

ಎಂ.ಎಸ್.ರವಿಕುಮಾರ್ ಕೆ.ಆರ್.ನಗರ
ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಕಳಪೆ ಕಾಮಗಾರಿಯಿಂದ ಸಮಸ್ಯೆ ಎದುರಾಗಿದ್ದು, ಗ್ರಂಥಾಲಯ ಹಾಗೂ ಆವರಣದಲ್ಲಿ ಧೂಳು ಆವರಿಸಿದೆ.
ನಿತ್ಯ ನೂರಾರು ಓದುಗರು ಗ್ರಂಥಾಲಯಕ್ಕೆ ಆಗಮಿಸುತ್ತಿದ್ದು, ಧೂಳಿನಿಂದ ಕಿರಿಕಿರಿ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳು, ಮಕ್ಕಳು, ಹಿರಿಯರು ಗ್ರಂಥಾಲಯಕ್ಕೆ ನಿತ್ಯ ಆಗಮಿಸುತ್ತಾರೆ. ಆದರೆ, ಕಳಪೆ ಕಾಮಗಾರಿಯಿಂದ ಆವರಣ ಹಾಗೂ ಇಡೀ ವಾತಾವರಣ ಧೂಳಿನಿಂದ ಆವೃತವಾಗಿದೆ. ಪುಸ್ತಕಗಳು, ರ‌್ಯಾಕ್‌ಪೂರ್ತಿ ಧೂಳಿನಿಂದ ಕೂಡಿದ್ದು, ಸಾರ್ವಜನಿಕರು ಧೂಳು ಕುಡಿಯುವಂತಾಗಿದೆ.
7 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ನವೀಕರಣ ಹಾಗೂ ಮುಂಭಾಗದ ಆವರಣಕ್ಕೆ ಕಾಂಕ್ರೀಟ್, ನಾಮಫಲಕ ಸೇರಿದಂತೆ ಇತರ ಕಾಮಗಾರಿ ನಡೆಸಿದ್ದು, ಇದರ ಜವಾಬ್ದಾರಿಯನ್ನು ಕೆಆರ್‌ಡಿಎಲ್ ಸಂಸ್ಥೆ ವಹಿಸಿತ್ತು, ಆದರೆ, ಗುಣಮಟ್ಟದ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ ಧೂಳಿನ ಸಮಸ್ಯೆಗೆ ಎದುರಾಗಿದೆ.
ಗುಣಮಟ್ಟದ ಸಿಮೆಂಟ್, ಎಂ ಸ್ಯಾಂಡ್ ಬಳಸದೆ ಇರುವುದು ಹಾಗೂ ಸರಿಯಾದ ರೀತಿಯಲ್ಲಿ ಕ್ಯೂರಿಂಗ್ ಮಾಡದೆ ಇರುವುದರಿಂದ ಆವರಣದಲ್ಲಿ ಧೂಳು ಉಂಟಾಗಲು ಕಾರಣವಾಗಿದೆ ಎನ್ನಲಾಗಿದೆ. ಗ್ರಂಥಾಲಯದ ಒಳಗೆ ಪ್ರವೇಶಿಸಿದ ಕೂಡಲೇ ಧೂಳಿನ ಅಭಿಷೇಕ ಉಂಟಾಗುತ್ತಿದೆ. ಇಲ್ಲಿರುವ ಪುಸ್ತಕಗಳು, ಡ್ರಾಯರ್, ರ‌್ಯಾಕ್, ಪತ್ರಿಕೆ, ಬೆಂಚು, ಕುರ್ಚಿಗಳೆಲ್ಲ ಧೂಳಿನಿಂದ ಆವೃತ್ತವಾಗಿದೆ.
ಈ ಬಗ್ಗೆ ಓದುಗರು ಹಾಗೂ ಶಾಖಾ ಗ್ರಂಥಪಾಲಕರು ಕೂಡ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಇಲಾಖೆಗಳ ಮೇಲಾಧಿಕಾರಿಗಳು ಗಮನಹರಿಸಿ ಕಳಪೆ ಕಾಮಗಾರಿಯ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಇತ್ಯರ್ಥಪಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.