಅಧಿಕಾರಿ ಸಾಯುತ್ತಿರಲಿಲ್ಲ, ಸತ್ಯ ಹೇಳಿ ಪ್ರಾಣಬಿಟ್ಟರು ಎಂದು ಗಂಗಾವತಿ ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ಉಪಚುನಾವಣೆ ಹಿನ್ನೆಲೆಯಲ್ಲಿ ಸಂಡೂರಲ್ಲಿ ಮನೆ ಮಾಡಿರುವ ರೆಡ್ಡಿ ಗೃಹ ಪ್ರವೇಶದ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು. ಗೋವಾಕ್ಕೆ ಕರೆದೊಯ್ದು ವಿಡಿಯೋ ಮಾಡಿಸಿ ಹೆದರಿಸಿದ್ದರಿಂದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗೇಂದ್ರ ಏನೇ ಮಾತಾಡಿದರೂ ನಂಬುವ ಸ್ಥಿತಿಯಲ್ಲಿ ಜನರು ಇಲ್ಲ. ಹಗರಣದ ಸಂಪೂರ್ಣ ಮಾಹಿತಿ ಕೊಡುತ್ತೇನೆ. ಸಂಡೂರಿನಲ್ಲಿ ಪ್ರಚಾರಕ್ಕೆ ನಾಗೇಂದ್ರ, ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ.. ಯಾರೇ ಬರಲಿ, ಎಲ್ಲರ ಹಣೆಬರಹ ಜನರಿಗೆ ಗೊತ್ತಿದೆ ಎಂದರು.

ಸಂಡೂರಿನಲ್ಲಿ ಸಂಸದ ಈ.ತುಕಾರಾಮ್ ಏನೂ ಅಭಿವೃದ್ಧಿ ಮಾಡಿಲ್ಲ. ಸಂಡೂರು-ಹೊಸಪೇಟೆ, ತೋರಣಗಲ್-ಕೂಡ್ಲಿಗಿ, ಕುಮಾರಸ್ವಾಮಿ ದೇವಸ್ಥಾನ ರಸ್ತೆ ಮಾಡಿಸಿದ್ದು ಬಿಜೆಪಿ ಅವಧಿಯಲ್ಲಿ. ಆದರೆ, ತುಕಾರಾಮ್ ತಾನೇ ಮಾಡಿದ್ದು ಎಂಬಂತೆ ಬಿಂಬಿಸುತ್ತಿದ್ದಾರೆ. ಗಣಿ ಮಾಲೀಕರಿಂದ 100ಕ್ಕೆ ಆರು ರೂ. ಕಡಿತ ಮಾಡೋದಕ್ಕೆ ಕ್ರಮ ಕೈಗೊಂಡೆ. ಅಂದು ನನ್ನ ಮೇಲೆ ಗಣಿ ಮಾಲೀಕರು ಸಿಟ್ಟಾಗಿದ್ದರು. ನಾನು ಆರು ರೂ. ಕಡಿತ ಮಾಡಲು ಹೊರಟಿದ್ದು ಗಣಿಬಾಧಿತ ಪ್ರದೇಶ ಅಭಿವೃದ್ಧಿಗಾಗಿ ಎಂದರು.

ನಾಗೇಂದ್ರ ಬಗ್ಗೆ ಮಾತಾಡೋದು ತಪ್ಪು. ಅವರು ಈಗಾಗಲೇ ಡಸ್ಟ್‌ಬಿನ್‌ನಲ್ಲಿ ಬಿದ್ದಿದ್ದಾರೆ. ಅವರನ್ನು ಕಾಂಗ್ರೆಸ್ ಸಂಪೂರ್ಣ ಬಳಕೆ ಮಾಡಿಕೊಂಡಿದೆ. ಕಾಂಗ್ರೆಸ್ ತಾನು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಪಡುತ್ತಿದೆ. ಹೀಗಾಗಿ ನಾಗೇಂದ್ರ ಕಣ್ಣೀರು ಹಾಕಿದ್ದಾರೆ. ಬಿಜೆಪಿಯಿಂದ 19 ಆಕಾಂಕ್ಷಿಗಳಿದ್ದಾರೆ. ಇನ್ನೆರಡು ದಿನದಲ್ಲಿ ಟಿಕೆಟ್ ಫೈನಲ್ ಆಗುತ್ತದೆ ಎಂದರು.

ಮುಖಂಡ ಕೆ.ಎಸ್.ದಿವಾಕರ್, ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಗೌಡ, ಉಡೇದ ಸುರೇಶ್, ಬಿಜೆಪಿ ತಾಲೂಕು ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ರಾಮಘಡ ರಘು, ಎಂ.ತಿರುಮಲ, ಕಾರ್ಯಾಲಯ ಕಾರ್ಯದರ್ಶಿ ದರೋಜಿ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net