ಮಾದಕ ವ್ಯಸನ ಸಮಾಜದ ಪಿಡುಗು

26BTP02
Published on

ಬೆಟ್ಟದಪುರ: ಮಾದಕ ವ್ಯಸನ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಒಂದು ಪಿಡುಗು, ಈ ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‌ಐ ಅಜಯ್ ಕುಮಾರ್ ತಿಳಿಸಿದರು.

ಬೆಟ್ಟದಪುರದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ವಿಶ್ವ ಮಾದಕ ದ್ರವ್ಯಗಳ ವಿರೋಧಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಮಾದಕ ವಸ್ತುಗಳ ಅಪಾಯಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಅವರಲ್ಲಿ ಮಾನಸಿಕ ಸ್ಥೈರ್ಯ ಮತ್ತು ಒತ್ತಡ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಬೇಕು. ವ್ಯಸನಕ್ಕೆ ಬಲಿಯಾದವರನ್ನು ತಿರಸ್ಕರಿಸುವ ಬದಲು ಅವರಿಗೆ ಬೆಂಬಲ ನೀಡಿ ಚಿಕಿತ್ಸೆ ಪಡೆಯಲು ಸಹಾಯವಾಗಬೇಕು. ಯುವಕರು ಕ್ರೀಡೆ, ಕಲೆ, ಸಂಗೀತದಂತಹ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದ ಕೆಟ್ಟ ಹವ್ಯಾಸಗಳಿಂದ ದೂರವಿಡಲು ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಪರಾಧ ವಿಭಾಗದ ಪಿಎಸ್‌ಐ ಸ್ವಾಮಿಗೌಡ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಮತ್ತು ಸುರಕ್ಷಿತ ಭವಿಷ್ಯವನ್ನು ಕಟ್ಟಿಕೊಡಲು ಮಾದಕ ಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ, ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಇದೆ ವೇಳೆ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಡಿಟಿಎಂಎನ್ ಕಾಲೇಜಿನ ವಿದ್ಯಾರ್ಥಿಗಳು ಬೆಟ್ಟದಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟದ ಬಗ್ಗೆ ಘೋಷಣೆ ಕೂಗುತ್ತಾ ಜನರಲ್ಲಿ ಅರಿವು ಮೂಡಿಸಿದರು.

ಪೊಲೀಸ್ ಸಿಬ್ಬಂದಿ ಶತ್ರುಘ್ನ, ಅನಂತ್, ಶಂಕರ್, ಹೇಮಂತ್, ಸತೀಶ್, ಅಭಿ, ನಹಿಂ, ರಘು, ಸೋನುಪ್ರಿಯಾ, ಪಲ್ಲವಿ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net