

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಆಗಿರುವ ನಷ್ಟವನ್ನು ಭರಿಸಲು ಈ ಕೂಡಲೇ ರಾಜ್ಯದ ಸುಮಾರು 125 ತಾಲೂಕುಗಳನ್ನು ಹಾಗೂ ಕಲಬುರಗಿ ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಪ್ರದೇಶವೆಂದು ಘೋಷಿಸಲು ಹಾಗೂ ಬಿತ್ತನೆ ಕೈಗೊಂಡ ರೈತರ ಪ್ರತಿ ಎಕರೆಗೆ ಕನಿಷ್ಠ 25000 ಸಾವಿರ ರೂಪಾಯಿಗಳ ಪರಿಹಾರವನ್ನು ನೀಡುವಂತೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
‘ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಶೀಘ್ರವಾಗಿ ವರದಿ ಸಿದ್ಧಪಡಿಸಬೇಕು ಹಾಗೂ ರಾಜ್ಯದ ಹೆಚ್ಚಿನ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಿ ವಿಶೇಷ ಕಾಳಜಿ ವಹಿಸಬೇಕು ಎಂದು ಡಾ.ಅಂಬಾರಾಯ ಅಷ್ಠಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗೆ ಹೋಲಿಸಿದರೆ ಶೇಕಡ 25ರಷ್ಟು ಮಳೆ ಕೊರತೆಯಾಗಿದೆ.
ರಾಜ್ಯದಲ್ಲಿ ಶೇ. 79ರಷ್ಟು ಬಿತ್ತನೆ ಮಾತ್ರ ಆಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಬಿತ್ತನೆಯಾದ ಬೆಳೆಗಳನ್ನೂ ಉಳಿಸಿಕೊಳ್ಳುವುದು ಸಹ ರೈತರಿಗೆ ಕಷ್ಟ. ಹೀಗಾಗಿ ರೈತರ ಸಮಸ್ಯೆಗೆ ಸ್ಪಂದಿಸಲು ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಡಾ. ಅಷ್ಠಗಿ ಒತ್ತಾಯಿಸಿದ್ದಾರೆ.
‘ಈಗ ಶೂನ್ಯ ಬಡ್ಡಿದರ ಹಾಗೂ ರಿಯಾಯ್ತಿ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ ಒದಗಿಸುತ್ತಿರುವುದು ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಡಾ. ಅಂಬಾರಾಯ ಅಷ್ಠಗಿ ಕಳವಳ ವ್ಯಕ್ತಪಡಿಸಿದ್ದಾರೆ.
.........
ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಮಾಡಿರುವ ದೀರ್ಘಾವಧಿ, ಮಾಧ್ಯಮಾವಧಿ,ಅಲ್ಪಾವಧಿ ಹಾಗೂ ಕೃಷಿ ಪರಿಕರಗಳು ಮತ್ತು ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.
ಡಾ.ಅಂಬಾರಾಯ ಅಷ್ಠಗಿ
ರಾಜ್ಯ ಉಪಾಧ್ಯಕ್ಷ, ಬಿಜೆಪಿ ಎಸ್ಸಿ ಮೋರ್ಚಾ- ಕರ್ನಾಟಕ