'ಮಾದಕ ವ್ಯಸನದಿಂದ ಬದುಕು ಹಾಳುಮಾಡಿಕೊಳ್ಳದಿರಿ'

Drug_Awareness
Published on

ತುಮಕೂರು: ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ಅಂತರ ರಾಷ್ಟ್ರೀಯ ಮಾದಕ ದ್ರವ್ಯಗಳ ದುರಪಯೋಗ ವಿರೋಧಿ ದಿನಾಚರಣೆ ಮತ್ತು ಮಾದಕ ದ್ರವ್ಯ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಶಸಸ್ತ್ರ ಮೀಸಲು ಪಡೆ ಕವಾಯತು ಮೈದಾನದಿಂದ ವಾಕಥಾನ್​ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಗುರುವಾರ ಬೆಳಗ್ಗೆ ಚಾಲನೆ ನೀಡಿದರು.

ಡಿಎಆರ್​, ಕೆಎಸ್​ಆರ್​ಪಿ, ಎನ್​ಸಿಸಿ, ಹೋಂಗಾರ್ಡ್​ ತಂಡಗಳು ಹಾಗೂ ನಗರದ ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಜಾಗೃತಿ ಜಾಥದಲ್ಲಿ ಮಹಾನಗರ ಪಾಲಿಕೆವರೆಗೆ ಹೆಜ್ಜೆ ಹಾಕಿದರು. ನಂತರ ಪಾಲಿಕೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ವಿ.ಅಶೋಕ್​, ವಿದ್ಯಾರ್ಥಿಗಳು ಮಾದಕ ದ್ರವ್ಯಗಳು ಬಗ್ಗೆ ಹೆಚ್ಚು ಜಾಗೃತವಾಗಿರಬೇಕು. ಮಾದಕ ದ್ರವ್ಯಗಳಿಗೆ ಮಾರುಹೋಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪೊಲೀಸ್​ ಇಲಾಖೆ ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾದಕ ದ್ರವ್ಯಮಾರುವುದಾಗಲಿ, ಶೇಖರಣೆ ಮಾಡುವುದಾಗಲಿ ಕಾನೂನಿನಡಿಯಲ್ಲಿ ಶಿಾರ್ಹ ಅಪರಾಧ. ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕೂಡಲೇ ಸ್ಥಳಿಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳು ಸಮಾಜ ಸ್ವಾಸ್ಥ$್ಯ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಿದರೆ ಮಾದಕ ವಸ್ತುಗಳ ಮಾರಾಟ ಜಾಲ ಹತ್ತಿಕ್ಕಲು ಸಾಧ್ಯವಾಗಲಿದೆ ಎಂದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಸಿದ್ದಗಂಗಾ ಆಸ್ಪತ್ರೆಯ ಡಾ.ಶಾಲಿನಿ, ಮನೋವೈದ್ಯ ಡಾ.ಕೀರ್ತಿಪ್ರಸಾದ್​, ಎಎಸ್ಪಿಗಳಾದ ಸಿ.ಗೋಪಾಲ್​, ಎಂ.ಎಲ್​.ಪುರುಷೋತ್ತಮ್​, ನಗರ ಡಿವೈಎಸ್ಪಿ ಚಂದ್ರಶೇಖರ್​, ಡಿಎಆರ್​ ಡಿವೈಎಸ್ಪಿ ಕೆ.ಎನ್​.ಪರಮೇಶ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net