

ಗಂಗೊಳ್ಳಿ: ಮುಂಗಾರು ಆರಂಭವಾಗಿದ್ದು ಗಾಳಿ-ಮಳೆಗೆ ಮರ, ವಿದ್ಯುತ್ ಕಂಬಗಳು ಧರೆಗುರುಳುವುದು ಸಾಮಾನ್ಯವಾಗಿದ್ದು, ರಸ್ತೆ ಬದಿ ಬೆಳೆದು ನಿಂತಿರುವ ಅಪಾಯಕಾರಿ ಮರಗಳು ವಾಹನ ಸವಾರರು, ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
ತ್ರಾಸಿಯಿಂದ ಗಂಗೊಳ್ಳಿವರೆಗೆ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಮರಗಳು ಬೆಳೆದು ನಿಂತಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಕೊಂಬೆಗಳು ಮುರಿದು ಬೀಳುತ್ತಿದೆ. ನಾಯಕವಾಡಿ ತಿರುವು, ಗುಜ್ಜಾಡಿ ಬಸ್ ನಿಲ್ದಾಣ, ಬೆಣ್ಗೆರೆ ಕ್ರಾಸ್, ಬಾವಿಕಟ್ಟೆ, ಗಂಗೊಳ್ಳಿ ಶ್ರೀ ರಾಮ ಮಂದಿರ, ಪೋಸ್ಟ್ ಆಫೀಸ್ ಬಳಿ ಹಾಗೂ ಬಂದರು ಬಸ್ ನಿಲ್ದಾಣದ ಸಮೀಪ ಅಪಾಯಕಾರಿ ಮರಗಳಿದ್ದು, ಯಾವ ಸಂದರ್ಭ ಮುರಿದು ರಸ್ತೆಗೆ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಮರಗಳು ಸಂಪೂರ್ಣವಾಗಿ ರಸ್ತೆಗೆ ವಾಲಿಕೊಂಡಿದ್ದು ಇಂದಲ್ಲ ನಾಳೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ.
ತ್ರಾಸಿ ಗಂಗೊಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು, ಸಹಸ್ರಾರು ವಿದ್ಯಾರ್ಥಿಗಳು, ಮೀನುಗಾರರು, ಕಾರ್ಮಿಕರು ಸೇರಿದಂತೆ ಅನೇಕ ಮಂದಿ ಪ್ರತಿನಿತ್ಯ ಸಂಚರಿಸುತ್ತಿದ್ದು, ಮುಖ್ಯರಸ್ತೆಯಲ್ಲಿರುವ ಇಂತಹ ಅಪಾಯಕಾರಿ ಮರಗಳು ಭೀತಿ ತಂದೊಡ್ಡುತ್ತಿದೆ.
ಗಂಗೊಳ್ಳಿಯಿಂದ ತ್ರಾಸಿವರೆಗಿನ ಮುಖ್ಯರಸ್ತೆಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ 23 ವರ್ಷಗಳಿಂದ ನಿರಂತರವಾಗಿ ಅರಣ್ಯ ಇಲಾಖೆಗೆ ಮನವಿ ವಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯಾಡಳಿತದ ಮನವಿಗೂ ಇಲಾಖೆ ಸ್ಪಂದಿಸಿಲ್ಲ. ಹೀಗಾಗಿ ಸಾರ್ವಜನಿಕರ ಸುರಕ್ಷತೆ ದಷ್ಟಿಯಿಂದ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಜನರು ಒತ್ತಾಯಿಸಿದ್ದಾರೆ.
ರಸ್ತೆ ಬದಿಗಳಲ್ಲಿ ಕೆಲವು ಮರಗಳು ಸಂಪೂರ್ಣವಾಗಿ ರಸ್ತೆಗೆ ವಾಲಿಕೊಂಡಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಸಂಬಂಧಪಟ್ಟವರು ಅಪಾಯಕಾರಿ ಮರಗಳನ್ನು ತೆರವುಗೊಳಿಸಿದರೆ ಮಳೆಗಾಲದಲ್ಲಿ ಜನರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ನಿರ್ಭೀತಿಯಿಂದ ಸಂಚರಿಸಬಹುದು. ಅವಘಡ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕಾರ್ಯಪ್ರವೃತವಾಗಬೇಕು. ನವೀನ್ ದೊಡ್ಡಹಿತ್ಲು, ಸಾವಾಜಿಕ ಕಾರ್ಯಕರ್ತ, ಗಂಗೊಳ್ಳಿ https://www.vijayavani.net/achievement-by-making-good-use-of-opportunities https://www.vijayavani.net/elected-as-the-president-of-ermal-temple