ಕಳಪೆ ಔಷಧ ಹಿಂಪಡೆಯಲು ಹೊಸ ನೀತಿ ಜಾರಿಗೆ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತ

Drug
Published on

ಬೆಂಗಳೂರು: ರಾಜ್ಯದ ಔಷಧಿ ಮಾರುಕಟ್ಟೆಯಿಂದ ಕಳಪೆ ಔಷಧಿಗಳನ್ನು ಹಿಂಪಡೆಯಲು ಪರಿಣಾಮಕಾರಿ ವ್ಯವಸ್ಥೆ ಜಾರಿಗೆ ಮುಂದಾಗಿರುವ ಆರೋಗ್ಯ ಇಲಾಖೆ ಔಷಧಿ ಹಿಂಪಡೆಯುವ ನೀತಿ (ಡ್ರಗ್ ರೀಕಾಲ್ ಪಾಲಿಸಿ) ಜಾರಿಗೆ ಸಜ್ಜಾಗಿದ್ದು, ಈ ಕುರಿತು ಮಾರಾಟಗಾರರು ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಆರೋಗ್ಯ ಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಔಷಧ ನಿಯಂತ್ರಣ ಇಲಾಖೆಯು ನಿಯಮಿತವಾಗಿ ಔಷಧಗಳ ಗುಣಮಟ್ಟ ಪರಿಶೀಲನೆ ಕಾರ್ಯ ಕೈಗೊಂಡಿದೆ. ಈ ಜನವರಿಯಲ್ಲಿ 1,133 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 106 ಔಷಧಿಗಳು ಪ್ರಾಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ಪ್ರಯೋಗಾಲಯ ವರದಿ ತಿಳಿಸಿದೆ. ಫೆಬ್ರವರಿಯಲ್ಲಿ ವಿಶ್ಲೇಷಣೆಗೆ ಒಳಪಡಿಸಿದ 1,841 ಔಷಧ ಮಾದರಿಗಳಲ್ಲಿ 58 ಔಷಧಿಗಳು ಪ್ರಾಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ದೃಢಪಟ್ಟಿದೆ. ಇಂತಹ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ನೀತಿ ರೂಪಿಸಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಗುಣಮಟ್ಟ ಹೊಂದಿರದ ಔಷಧಿಗಳ ದಾಸ್ತಾನುಗಳನ್ನು ಪತ್ತೆ ಹಚ್ಚಲು ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ತಯಾರಕರು ಮತ್ತು ಅವರ ಅಧಿಕೃತ ಏಜೆಂಟ್‌ಗಳ ವಿವರಗಳೊಂದಿಗೆ ತಂತ್ರಾಂಶ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.

17 ಲಕ್ಷ ಮೌಲ್ಯದ ಔಷಧಿ ಹಿಂಪಡಿಕೆ: ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲ್ಪಟ್ಟ ಮತ್ತು ಪ್ರಮಾಣಿತ ಗುಣಮಟ್ಟ ಹೊಂದಿಲ್ಲದ ಔಷಧಿಗಳ ವಿವರಗಳನ್ನು ಹಂಚಿಕೊಂಡ ಸಚಿವರು, ಎರಡು ತಿಂಗಳಲ್ಲಿ 17 ಲಕ್ಷ ರೂ. ಅಧಿಕ ಮೌಲ್ಯದ ಪ್ರಮಾಣಿತ ಗುಣಮಟ್ಟ ಹೊಂದಿಲ್ಲದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಇದೇ ವೇಳೆ 488 ಔಷಧ ಮಳಿಗೆಗಳ ಪರಿಶೀಲನೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 400 ಮಳಿಗೆಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಉತ್ತರ ನೀಡದ 231 ಮಳಿಗೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದ್ದು, ಮೂರು ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.

