

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಧೂಮಪಾನ, ಮದ್ಯಪಾನ, ಡ್ರಗ್ಸ್ ಮತ್ತಿತರ ಮಾದಕ ವ್ಯಸನಗಳನ್ನು ಆಪ್ತ ಸಮಾಲೋಚನೆ, ಪ್ರೀತಿಯ ಮಾತು, ಸಕಾಲಿಕ ಸಲಹೆಗಳಿಂದ ಮನಃಪರಿವರ್ತನೆ ಮಾಡಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಅವೀನ್ ಆಳ್ವ ಹೇಳಿದರು.
ಜನಶಿಕ್ಷಣ ಟ್ರಸ್ಟ್, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ, ಚಿತ್ತಾರ ಬಳಗ, ಜನಜೀವನ ಬಾಳೆಪುಣಿ ಆಶ್ರಯದಲ್ಲಿ ಮುಡಿಪು ಜನಶಿಕ್ಷಣ ಟ್ರಸ್ಟ್‌ನ ಸ್ಮೈಲ್ ಸ್ಕಿಲ್ ಸ್ಕೂಲ್‌ನಲ್ಲಿ ಆಟಿ ಅರಿವು ಕಾರ್ಯಕ್ರಮ, ಆಟಿಡೊಂಜಿ ದಿನ ಹಾಗೂ ಮಾದಕ ವ್ಯಸನ ತಡೆ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಮಾದಕ ವ್ಯಸನ ತಡೆ ಅಭಿಯಾನ ಹಮ್ಮಿಕೊಳ್ಳಲು ಸಹಕಾರ ನೀಡಲಾಗುವುದು ಎಂದರು.
ತರಬೇತಿ ವಿದ್ಯಾರ್ಥಿನಿಯರಾದ ಕೀರ್ತಿಕಾ ಮತ್ತು ಅಂಕಿತಾ ಆಟಿ ಆಚರಣೆ ಬಗ್ಗೆ ಮಾಹಿತಿ ನೀಡಿದರು. ಸ್ಮೈಲ್ ಸ್ಕಿಲ್‌ಸ್ಕೂಲ್ ವಿದ್ಯಾರ್ಥಿಗಳಿಂದ ನೃತ್ಯ, ಸುಗ್ಗಿ ಕುಣಿತ, ಭಸ್ಮಾಸುರ ಮೋಹಿನಿ ಏಕ ಪಾತ್ರಾಭಿನಯ, ಒಪ್ಪನ, ಪರಿಸರ ಗೀತೆ, ತುಳು ಎದುರು ಕಥೆ, ಜನಪದ ನೃತ್ಯ ಗೀತೆಗಳ ಪ್ರದರ್ಶನಗೊಂಡವು.
ಮುಡಿಪು ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ನಡುಪದವು, ಪಂಚಾಯಿತಿ ಸದಸ್ಯರಾದ ಸೆಮೀಮಾ, ಜನಾರ್ದನ ಕುಲಾಲ್, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ, ಸಹಶಿಕ್ಷಕ ನೀಲಯ್ಯ, ಬಂಟ್ವಾಳ ತಾಪಂ ಮಾಜಿ ಸದಸ್ಯ ಹೈದರ್ ಕೈರಂಗಳ, ಪ್ರಗತಿಪರ ಕೃಷಿಕ ಅಬ್ದುಲ್ ಖಾದರ್, ಯೋಗ ಶಿಕ್ಷಕಿ ಶಮ ಪ್ರಕಾಶ್, ಪತ್ರಕರ್ತ ಗುರುವಪ್ಪ ಬಾಳೆಪುಣಿ, ಅಬೂಬಕ್ಕರ್ ಜಲ್ಲಿ, ಇಸ್ಮಾಯಿಲ್, ಅಬ್ದುಲ್ ಖಾದರ್, ಕೃಷಿಕೆ ಲತಾ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣಮೂಲ್ಯ ಸ್ವಾಗತಿಸಿದರು. ನರೇಗ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ನಿರೂಪಿಸಿದರು.