

ರಾಯಚೂರು: ಲಿಂಗಸೂಗೂರು ತಾಲೂಕಿನ ಅನ್ವರಿ ಗ್ರಾಪಂ ವ್ಯಾಪ್ತಿಯಲ್ಲಿ ಜೆಸಿಬಿಯಿಂದ ಕೆಲಸ ಮಾಡುತ್ತಿದ್ದು, ಕೂಲಿಕಾರರಿಗೆ ವಂಚಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ನರೇಗಾ ಯೋಜನೆ ಸದ್ಬಳಕೆಯಾಗಲಿ
ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ಜನಜಾನುವಾರು ಆಹಾರ, ನೀರಿಗಾಗಿ ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ನರೇಗಾ ಯೋಜನೆ ಜಾರಿಮಾಡಿ ಜನರಿಗೆ ಕೆಲಸ ನೀಡಬೇಕಿತ್ತು. ಆದರೆ, ಹಲವು ಗ್ರಾಪಂಯಲ್ಲಿ ಖಾತ್ರಿ ಯೋಜನೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ದಿನಗೂಲಿ ಕಾರ್ಮಿಕರು ಇಲ್ಲದೇ ಕಾರ್ಮಿಕರ ಭಾವಚಿತ್ರಗಳನ್ನು ಎನ್‌ಎಂಎಂಎಸ್ ಆಧರಿಸಿ ಗ್ರಾಫಿಕ್ (ನಕಲಿ) ಭಾವಚಿತ್ರಗಳನ್ನು ಸೃಷ್ಟಿಸಿ ಕಾಮಗಾರಿ ಅನುದಾನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸತ್ತವರ ಹೆಸರಿನಲ್ಲಿ ಹಾಜರಾತಿ ಹಾಕಿ ಸರ್ಕಾರದ ಅನುದಾನ ಬಿಡುಗಡೆಗೊಳಿಸಿದ ಪಿಡಿಒ ದೇವಮ್ಮ, ಕಂಪ್ಯೂಟರ್ ಆಪರೇಟರ್ ಬಸವರಾಜ ಸ್ವಾಮಿ ಅಮಾನತು ಮಾಡಿಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಜರುಗಿದ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು.
ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಜನರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ರೈತ ಸಂಘದ ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ, ಪ್ರಮುಖರಾದ ಕೆ.ಗಿರಿಲಿಂಗಸ್ವಾಮಿ, ಸೈಯದ್ ಅಬ್ಬಾಸಅಲಿ ಇದ್ದರು.