ಅ.5ರಂದು ತುಮಕೂರಿನಲ್ಲಿ ದಸಂಸ ಸಭೆ

oppo_2
oppo_2
Published on

ಹನೂರು: ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆಯನ್ನು ಅಕ್ಟೋಬರ್ 5 ರಂದು ತುಮಕೂರಿನಲ್ಲಿ ಆಯೋಜಿಸಲಾಗಿದೆ ಎಂದು ದಸಂಸ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ತಿಳಿಸಿದರು.


ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹನೂರು ಭಾಗದಲ್ಲಿ ಇತ್ತೀಚೆಗೆ ದಲಿತರ ಮೇಲಿನ ಕಿರುಕುಳ ಹಾಗೂ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಇದರಿಂದ ಸಮುದಾಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಪೊಲೀಸರು ಪ್ರಕರಣ ದಾಖಲಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಎಚ್ಚರ ವಹಿಸಬೇಕು. ಹಾಗಾಗಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಬೇಕಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರತಿಯೊಬ್ಬರೂ ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.


ಆರೋಪ ಸುಳ್ಳು: ತಹಸೀಲ್ದಾರ್ ಕಚೇರಿಯ ಅಭಿಲೇಖನಾಲಯದಲ್ಲಿ ದಲಿತ ಸಮುದಾಯದ ನೌಕರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇದನ್ನು ಸಹಿಸದ ರೈತ ಸಂಘಟನೆ ಮುಖಂಡರೊಬ್ಬರು ಸುದ್ದಿಗೋಷ್ಠಿಯಲ್ಲಿ ರೆಕಾರ್ಡ್ ರೂಂನಲ್ಲಿ ದಾಖಲೆಗಳನ್ನು ಪಡೆಯಬೇಕಾದರೆ ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದದು. ಒಂದು ವೇಳೆ ಲಂಚ ಪಡೆಯುತ್ತಿದ್ದರೆ ಸಾಬೀತುಪಡಿಸಲಿ. ಅದನ್ನು ಬಿಟ್ಟು ಸಾಕ್ಷ್ಯವಿಲ್ಲದೆ ಆರೋಪಿಸಿರುವುದು ಸರಿಯಲ್ಲ ಎಂದರು.


ದಸಂಸ ತಾಲೂಕು ಸಂಚಾಲಕ ಮಹೇಶ್, ಪದಾಧಿಕಾರಿಗಳಾದ ನಂಜಪ್ಪ, ರಂಗಸ್ವಾಮಿ, ದೊಡ್ಡಯ್ಯ, ಮರಿಯಮ್ಮ, ಮಹದೇವಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net