

ಅಡವಿಯಲ್ಲಿಲ್ಲ ದನ-ಕರುಗಳಿಗೆ ಹಿಡಿ ಮೇವು | ಬರಿದಾದ ಕೆರೆ-ಕಾಲುವೆಗಳು : ಕುಡಿವ ನೀರಿಗೆ ಎಲ್ಲಡೆ ತತ್ವಾರ
ಬಾಬುರಾವ ಯಡ್ರಾಮಿ ಯಾದಗಿರಿ
ಎಲ್ಲಿ ನೋಡಿದರಲ್ಲಿ ಸುಟ್ಟು ಮರುಭೂಮಿಯಂತಾದ ಜಮೀನು. ಕುಡಿಯಲು ಹನಿ ನೀರಿಲ್ಲದೆ ಬಿರುಕು ಬಿಟ್ಟ ಕೆರೆ, ಹಳ್ಳ, ಕೊಳ್ಳಗಳು. ಇಂತಹ ಭೀಕರ ಬರಕ್ಕೆ ಜಾನುವಾರುಗಳು ತತ್ತರಿಸುವಂತಾಗಿದೆ.
ಯಾದಗಿರಿ ಜಿಲ್ಲೆಯಾದ ಮೊದಲ ಬಾರಿ ಭೀಕರ ಬರಗಾಲ ಎದುರಿಸುತ್ತಿದ್ದು, ಜಿಲ್ಲೆಯಲ್ಲಿ ಯಾದಗಿರಿ, ಗುರುಮಠಕಲ್, ವಡಗೇರಾ, ಶಹಾಪುರ, ಹುಣಸಗಿ ಮತ್ತು ಸುರಪುರ ಸೇರಿ ಒಟ್ಟು ಆರು ತಾಲೂಕುಗಳಿವೆ. ಈ ಆರು ಬರ ಪೀಡಿತ ಎಂದು ಘೋಷಣೆಯಾಗಿವೆ.
ಭೀಕರ ಬರಗಾಲಕ್ಕೆ ಜನರು, ಜಾನುವಾರುಗಳು ಕೂಡ ಅಕ್ಷರಶಃ ವಿಲ ವಿಲ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿವರ್ಷ ಮಾರ್ಚ್ ಏಪ್ರಿಲ್‌ವರೆಗೆ ಬೆಳೆ, ಹಸಿ ಮೇವು, ಕಾಲುವೆ, ಕೆರೆ, ಹಳ್ಳದ ನೀರು ಸಿಗುತ್ತಿತ್ತು. ಆದರೆ ಈ ಬಾರಿ ಇದಾವುದು ಇಲ್ಲದ ಕಾರಣ ಮೂಕ ಪ್ರಾಣಿಗಳ ರೋಧನೆ ಹೇಳ ತೀರದಾಗಿದೆ.
ದನ-ಕರು, ಎಮ್ಮೆ, ಎತ್ತು, ಕುರಿ ಮತ್ತು ಆಡುಗಳಿಗೆ ತಿನ್ನಲು ಹಿಡಿ ಮೇವು, ಗುಟುಕು ನೀರು ಅಡವಿಯಲ್ಲಿ ಸಿಗುತ್ತಿಲ್ಲ. ಕಾರಣ ಈ ಬಾರಿ ಮಳೆ ಸಂಪೂರ್ಣ ವಿಫಲವಾಗಿದ್ದರಿಂದ. ಅವಶ್ಯಕತೆಗೆ ಇರುವಷ್ಟು ನೀರು ಸಂಗ್ರಹವಾಗದ ಕಾರಣ ಕಾಲುವೆ ನೀರು ನಿಲ್ಲಿಸಲಾಯಿತು. ಡಿಸೆಂಬರ್ ವೇಳೆಗೆ ಬೆಳೆಗಳು ನೆಲಕಚ್ಚಿದವು. ನೀರಿಲ್ಲದೆ ಹೊಲ, ಬದು ಮತ್ತು ಮುಳ್ಳಿನ ಗಿಡ-ಗಂಟಿ ಎಲ್ಲವೂ ಒಣಗಿ ನಿಂತಿವೆ. ರೈತರು ಇವುಗಳ ಸ್ವಚ್ಛತೆಗಾಗಿ ಬೆಂಕಿ ಹಚ್ಚುತ್ತಿರುವುದರಿಂದ ಅಲ್ಪಸ್ವಲ್ಪ ಮೇವು ಕೂಡ ಬೆಂಕಿಗಾಹುತಿಯಾಗುತ್ತಿದೆ. ಇದರಿಂದ ದನ-ಕರುಗಳು ಮಮ್ಮಲು ಮರಗುವಂತಾಗಿದೆ.
ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ
ಜಿಲ್ಲೆಯಲ್ಲಿ ಕುರಿ ಮತ್ತು ಆಡು(ಮೇಕೆ) ಸೇರಿ ೬.೯೦ ಲಕ್ಷ ಇವೆ. ಜಾನುವಾರುಗಳು ೨,೯೦,೭೪೯ ಇದ್ದು ಇವುಗಳಿಗೆ ವಾರಕ್ಕೆ ೧೪೬೪೧ ಟನ್ ಮೇವು ಬೇಕು. ನಮ್ಮಲ್ಲಿ ಇನ್ನೂ ೪೬ ವಾರಕ್ಕೆ ಸಾಕಾಗುವಷ್ಟು ಮೇವು ಜಿಲ್ಲೆಯ ರೈತರು ಶೇಖರಿಸಿಕೊಂಡಿದ್ದಾರೆ. ಈ ಬಾರಿ ಬಿಳಿಜೋಳ ಚನ್ನಾö್ನಗಿ ಬೆಳೆದಿದ್ದು ಜೋಳದ ಕಣಕಿ, ಸೇಂಗಾ ತೊಗರಿ ಹೊಟ್ಟು, ಭತ್ತದ ಮೇವು ಸೇರಿ ೬,೭೩,೩೨೫ ಟನ್ ಸಂಗ್ರಹವಿದೆ. ಜಿಲ್ಲೆ ಎಲ್ಲ ತಾಲೂಕುಗಳಿಗೆ ೧೩ ಸಾವಿರ ಮೇವಿನ ಕಿಟ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಶು ಇಲಾಖೆ ಮಾಹಿತಿ ನೀಡಿದೆ.
***
ಏಪ್ರಿಲ್‌ನಲ್ಲೇ ಬರಲಿದೆ ಭಾರಿ ಮಳೆ
ಕಳೆದ ಮುಂಗಾರು ಮಳೆ ತಡವಾಗಿ ಬಂದು ಅಷ್ಟೇ ಬೇಗ ಮಗಿದು ಹಿಂಗಾರು ಮಳೆಯಂತೂ ಸುಳಿಯಲೇ ಇಲ್ಲ. ಆದರೆ ಈ ಬಾರಿ ಹವಾಮಾನ ಇಲಾಖೆ ಪ್ರಕಾರ ರೈತರಿಗೆ ಸಂತಸದ ವಿಷಯವನ್ನು ತಿಳಿಸಿದೆ. ಈ ಬಾರಿ ಏಪ್ರಿಲ್‌ನಲ್ಲೇ ಭಾರಿ ಮಳೆಯಾಗುವ ಸಾಧ್ಯೆ ಇದೆ. ಹೀಗಾಗಿ ಎರಡು ತಿಂಗಳ ಮುಂಚಿತವಾಗಿ ಮಳೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ದೊಡ್ಡ ದೊಡ್ಡ ರೈತರ ಬಳಿ ಮೇವು ಇದೆ. ಸಣ್ಣ ಅತಿ ಸಣ್ಣ ರೈತರ ಬಳಿ ಇರುವ ಸ್ವಲ್ಪ ಜಮೀನಲ್ಲೆ ಎಲ್ಲವೂ ಹೇಗೆ ಬೆಳೆಯಲು ಸಾಧ್ಯ. ಜೋಳದ ಕಣಕಿ ೬ ನೂರು ರೂ.ಗೆ ಒಂದು ಕಟ್ಟಿನಂತೆ ತಂದಿರುವೆ. ಇಲ್ಲದಿದ್ದರೆ ನಮ್ಮ ಎತ್ತುಗಳು ಉಪವಾಸ ಬೀಳುತ್ತವೆ.
| ಸಾಬಣ್ಣ ಖಾನಾಪುರ
ಖಾನಾಪುರ ಗ್ರಾಮದ ರೈತ
***
ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ. ನಮ್ಮ ಪ್ರಕಾರ ೪೬ ವಾರಗಳಿಗೆ ೬.೯ ಲಕ್ಷ ಕುರಿ ಮತ್ತು ಮೇಕೆ, ೨.೯ ಲಕ್ಷ ಜಾನುವಾರುಗಳಿಗೆ ಬೇಕಿರುವ ಮೇವು ರೈತರ ಬಳಿ ಇದೆ. ಮುಂಜಾಗ್ರತವಾಗಿ ೧೩ ಸಾವಿರ ಮೇವಿನ ಕಿಟ್ ವಿತರಣೆಗೆ ಬಂದಿದ್ದು ಶೀಘ್ರ ನೀರಾವರಿ ಸೌಲಭ್ಯ ಇರುವ ರೈತರಿಗೆ ಹಂಚಿಕೆ ಮಾಡಲಾಗುವುದು.
| ಡಾ.ರಾಜು ದೇಶಮುಖ
ಉಪ ನಿರ್ದೇಶಕರು ಪಶು ಸಂಗೋಪನಾ ಇಲಾಖೆ ಯಾದಗಿರಿ