

ಬಾಗಲಕೋಟೆ: ಕ್ರೀಡಾಪಟುಗಳು ತಮಗಿಂತ ಅನೇಕ ಪ್ರಶಸ್ತಿಗಳನ್ನು ಪಡೆದು ವಿಜೇತರಾದ ಕ್ರೀಡಾಪಟುಗಳ ಸಾಧನೆಗಳನ್ನು ನೆನಪಿಸಿಕೊಂಡು ನಾವು ಆ ಗುರಿ ತಲುಪಬೇಕೆಂಬ ಹಂಬಲದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳೆಯುವ ವಯಸ್ಸು, ಧನಿವರಿಯದ ವಯಸ್ಸಾಗಿದ್ದು, ಇಂತಹ ಸಮಯದಲ್ಲಿ ಶ್ರಮವಹಿಸಿ ಸಾಧನೆ ಮಾಡಲು ಉತ್ತಮ ಅವಕಾಶವಿದೆ. ಯುವಕರಾಗಿರುವದರಿಂದ ಮನೋಬಲ ಬೆಳೆಯುವದಲ್ಲದೇ ದೇಹ ಬಲಾಡ್ಯವಾಗಲು ಸಾಧ್ಯ. ಸೋಲೆ ಇರಲಿ ಗೆಲುವೆ ಇರಲಿ, ಕ್ರೀಡೆಗಳಲ್ಲಿ ಭಾಗವಹಿಸಿ ಸೋಲು ಮತ್ತು ಗೆಲುವು ಪಡೆದಾಗಲೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಸೋತವರು ಸೋಲನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮುಂಬರುವ ದಿನಗಳಲ್ಲಿ ಗೆಲ್ಲುವ ಪ್ರಯತ್ನ ಮಾಡಬೇಕು. ಕ್ರೀಡಾಪಟುಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸರ್ಕಾರ ಕ್ರೀಡಾಪಟುಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿಜೇತರು ರಾಜ್ಯ ಮಟ್ಟದಲ್ಲಿಯೂ ಕೂಡಾ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ತರಲು ತಿಳಿಸಿದರು.
ಪ್ರಾರಂಭದಲ್ಲಿ ಕ್ರೀಡಾ ಧ್ವಜಾರೋಹಣ ಮಾಡಿ, ಕ್ರೀಡಾ ಜ್ಯೋತಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.