ಕಾಂತಿವರ್ಧಕ ಕಾಯ್ದೆ ಉಲ್ಲಂಘನೆ: ಕಳೆದ ಡಿಸೆಂಬರ್‌ನಿಂದ ಕೈಗೊಂಡ ವಿಶೇಷ ಅಭಿಯಾನದಲ್ಲಿ 262 ಕಾಂತಿವರ್ಧಕ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 120 ಉತ್ತಮ ಗುಣಮಟ್ಟದ್ದು ಎಂದು ವರದಿ ಬಂದಿದ್ದು, ಉಳಿದ ಮಾದರಿಗಳು ವಿಶ್ಲೇಷಣಾ ಹಂತದಲ್ಲಿವೆ. ಔಷಧಿ ಮತ್ತು ಕಾಂತಿವರ್ಧಕ ಕಾಯ್ದೆ, 1940ರ ಉಲ್ಲಂಘನೆಯ ಅಡಿಯಲ್ಲಿ 75 ಸಂಸ್ಥೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅದೇ ರೀತಿ, ಆ್ಯಂಟಿಬಯಾಟಿಕ್ ಔಷಧಿಗಳ ದುರ್ಬಳಕೆ ತಡೆ ಸಂಬಂಧ ಫೆ.17 ರಿಂದ 19ರವರೆಗೆ ರಾಜ್ಯಾದ್ಯಂತ ಔಷಧಿ ಮಳಿಗೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, 52 ಮಳಿಗೆಗಳು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಆ್ಯಂಟಿಬಯಾಟಿಕ್‌ಗಳ ಮಾರಾಟ ಮಾಡಿರುವುದು ಕಂಡುಬಂದಿದೆ. ಅವುಗಳ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ 52 ಮಳಿಗೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಆಹಾರ ಸುರಕ್ಷತೆ: ಜನವರಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಸಂಗ್ರಹಿಸಿದ 3,608 ಆಹಾರ ಪದಾರ್ಥಗಳ ಮಾದರಿಗಳಲ್ಲಿ, 28 ಕಳಪೆ ಗುಣಮಟ್ಟದ್ದಾಗಿದ್ದು, 26 ಮಾದರಿಗಳನ್ನು ಮಾನವ ಬಳಕೆಗೆ ಅಪಾಯಕಾರಿ ಎಂದು ಘೋಷಿಸಲಾಗಿದೆ. ಫೆಬ್ರವರಿಯಲ್ಲಿ ಸಂಗ್ರಹಿಸಲಾದ 2,543 ಆಹಾರ ಮಾದರಿಗಳಲ್ಲಿ, ಐದು ಕಳಪೆ ಗುಣಮಟ್ಟದ್ದು ಹಾಗೂ ಎಂಟು ಮಾದರಿಗಳು ಮಾನವ ಬಳಕೆಗೆ ಅಪಾಯಕಾರಿ ಎಂಬ ಅಂಶ ಬೆಳಕಿಗೆ ಬಂದಿರುವುದಾಗಿ ಹೇಳಿದರು.

ಬಾಟಲ್ ನೀರು ವಿಶ್ಲೇಷಣೆ: ಆಹಾರ ಸುರಕ್ಷತಾ ಇಲಾಖೆಯು ಬಾಟಲ್ ನೀರಿನ ಘಟಕಗಳ ಮೇಲೂ ಗಮನ ಹರಿಸಿದ್ದು, ಫೆಬ್ರವರಿ 2025ರಲ್ಲಿ ಅಧಿಕಾರಿಗಳು 288 ಬ್ರಾಂಡ್‌ಗಳ ಬಾಟಲ್ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳುಹಿಸಿದ್ದು, ಪ್ರಯೋಗಾಲಯ ವಿಶ್ಲೇಷಣೆ ಕಾರ್ಯ ಪ್ರಗತಿಯಲ್ಲಿದೆ. ಅದೇ ರೀತಿ ಕೃತಕ ಬಣ್ಣಗಳ ಬಳಕೆ ಪರೀಕ್ಷಿಸಲು 106 ಹುರಿದ ಹಸಿರು ಬಟಾಣಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ್ದು, ಪರೀಕ್ಷೆ ಪೂರ್ಣಗೊಂಡಿರುವ 31 ಮಾದರಿಗಳಲ್ಲಿ, 26 ಮಾದರಿಗಳು ಅಸುರಕ್ಷಿತವೆಂದು ತಿಳಿದುಬಂದಿದೆ. ಉಳಿದ ಮಾದರಿಗಳ ವಿಶ್ಲೇಷಣೆ ಪ್ರಗತಿಯಲ್ಲಿದೆ. ಈಗಾಗಲೇ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಪೇಪರ್ ಬಳಸದಂತೆಯೂ ಸೂಚಿಸಲಾಗಿದ್ದು, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net