

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠ, ಯಾದಾಪುರ ಶ್ರೀಜೇನುಕಲ್ಲು ಸಿದ್ದೇಶ್ವರಸ್ವಾಮಿ ಸನ್ನಿಧಿ, ಮನಕತ್ತೂರು ಕಾಲಭೈರವೇಶ್ವರ ಸ್ವಾಮಿ ಸನ್ನಿಧಿ, ಸಂಕೋಡನಹಳ್ಳಿ ರಂಗನಾಥಸ್ವಾಮಿ, ಶ್ರೀಗುರುಸಿದ್ದೇಶ್ವರಸ್ವಾಮಿ ದೇಗುಲ, ಗಣಪತಿ ದೇಗುಲದ ಆವರಣ ಸೇರಿದಂತೆ ವಿವಿಧೆಡೆ ದಸರಾ ಮಹೋತ್ಸವ ಶನಿವಾರ ಮಧ್ಯಾಹ್ನ ನೆರವೇರಿತು.
ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ಬಿಲ್ಲು, ಬಾಣ ಒಳಗೊಂಡಂತೆ ಆಯುಧ ಪೂಜೆ ನೆರವೇರಿಸಲಾಯಿತು. ಭಕ್ತರ ಸಮ್ಮುಖದಲ್ಲಿ ಶನಿವಾರ ಮಧ್ಯಾಹ್ನ ಶಮಿವೃಕ್ಷ ಪೂಜಿಸಿ ಬಾಳೆಕಂದು ನೆಟ್ಟು ತುಪಾಕಿಯಿಂದ ಹೊಡೆಯುವ ಮೂಲಕ ವಿಜಯದಶಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಗರದ ಹೃದಯ ಭಾಗದಲ್ಲಿರುವ ಕೆಂಗಲ್ ಸಿದ್ದೇಶ್ವರ, ದೇವಾಲಯದ ಬಳಿ ನೂರಾರು ಮಹಿಳೆಯರು ಬನ್ನಿಮರಕ್ಕೆ ಬಳೆ, ರವಿಕೆ, ಸೀರೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮುತ್ತೈದೆಯರಿಗೆ ಮಡಿಲು ತುಂಬುವ ಕಾರ್ಯ ಶ್ರದ್ಧಾಭಕ್ತಿಯಿಂದ ಜರುಗಿತು.