

ಯಳಂದೂರು: ಈ ಬಾರಿ ಚಾಮರಾಜನಗರದಲ್ಲಿ ದಸರಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು, ತಾಲೂಕು ಕೇಂದ್ರಗಳನ್ನು ಮರೆತು ಇದು ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತಗೊಂಡಿದೆ.
ಅವಿಭಜಿತ ಮೈಸೂರು ಜಿಲ್ಲೆ ಬೇರ್ಪಟ್ಟ ಮೇಲೆ ಚಾಮರಾಜನಗರದಲ್ಲೂ ದಸರಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಈ ಬಾರಿ ತುಸು ಹೆಚ್ಚು ಎಂಬಂತೆ ಕಾರ್ಯಕ್ರಮಗಳ ಆಯೋಜನೆ ನಡೆದಿದೆ. ಆದರೆ ಇವೆಲ್ಲವೂ ಜಿಲ್ಲಾ ಕೇಂದ್ರಕ್ಕೆ ಮಾತ್ರ ಸೀಮಿತಗೊಂಡಿರುವುದು ತಾಲೂಕಿನ ಜನರನ್ನು ಬೇಸರಗೊಳಿಸಿದೆ.
ಗ್ರಾಮೀಣ ದಸರಾ ಮರೆತ ಜಿಲ್ಲಾಡಳಿತ: ಈ ಹಿಂದೆ ಜಿಲ್ಲೆಯಲ್ಲಿ ದಸರಾ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಪ್ರತಿ ತಾಲೂಕಿನಲ್ಲೂ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿತ್ತು. ಇಲ್ಲೂ ವೇದಿಕೆ ಕಾರ್ಯಕ್ರಮ ಮಾಡಿ, ಇದರಲ್ಲಿ ಇಲ್ಲಿನ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ಕವಿಗೋಷ್ಠಿ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಲ್ಲದೆ ಇಲ್ಲಿನ ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಕಚೇರಿಗಳು, ಮುಖ್ಯ ವೃತ್ತಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇದಕ್ಕೆ ತಿಲಾಂಜಲಿ ಬಿಡಲಾಗಿದೆ. ಈ ಹಿಂದೆ ಪಟ್ಟಣದ ಗಾಂಧಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು ಈಗ ಇದನ್ನು ಮರೆಯಲಾಗಿದೆ.
ಯಳಂದೂರಿಗೆ ಅರಸರ ನಂಟು: ಯಳಂದೂರು ತಾಲೂಕಿಗೂ ಮೈಸೂರು ಅರಸರಿಗೂ ಅವಿನಾಭಾವ ನಂಟಿದೆ. ಯಳಂದೂರು ತಾಲೂಕನ್ನು ಜಹಗೀರಾಗಿ ಪಡೆದಿದ್ದ ದಿವಾನ್ ಪೂರ್ಣಯ್ಯ ಅವರು ಮೈಸೂರು ಅರಸರ ಮಂತ್ರಿಯಾಗಿದ್ದರು. ಅವರ ನೆನಪಿನಲ್ಲಿರುವ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಇಲ್ಲಿನ ಅಂಬಳೆ ಅಣ್ಣಯ್ಯ ಪಂಡಿತರು ಮೈಸೂರು ಆಸ್ಥಾನದಲ್ಲಿ ರಾಜವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಯಳಂದೂರಿನ ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಮೈಸೂರು ಅರಸರ ಆಸ್ಥಾನದಲ್ಲಿ ಸಂಚಿ ಊಳಿಗವನ್ನು ಮಾಡುತ್ತಿದ್ದ ಮಹಿಳೆಯಾಗಿದ್ದರು. ಅಲ್ಲದೆ ಇಲ್ಲಿನ ಮಹಾಕವಿ ಷಡಕ್ಷರದೇವ ರಾಜಗುರುವಾಗಿದ್ದರು. ಮೈಸೂರು ಅರಸರು ಅಂದಿನ ಕಾಲದಲ್ಲಿ ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲದೆ ಇಲ್ಲಿನ ದೇಗುಲಕ್ಕೆ ಅನೇಕ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದರೊಂದಿಗೆ ಮೈಸೂರು ಅರಸರು ಇಲ್ಲಿಗೆ ವಿಶೇಷ ಆಸ್ಥೆ ವಹಿಸಿದ್ದರು. ಶೈಕ್ಷಣಿ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದ ಪಟ್ಟಣ ಹಾಗೂ ತಾಲೂಕಿನ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದರು ಎಂಬುದಕ್ಕೆ ಹಲವು ಪುರಾವೆಗಳು ಇವೆ. ಆದರೂ ಪಟ್ಟಣ ಹಾಗೂ ತಾಲೂಕನ್ನು ಜಿಲ್ಲಾಡಳಿತ ಕಡೆಗಣಿಸಿದೆ. ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹೊರತುಪಡಿಸಿ ನಾಲ್ಕು ತಾಲೂಕುಗಳಿದ್ದು ಇಲ್ಲೂ ಗ್ರಾಮೀಣ ದಸರಾ ಕಾರ್ಯಕ್ರಮದ ಆಯೋಜನೆಯನ್ನು ಕನಿಷ್ಟ ಒಂದು ದಿನದ ಮಟ್ಟಿಗಾದರೂ ಆಚರಿಸಬೇಕಿತ್ತು.
ವಿದ್ಯುತ್ ದೀಪಾಲಂಕಾರವಾದರೂ ಇರಬೇಕಿತ್ತು: ಇಲ್ಲಿರುವ ಐತಿಹಾಸಿಕ ಕಲ್ಲಿನ ಬಳೇ ಮಂಟಪ, ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯ, ಗೌರೇಶ್ವರ ದೇಗುಲ, ಭೂಲಕ್ಷ್ಮಿ ವರಾಹಸ್ವಾಮಿ ದೇಗುಲ, ಷಡಕ್ಷರದೇವ ಗದ್ದುಗೆ, ಇಲ್ಲಿನ ಪ್ರಮುಖ ಸರ್ಕಲ್‌ಗಳಿಗೆ ರಸ್ತೆಗಳಿಗೆ ವಿದ್ಯುತ್ ದೀಪಗಳ ಅಲಂಕಾರವನ್ನಾದರೂ ಮಾಡುವ ಸೌಜನ್ಯವನ್ನಾದರೂ ಮೆರೆಯಬೇಕಿತ್ತು ಎಂಬುದು ಇಲ್ಲಿನ ನಾಗರಿಕರಾದ ದೊರೆಸ್ವಾಮಿ, ರಾಘವೇಂದ್ರರಾವ್ ಸೇರಿದಂತೆ ಹಲವರ ಅಭಿಪ್ರಾಯವಾಗಿದೆ.
ನನ್ನ ಕ್ಷೇತ್ರ ವ್ಯಾಪ್ತಿಗೆ ಮೂರು ತಾಲೂಕುಗಳು ಒಳಪಡುತ್ತವೆ. ನಾನು ದಸರಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿರಲಿಲ್ಲ. ತಾಲೂಕು ಕೇಂದ್ರದಲ್ಲಿ ಗ್ರಾಮೀಣ ದಸರಾ ಆಚರಿಸಲು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ವಹಿಸಲಾಗುವುದು.
ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