

ಲಕ್ಷ್ಮೇಶ್ವರ: ರೋಹಿಣಿ ಹಾಗೂ ಮೃಗಶಿರ ಮಳೆಗಳು ಕೈಕೊಟ್ಟವು. ಕೊನೆ ಚರಣದಲ್ಲಿ ಆರಿದ್ರ ಮಳೆ ಸಿಂಚನ ಗೈಯುವ ಮೂಲಕ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಶುಕ್ರವಾರ ಸಂಜೆ ಸುರಿದ ಮಳೆಗೆ ಸಂತೆ ದಿನವಾಗಿದ್ದರಿಂದ ವ್ಯಾಪಾರಸ್ಥರು, ಗ್ರಾಮೀಣ ಪ್ರದೇಶದ ಜನರು ಮಳೆಯಲ್ಲಿಯೇ ನೆನೆದಿದ್ದು ಕಂಡು ಬಂದಿತು. ಹಳ್ಳಿಯ ಜನರು ಸಂತೆಗೆ ತೊಂದರೆಯಾದರೂ ಚಿಂತೆಯಿಲ್ಲ ಎಂಬಂತೆ ಮಳೆಯಲ್ಲೇ ನೆನೆದು ಊರಿಗೆ ಹೋದರು. ಇನ್ನೂ ಶಾಲಾ ಮಕ್ಕಳು ಮಳೆಯಲ್ಲಿ ಛತ್ರಿ ಹಿಡಿದು ಮನೆ ತಲುಪುತ್ತಿದ್ದ ದೃಶ್ಯ ಕಂಡು ಬಂತು.
2 ದಿನಗಳಿಂದ ಮಳೆಯ ವಾತಾವರಣ ಉಂಟಾಗಿದ್ದರಿಂದ ಕೈ ಚೆಲ್ಲಿ ಕುಳಿತಿದ್ದ ರೈತರು ಮತ್ತೆ ಬಿತ್ತನೆಯತ್ತ ಚಿತ್ತ ಹರಿಸಿ ಗೋವಿನಜೋಳ, ಗೊಬ್ಬರ ಖರೀದಿಗೆ ಮುಂದಾದರು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದ್ದು, ಬಿತ್ತಿದ ಹೆಸರು, ಹತ್ತಿ, ಶೇಂಗಾ, ಗೋವಿನಜೋಳ ಪೈರುಗಳಿಗೆ ಜೀವಕಳೆ ಬಂದಿದೆ.