

ಕುಂದಾಪುರ: ತಿಳುವಳಿಕೆ ಇಲ್ಲದ ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ವಯಸ್ಸಿನಲ್ಲಿ ಮಕ್ಕಳು ದುಶ್ಚಟಗಳಿಗೆ, ಮಾದಕ ವಸ್ತು ಸೇವನೆ ಮುಂತಾದ ವ್ಯಸನಗಳಿಗೆ ಸುಲಭವಾಗಿ ದಾಸರಾಗುತ್ತಾರೆ. ಮಾದಕ ವಸ್ತುಗಳ ಸೇವನೆಯು ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಆತ್ಮಹತ್ಯೆಗೂ ಕಾರಣವಾಗಬಹುದು ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ ಹೇಳಿದರು.
ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಕುಂದಾಪುರದ ಆಶ್ರಯದಲ್ಲಿ ಕುಂದಾಪುರ ಎನ್.ಎನ್.ಒ ಕಮ್ಯುನಿಟಿ ಸೆಂಟರ್‌ನ ಮಿನಿ ಸಭಾಭವನದಲ್ಲಿ ಗುರುವಾರ ಜರಗಿದ ಅಭಿನಂದನಾ ಕಾರ್ಯಕ್ರಮ ಹಾಗೂ ಮಾದಕ ದ್ರವ್ಯ ಸೇವನೆಯಿಂದ ಆಗುವ ಅನಾಹುತ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪ್ರೌಢಶಾಲೆ, ಕಾಲೇಜು ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಮತ್ತು ಕಂಚಿನ ಪಡೆದ ಇಲ್ಹಾನ್ ಜಾವದ್ ಅವರನ್ನು ಗೌರವಿಸಲಾಯಿತು.
ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಖಜಾಂಚಿ ಎಸ್.ಅನ್ವರ್ ಕಂಡ್ಲೂರು, ಎನ್.ಎನ್.ಒ ಕುಂದಾಪುರ ಘಟಕ ಅಧ್ಯಕ್ಷ ಎಸ್.ದಸ್ತಗಿರಿ ಸಾಹೇಬ್ ಕಂಡ್ಲೂರು, ಕಾರ್ಯಕ್ರಮದ ಸಂಯೋಜಕರಾದ ಜಿ.ಮೊಹಮ್ಮದ್ ಸಾಹೇಬ್ ಗುಲ್ವಾಡಿ, ಫಝಲ್ ಅಹ್ಮದ್ ಕಂಡ್ಲೂರು, ಜಮೀರ್ ಅಹಮ್ಮದ್ ರಶಾದಿ, ಮನ್ಸೂರ್ ಇಬ್ರಾಹಿಂ, ನಿಹಾರ್ ಅಹಮ್ಮದ್ ಕುಂದಾಪುರ ಇನ್ನಿತರರು ಉಪಸ್ಥಿತರಿದ್ದರು.