

ಗುಡಿಬಂಡೆ : ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದ್ದರೂ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಒತ್ತುಕೊಟ್ಟು ಮಾಡಲಾಗುತ್ತಿದೆ ಎಂದು ಆಡಳಿತಪಕ್ಷದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಾಲೂಕಿನ ಬೀಚಗಾನಹಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ವಾಸ್ತವದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಅನುದಾನ ಬಳಕೆ ಮಾಡುತ್ತಿರುವುದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಆದರೂ ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ವೃದ್ಧಾಪ್ಯ ವೇತನ, ಪಡಿತರಚೀಟಿ, ಪೌತಿ ಖಾತೆ ಸೇರಿ ಮತ್ತಿತರ ಸಮಸ್ಯೆಗಳಿವೆ. ಹಾಗಾಗಿ ಅಧಿಕಾರಿಗಳನ್ನು ಜನರ ಮನೆ ಬಾಗಿಲಿಗೆ ಕರೆತಂದಿದ್ದು, ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
ದರಖಾಸ್ತು ಅರ್ಜಿಗಳ ಬಗ್ಗೆ ಪರಿಶೀಲಿಸಿ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಲಾಗುವುದು. ಈ ಅರ್ಜಿಗಳನ್ನು ಒಂದು ವರ್ಷದ ನಂತರ ಇತ್ಯರ್ಥಪಡಿಸಲಾಗುವುದು ಎಂದರು.
ಹೆಚ್ಚುತ್ತಿದೆ ಬಾಲ್ಯವಿವಾಹ
ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣಗಳ ದೂರುಗಳು ಹೆಚ್ಚುತ್ತಿದ್ದು, ಪಾಲಕರು ಮಕ್ಕಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು. ಮದುವೆ ಮಾಡಲು ನಿಮಗೆ ಸಮಸ್ಯೆ ಆದರೆ ಸಾಮೂಹಿಕ ವಿವಾಹ ಆಯೋಜಿಸಿದ್ದು, ಅಲ್ಲೇ ವಿವಾಹ ಮಾಡಿ ಎಂದು ಸುಬ್ಬಾರೆಡ್ಡಿ ಸಲಹೆ ನೀಡಿದರು.
ಪೋಡಿಮುಕ್ತ ತಾಲೂಕು
ತಹಸೀಲ್ದಾರ್ ಸಿಗ್ಬತ್‌ವುಲ್ಲಾ ಮಾತನಾಡಿ, ಅಣ್ಣ-ತಮ್ಮಂದಿರ ಗಲಾಟೆ, ವಿವಿಧ ಕಾರಣಗಳಿಂದಾಗಿ ಪೌತಿ ಖಾತೆ ಮಾಡಿಸಿಕೊಳ್ಳಲು ಆಗದಿದ್ದರೆ, ಎಲ್ಲರೂ ಒಗ್ಗೂಡಿ ಪೌತಿ ಖಾತೆ ಮಾಡಿಸಿಕೊಳ್ಳಬಹುದು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾದ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲಿದ್ದು, ಇದರ ಉಪಯೋಗ ಪಡೆದುಕೊಳ್ಳಬೇಕು. ಈಗಾಗಲೇ ತಾಲೂಕನ್ನು ಪೋಡಿಮುಕ್ತ ಮಾಡಲಾಗಿದೆ, ಅನೇಕ ಸರ್ವೇ ನಂಬರ್‌ಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಈಗಾಗಲೇ 19 ಸರ್ವೇ ನಂಬರ್‌ಗಳನ್ನು ದುರಸ್ತಿ ಮಾಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ. ಅಧಿಕಾರಿಗಳು ಮನೆ ಬಾಗಿಲಿಗೇ ಬಂದಿದ್ದು, ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ, ಆರೋಗ್ಯ, ಸಿಡಿಪಿಒ, ಅರಣ್ಯ ಸೇರಿ ಇತರ ಇಲಾಖೆಗಳ ಅಂಗಡಿ ಮಳಿಗೆ ತೆರಯಲಾಗಿತ್ತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅರ್ಹ ರೈತರಿಗೆ ಯಂತ್ರೋಪಕರಣಗಳನ್ನು ಶಾಸಕರು ವಿತರಿಸಿದರು.
ತಾಪಂ ಇಒ ಹೇಮಾವತಿ, ಬೀಚಗಾನಹಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮಮಹದೇವಪ್ಪ, ಉಪಾಧ್ಯಕ್ಷ ರಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ತೋಟಗಾರಿಕ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಪಶು ಸಂಗೋಪನೆ ಇಲಾಖೆಯ ಸುಬ್ರಮಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಸಿಡಿಪಿಒ ರಫೀಕ್, ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಶಂಕರಪ್ಪ, ಮುಖಂಡ ನರೇಂದ್ರ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರು ಹಾಗೂ ಮುಖಂಡರು ಇದ್ದರು.