ಡ್ರೋನ್ ಅತ್ಯುತ್ತಮ ಆವಿಷ್ಕಾರ: ಇಸ್ರೋ ವಿಜ್ಞಾನಿ ವಿ.ಕೆ.ಬಸವರಾಜ್ ಅಭಿಮತ

drone, invention, isro, scientist,
Published on

ಐಮಂಗಲ: ಡ್ರೋನ್ ಉತ್ತಮವಾದ ಆವಿಷ್ಕಾರವಾಗಿದ್ದು ಭದ್ರತೆ, ಸಂಶೋಧನೆ, ಇನ್ನಿತರ ಕೆಲಸಗಳಲ್ಲಿ ನೆರವಾಗಲಿದೆ ಎಂದು ಇಸ್ರೋ ವಿಜ್ಞಾನಿ ವಿ.ಕೆ.ಬಸವರಾಜ್ ಅಭಿಪ್ರಾಯಪಟ್ಟರು.

ಗ್ರಾಮದ ಪೊಲೀಸ್ ತರಬೇತಿ ಶಾಲೆಯ ಸಭಾಂಗಣದಲ್ಲಿ ಸೇವಾನಿರತ ಪೇದೆಗಳಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ಡ್ರೋನ್ ಬಳಕೆ ಮತ್ತು ಮಾಹಿತಿ ನಿರ್ವಹಣೆ ತರಬೇತಿ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ವಿಜ್ಞಾನ ಕ್ಷೇತ್ರದಲ್ಲಿ ದೇಶದ ಅಭಿವೃದ್ಧಿಗಾಗಿ ಪ್ರತಿನಿತ್ಯ ಹೊಸ ಆವಿಷ್ಕಾರಗಳನ್ನು ಮಾಡಲಾಗುತ್ತಿದ್ದು, ಕೆಲ ಪಾತಕ ಶಕ್ತಿಗಳು ಅವುಗಳನ್ನು ಕೆಟ್ಟ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಡ್ರೋನ್ ಬಳಕೆ ಬಗ್ಗೆ ಕಾನೂನಿನ ಚೌಕಟ್ಟಿದ್ದು, ಅದರ ಅರಿವು ಪೊಲೀಸರಿಗೆ ಇದ್ದರೆ ತಪ್ಪುಗಳು ನಡೆದ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ.

ಡ್ರೋನ್ ಬಳಸುವ ಪ್ರದೇಶಗಳನ್ನು ಗ್ರೀನ್, ಯೆಲ್ಲೋ, ರೆಡ್ ಎಂಬ ಮೂರು ವಿಧಗಳಾಗಿ ಮಾಡಲಾಗಿದೆ ಎಂದು ಹೇಳಿದರು.

ಯೆಲ್ಲೋ ವಿಭಾಗದಲ್ಲಿ ಡ್ರೋನ್ ಬಳಸಬೇಕಾದರೆ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಇಂತಿಷ್ಟೇ ಎತ್ತರದಲ್ಲಿ ಹಾರಿಸಬೇಕೆಂಬ ನಿಯಮವಿದೆ. ಕಾನೂನು ನಿಯಮಾನುಸಾರವಾಗಿ ಡ್ರೋನ್ ಹಾರಿಸಬಹುದಾಗಿದೆ.

ಗಣ್ಯ ವ್ಯಕ್ತಿಗಳು ಸಂಚರಿಸುವ ಸ್ಥಳಗಳನ್ನು ರೆಡ್ ಜೋನ್ ಎಂದು ಗುರುತಿಸಲಾಗುವುದು. ಇಂತಹ ಸ್ಥಳಗಳಲ್ಲಿ ದುಷ್ಕೃತ್ಯ ಎಸಗಬಹುದು ಎಂಬ ಉದ್ದೇಶದಿಂದ ಡ್ರೋನ್ ಹಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.

ತರಬೇತಿ ಅವಧಿಯಲ್ಲಿ ಡ್ರೋನ್ ಬಳಸುವ ವಿಧಾನ, ಬಳಕೆಗೆ ಕಾನೂನು ಚೌಕಟ್ಟು, ಪರಿಶೀಲನೆ ಮಾಡುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡುವ ಮೂಲಕ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ಡ್ರೋನ್ ಏರೋನ್ಯಾಟಿಕಲ್ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಡ್ರೋನ್ ಹಾರಿಸುವ ಮೂಲಕ ಬಳಕೆಯ ಬಗ್ಗೆ ವಿವರಿಸಿದರು.

ಸಿಪಿಐ ಬಿ.ಜಿ.ಶಂಕರಪ್ಪ, ಆರ್‌ಪಿಐ ಬಿ.ಪರಶುರಾಮ್, ಪಿಎಸ್‌ಐ ಡಿ.ಜಿ.ಪರಮೇಶ್, ಆರ್‌ಎಸ್‌ಐ ಮಂಜುನಾಥ್, ಡ್ರೋನ್ ಏರೋನ್ಯಾಟಿಕಲ್ ವಿದ್ಯಾರ್ಥಿಗಳು, ತರಬೇತಿ ಶಾಲೆಯ ಸಿಬ್ಬಂದಿ, ಹೊರಾಂಗಣ ಬೋಧಕರು ಮತ್ತು ಸೇವಾನಿರತ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ಡ್ರೋನ್ ನಿರ್ವಹಣೆಯ ತರಬೇತಿ ಆಸಕ್ತಿಕರವಾಗಿದ್ದು, ಇಲ್ಲಿ ಪಡೆದ ಜ್ಞಾನವನ್ನು ನಿವುಗಳು ನಿಮ್ಮ ಸಹೋದ್ಯೋಗಿಗಳೊಂದಿಗೆ ಹಂಚ್ಚಿಕೊಳ್ಳಬೇಕು. ಅವರಲ್ಲೂ ಕೌಶಲ ಜ್ಞಾನ ಬಿತ್ತುವ ಹೊಣೆಗಾರಿಕೆ ವಹಿಸಿಕೊಳ್ಳಬೇಕು.ಪಿ.ಪಾಪಣ್ಣ ಎಸ್ಪಿ, ತರಬೇತಿ ಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net