ಮನೆಯಲ್ಲಿ ಮೇಳೈಸಿದ ದಸರಾ ಗೊಂಬೆ

5mlk-1
Published on

ಮೇಲುಕೋಟೆ: ದೇಗುಲಗಳ ಪುಣ್ಯಕ್ಷೇತ್ರ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕರ ಮನೆಯಲ್ಲಿ ದಸರಾ ಗೊಂಬೆಗಳ ಪ್ರದರ್ಶನ ಮೇಳೈಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.


ದೇವಾಲಯದ ಹಿಂಭಾಗದ ಕೋವಿಲ್ ನಂಬಿ ಲಕ್ಷ್ಮೀನರಸಿಂಹನ್ ಸಂಗೀತಾ ದಂಪತಿ ನವರಾತ್ರಿ ಅಂಗವಾಗಿ ಜೋಡಿಸಿರುವ ಮಣ್ಣಿನ ಸಾವಿರಾರು ಗೊಂಬೆಗಳು ಭಾರತೀಯ ಸಂಸ್ಕೃತಿ, ಆಚಾರವಿಚಾರ, ಧಾರ್ಮಿಕ ಪರಂಪರೆಯನ್ನು ಅನಾವರಣಗೊಳಿಸಿವೆ. ಹಿಂದು ಸಂಸ್ಕೃತಿಯಲ್ಲಿ ನವರಾತ್ರಿ ವೇಳೆ ಬೊಂಬೆಗಳನ್ನು ಜೋಡಿಸಿ ಪೂಜಿಸುವ ಸಂಪ್ರದಾಯವಿದ್ದು, ಆಧುನಿಕ ಜೀವನ ಶೈಲಿಯ ಜಂಜಾಟದಲ್ಲಿ ಈ ಪರಂಪರೆ ನಶಿಸಿ ಹೋಗುತ್ತಿದೆ. ಕೆಲವೇ ಕೆಲವು ಮಂದಿ ಈ ಪರಂಪರೆಯಲ್ಲಿ ತೊಡಿಗಿಸಿಕೊಂಡಿದ್ದು ಅಂತಹವರಲ್ಲಿ ಲಕ್ಷ್ಮೀನರಸಿಂಹನ್ ದಂಪತಿಯೂ ಇದ್ದಾರೆ.


ಪರಂಪರೆಯಿಂದ ನಡೆದು ಬಂದ ನವರಾತ್ರಿಯ ಗೊಂಬೆಗಳ ಹಬ್ಬಕ್ಕೆ ತಮ್ಮ ಮನೆಯಲ್ಲಿ 15 ವರ್ಷಗಳಿಂದ ಹೊಸ ಮೆರುಗು ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ಆಕರ್ಷಕ ನವನವೀನ ಗೊಂಬೆಗಳ ಸಂಗ್ರಹ ಹೆಚ್ಚಿಸುತ್ತಾ ಬಂದಿದ್ದಾರೆ. 100 ಗೊಂಬೆಗಳಿಂದ ಆರಂಭವಾದ ಪ್ರದರ್ಶನದಲ್ಲಿ ಇಂದು ಎರಡು ಸಾವಿರಕ್ಕೂ ಅಧಿಕ ಗೊಂಬೆಗಳು ಸ್ಥಾನ ಪಡೆದುಕೊಂಡಿರುವುದು ಅವರ ಹವ್ಯಾಸಕ್ಕೆ ಸಾಕ್ಷಿಯಾಗಿದೆ.


