

ಬೆಂಗಳೂರು: ಬಾಳೆಕಾಯಿ ಮಂಡಿ, ಹೂ ಮಾರುಕಟ್ಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಪೆಡ್ಲರ್ನಲ್ಲಿ ಕಾಟನ್ಪೇಟೆ ಪೊಲೀಸರು ಬಂಧಿಸಿ 70 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.
ಒಡಿಶಾ ಮೂಲದ ರಾಜ್ ಕಿಶೋರ್ ಸಹಾನಿ ಅಲಿಯಾಸ್ ಬಾಬುನಾ ಸಹಾನಿ (26) ಬಂಧಿತ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 70 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪೆಡ್ಲರ್ ಸುಭಾಷ್ ಎಂಬಾತನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ರಾಜ್ ಕಿಶೋರ್ ಸುಳಿವು ಲಭ್ಯವಾಯಿತು. ಒಡಿಶಾದಿಂದ ರೈಲಿನಲ್ಲಿ ಬಚ್ಚಿಟ್ಟುಕೊಂಡು ಗಾಂಜಾವನ್ನು ನಗರಕ್ಕೆ ತಂದು ಬಾಳೆಕಾಯಿ ಮಂಡಿ ಮತ್ತು ಪ್ಲವರ್ ಮಾರ್ಕೆಟ್ ಸುತ್ತಮುತ್ತ ಪರಿಚಯಸ್ಥ ಸ್ಥಳೀಯ ಪೆಡ್ಲರ್ಗಳಿಗೆ ಮಾರಾಟ ಮಾಡುತ್ತಾನೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು.
ಅದರಂತೆ ಮಫ್ತಿಯಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಾಳೆಕಾಯಿ ಮಂಡಿ ಮತ್ತು ಪ್ಲವರ್ ಮಾರ್ಕೆಟ್ಗೆ ಬರುವ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿತ್ತು. ಏ.19ರಂದು ಬಾಳೆಕಾಯಿ ಮಂಡಿಯ ಪಶ್ಚಿಮ ಗೇಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ರಾಜ್ ಕಿಶೋರ್ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಈತನ ಬಳಿ ಖರೀದಿ ಮಾಡುತ್ತಿದ್ದ ಸ್ಥಳೀಯ ಪೆಡ್ಲರ್ಗಳ ಬಗ್ಗೆ ಮಾಹಿತಿ ಪಡೆದಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.