ಬಳ್ಳಾರಿ : ವಾಲ್ಮೀಕಿ ಹಗರಣದ ಪ್ರಕಣದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಅಂಶಗಳು ಬಯಲಿಗೆ ಬರಲಿವೆ ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಗರಣದ ಆರೋಪ ಎದುರಿಸುತ್ತಿರುವ ಶಾಸಕ ಬಿ. ನಾಗೇಂದ್ರ ಸೇರಿದಂತೆ ಇತರರು ಶಿಕ್ಷೆ ಅನುಭವಿಸಲಿದ್ದಾರೆ. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿದ ನಿಗಮದಲ್ಲಿಯೇ ಆ ಸಮುದಾಯದ ವ್ಯಕ್ತಿಯೇ ದ್ರೋಹ ಎಸಗಿದ್ದಾರೆ. ಈ ಪ್ರಕರಣದ ಆರಂಭದಲ್ಲಿ ನಾಗೇಂದ್ರ ಬ್ಯಾಂಕ್‌ನವರು ಮಾಡಿದ ಹಗರಣ ಎಂದು ಹೇಳಿದ್ದು ನಾಚಿಕೆಗೇಡಿನ ವಿಷಯವಾಗಿದೆ. ನಿಗಮದ ಹಗರಣದ ಹಣದಲ್ಲಿ ವಿಮಾನ ಪ್ರಯಾಣದ ಭತ್ಯೆ, ಕಾರು ಖರೀದಿ ಮಾಡಿದ್ದಾರೆ ಎಂದರು.
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತಕ್ಕೆ 200 ರೂ. ನಂತೆ ಮೂವರ ಶಾಸಕರ ಮೂಲಕ ಒಟ್ಟಾರೆ 20 ಕೋಟಿ ರೂ. ಹಣವನ್ನು ಚುನಾವಣೆಗೆ ಬಳಸಲಾಗಿದೆ ಎಂಬುದಾಗಿ ಇಡಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಎ1 ಆರೋಪಿಯಾಗಿದ್ದು, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಜೈಲು ಸೇರುವುದು ಗ್ಯಾರಂಟಿ ಎಂದರು.ಹಿರೋಯಿಸಂ ತೋರಿಸುವ ಪ್ರಯತ್ನದಲ್ಲಿ ವಿನಾಕಾರಣ ಹುಚ್ಚುಚ್ಚು ಮಾತನಾಡುವುದು ಸರಿಯಲ್ಲ. ಯುಪಿಎ ಅವಧಿಯಲ್ಲಿ ನಾಗೇಂದ್ರ ಎರಡು ವರ್ಷ ಜೈಲಿನಲ್ಲಿದ್ದ ವಿಷಯವನ್ನು ಮರೆಯಬಾರದು ಎಂದು ವ್ಯಂಗವಾಡಿದರು. ಸಂಡೂರು ಉಪ ಚುನಾವಣೆ ದಿನಾಂಕ ಘೋಷಣೆಗೆ ಒಂದು ಮುನ್ನವೇ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ 1200 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಚುನಾವಣೆಯ ಗಿಮಿಕ್ ಆಗಿದೆ. ಇದರ ಬಗ್ಗೆ ಬಹಿರಂಗ ಸಮಾವೇಶ ಆಯೋಜಿಸಿ ಕ್ಷೇತ್ರದ ಮತದಾರರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.