ಈ ವರ್ಷ ಮನೆಯ ವಿಶಾಲವಾದ ಸ್ಥಳದಲ್ಲಿ ಆಕರ್ಷಕ ಚಪ್ಪರದ ಅಡಿ ಗೊಂಬೆಗಳನ್ನು ಜೋಡಿಸಿ ಅಲ್ಲಿ ಬೆಟ್ಟದ ದೇಗುಲಗಳನ್ನೂ ನಿರ್ಮಿಸಿದ್ದಾರೆ. ಆಕರ್ಷಕ ಲೈಂಟಿಂಗ್ ಸಹ ಮಾಡಿದ್ದಾರೆ. ಈ ವರ್ಷ ಆಕರ್ಷಕ ಅಯೋಧ್ಯೆಯ ರಾಮಲಲ್ಲಾ ವಿರಾಜಮಾನನಾಗಿದ್ದಾನೆ.

ಕಣ್ಮನ ಸೆಳೆಯುವ ಗೊಂಬೆಗಳ ಚಿತ್ರಣ: ಮೂರೂ ದಿಕ್ಕುಗಳಲ್ಲಿ ಮಾಡಿದ 9 ಮೆಟ್ಟಿಲುಗಳಲ್ಲಿ ರಾಮಾನುಜಾಚಾರ್ಯರ ಅಭಿಮಾನ ಕ್ಷೇತ್ರಗಳಾದ ತಿರುಮಲೆಯ ಶ್ರೀನಿವಾಸ ಮೇಲುಕೋಟೆ ಚೆಲುವನಾರಾಯಣ, ಕಂಚಿ ದೇವರಾಜಪೆರುಮಾಳ್, ಶ್ರೀರಗಂನ ರಂಗನಾಥ ವಿರಾಜಮಾನನಾಗಿದ್ದಾನೆ. ರಾಜಾರಾಣಿ ದಸರಾವೈಭವ, ರಾಮಾಯಣ, ಮಹಾಭಾರತ, ವಿವಿಧ ದಿವ್ಯಕ್ಷೇತ್ರಗಳ ಗರುಡೋತ್ಸವ ಪುರಿಜಗನ್ನಾಥ ರಥೋತ್ಸವ, ವೈರಮುಡಿ ಉತ್ಸವ, ತಮಿಳುನಾಡಿನ 6 ಮುರುಗನ ದೇವಸ್ಥಾನ, ಬಂಗಾರದ ರಾಜಗೋಪುರ, ಕುಂಭಾಭಿಷೇಕ, ಶೆಟ್ಟಿಯಾರ್ ಗೊಂಬೆಗಳು, ಕೃಷ್ಣಾವತಾರ, ಸೀತಾರಾಮಕಲ್ಯಾಣ, ಮದುವೆ, ಮುಂಜಿ, ಸೀಮಂತ, ತೊಟ್ಟಿಲುಶಾಸ್ತ್ರ, ಹೀಗೆ ತರಾವರಿ ಚಿತ್ರಣಗಳ ಆಕರ್ಷಕ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.


ಇದರ ಜತೆಗೆ ಮೇಲುಕೋಟೆ ತಿರುಪತಿ ಶಬರಿಮಲೆ ಬೆಟ್ಟಗಳನ್ನು ನಿರ್ಮಿಸಿ ಸುತ್ತ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರತಿನಿತ್ಯ ರಾತ್ರಿ 7ಕ್ಕೆ ಗೊಂಬೆಗಳಿಗೆ ಸಾಂಪ್ರದಾಯಿಕವಾಗಿ ಆರತಿ ಮಾಡಲಾಗುತ್ತದೆ. ಗೊಂಬೆಗಳನ್ನು ನೋಡಲು ಬಂದ ಎಲ್ಲರಿಗೂ ಗೊಂಬೆಗಳಿಗೆ ನೈವೇದ್ಯ ಮಾಡಿದ ರುಚಿ ರುಚಿಯಾದ ಪ್ರಸಾದವನ್ನು ಅಡಕೆ ದೊನ್ನೆಯಲ್ಲಿ ನೀಡುತ್ತಾರೆ. ಪ್ರದರ್ಶನ ಅ.12ರ ವಿಜಯದಶಮಿವರೆಗೂ ಇದ್ದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಇಲ್ಲಿಗೆ ಬಂದು ಕಣ್ತುಂಬಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net