

ಕೆ.ಕೆಂಚಪ್ಪ ಮೊಳಕಾಲ್ಮೂರು
ಪ್ರಸಕ್ತ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾದ ಕಾರಣ ಮೊಳಕಾಲ್ಮೂರಿನಲ್ಲಿ ನೀರಾವರಿ ಹಾಗೂ ಮಳೆಯಾಶ್ರಿತ ಬೆಳೆಗಳು ಅಧಿಕ ಇಳುವರಿಯ ಭರವಸೆ ಮೂಡಿಸಿವೆ.
ತಾಲೂಕಿನಲ್ಲಿ 32,500 ಹೆಕ್ಟೇರ್ ಕೃಷಿ ಭೂಮಿ ಪೈಕಿ 26 ಸಾವಿರ ಹೆ. ಮಳೆಯಾಶ್ರಿತ ಪ್ರದೇಶವಿದೆ. ತಡವಾಗಿಯಾದರೂ ಮಳೆಯಾದ ಕಾರಣ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.
ಹೂವು ಬಿಡುವ ಹಂತದಲ್ಲಿರುವ ಶೇಂಗಾ, ತೊಗರಿ, ಹರಳು ಇತ್ಯಾದಿ ಬೆಳೆಗಳಲ್ಲಿ ಮಧ್ಯಂತರ ಬೇಸಾಯ ಹಾಗೂ ಕಳೆ ತೆಗೆಯುವ ಕಾರ್ಯ ಭರದಿಂದ ಸಾಗಿದೆ.
ಎಂದಿಗೂ ಎಳ್ಳು ಬೆಳೆಯದ ಈ ಭಾಗದ ರೈತರು ಈ ವರ್ಷ ಆರಂಭದಲ್ಲೇ ಸುರಿದ ಮುಂಗಾರಿಗೆ ಬಿತ್ತನೆ ಮಾಡಿದ ಫಲವಾಗಿ ಉತ್ತಮ ಇಳುವರಿ ನಿರೀಕ್ಷಿಸಿದ್ದಾರೆ.
ಬೆಳೆಗಳ ಪೋಷಕಾಂಶಗಳ ನಿರ್ವಹಣೆಗೆ ಅಗತ್ಯ ಗೊಬ್ಬರ ಹಾಗೂ ರೋಗ ಹತೋಟಿಗೆ ಮುನ್ನೆಚ್ಚರಿಕೆ ಕ್ರವ ುವಹಿಸಲು ಕೃಷಿ ವಿಜ್ಞಾನಿಗಳ ಶಿಫಾರಸು ತಪ್ಪದೆ ಪಾಲಿಸಲು ಕೃಷಿ ಇಲಾಖೆ ಸೂಚಿಸಿದೆ.
ತೇವಾಂಶ ವಾತಾವರಣದಲ್ಲಿ ಬೆಳೆಗಳು ಉತ್ಕೃಷ್ಠವಾಗಿ ಇಳುವರಿ ಬರಲು ಮಧ್ಯಂತರ ರಸಗೊಬ್ಬರ ಯೂರಿಯಾ ಎನ್‌ಪಿಕೆ ಮಿಶ್ರಣ ಗೊಬ್ಬರ, ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ, ದ್ರವರೂಪದ ರಸಗೊಬ್ಬರ ಸಿಂಪಡಿಸಲು ಸಲಹೆ ನೀಡಲಾಗಿದೆ.
ವಿಶೇಷವಾಗಿ ಶೇಂಗಾ ಬೆಳೆಯಲ್ಲಿ ಅಕ್ಕಡಿ ಬೆಳೆ ಪದ್ಧತಿ ಇದ್ದರೆ ಕೀಟ ಬಾಧೆ ಸುಧಾರಿಸಲಿದೆ. ಶೇಂಗಾ ಬೆಳೆಯಲ್ಲಿ ಸತತ ನಷ್ಟ ಅನುಭವಿಸಿದ ರೈತರು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಈ ಬಾರಿ ತೊಗರಿ, ಔಡಲ, ಮೆಕ್ಕೆಜೋಳ, ಹತ್ತಿ ಇತ್ಯಾದಿ ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ.
ಪ್ರತಿ ವರ್ಷ 28 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶೇಂಗಾ ಬೆಳೆಯುವ ವಾಡಿಕೆ ಇತ್ತಾದರೂ ಕ್ರಮೇಣ ಶೇಂಗಾ ಬೆಳೆ ಪ್ರದೇ ಕುಂಠಿತವಾಗುತ್ತಿದೆ. ಈ ವರ್ಷ 21 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ.
ಹತ್ತಿ 5 ಸಾವಿರ ಹೆ., ತೊಗರಿ 1 ಸಾವಿರ ಹೆ., ಹರಳು 450 ಹೆ., ಮೆಕ್ಕೆಜೋಳ 1200 ಹೆ., ಜೋಳ 750 ಹೆ., ಉಳಿದಂತೆ ಕೊಳವೆ ಬಾವಿ ನೀರಾವರಿ ಮೂಲದ ಬೆಳೆಗಳಿವೆ.