ಆನೆ ಉಪಟಳ ತಡೆಗೆ ಡ್ರೋನ್ ಕಣ್ಣು

elephant trak
Published on

*ಆತ್ಯಾಧುನಿಕ ಕ್ಯಾಮರಾ, ನೂರಕ್ಕೂ ಹೆಚ್ಚು ನುರಿತ ಸಿಬ್ಬಂದಿಯಿಂದ ಕಾರ್ಯಾಚರಣೆ

ವಿಭೂತಿಕೆರೆ ಶಿವಲಿಂಗಯ್ಯ, ರಾಮನಗರ

ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಸ್ವ-ಸ್ಥಾನದತ್ತ ಮುಖ ಮಾಡಿಸಲು ಡ್ರೋನ್ ಕ್ಯಾಮರಾ ಸಹಿತ ನೂರಕ್ಕೂ ಹೆಚ್ಚು ಸಿಬ್ಬಂದಿ ತಂಡದೊಂದಿಗೆ ಇಂದಿನಿಂದ ಬೃಹತ್ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸನ್ನದ್ಧವಾಗಿದೆ.

ಕಾವೇರಿ ಮತ್ತು ಬನ್ನೇರುಘಟ್ಟ ವನ್ಯಜೀವಿ ಧಾಮಗಳಿಂದ ಜಿಲ್ಲೆಯ ತೆಂಗಿನಕಲ್ಲು, ಅಚ್ಚಲು, ಹಂದಿಗೊಂದಿ, ಚಿಕ್ಕಮಣ್ಣುಗುಡ್ಡೆ, ಕಬ್ಬಾಳು ಅರಣ್ಯ ಪ್ರದೇಶಗಳಿಗೆ ಹಿಂಡು ಹಿಂಡಾಗಿ ಬಂದಿರುವ ಆನೆಗಳು ಉಪಟಳ ನೀಡುತ್ತಿವೆ. ಆನೆಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರೂ ಸಾರ್ವಜನಿಕರ ಟೀಕೆಯಿಂದ ಮುಕ್ತವಾಗುತ್ತಿಲ್ಲ. ಈಗ ಇದಕ್ಕೆಲ್ಲ ಇತಿಶ್ರೀ ಹಾಡಲು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಅರಣ್ಯ ಇಲಾಖೆ, ನುರಿತ ನೂರಕ್ಕೂ ಹೆಚ್ಚು ಸಿಬ್ಬಂದಿ ಮತ್ತು ತಂಡಗಳ ಜತೆಗೆ ಡ್ರೋನ್ ಕ್ಯಾಮರಾ ತಂತ್ರಜ್ಞಾನದಲ್ಲಿ ಆನೆಗಳನ್ನು ಸ್ವಸ್ಥಾನಕ್ಕೆ ಅಟ್ಟಲು ತಯಾರಿ ನಡೆಸಿದೆ.

ಬೃಹತ್ ಕಾರ್ಯಾಚರಣೆ ಮೂಲಕ ಹಂದಿಗೊಂದಿ, ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ಆನೆಗಳನ್ನು ತೆಂಗಿನಕಲ್ಲು ಅರಣ್ಯಕ್ಕೆ ಸೇರಿಸಿ ಅಲ್ಲಿಂದ ನೇರವಾಗಿ ಒಟ್ಟಿಗೆ 10ಕ್ಕೂ ಹೆಚ್ಚು ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ. ಸೋಮವಾರ ಸಂಜೆಯಿಂದಲೇ ಹಂದಿಗೊಂದಿ, ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಪ್ರಾರಂ‘ವಾಗಿದ್ದು, ಮಂಗಳವಾರ ತೆಂಗಿನಕಲ್ಲು ಅರಣ್ಯದಿಂದ ಸ್ವಸ್ಥಾನಕ್ಕೆ ಸೇರಿಸಲು ತಯಾರಿ ಮಾಡಿಕೊಳ್ಳಲಾಗಿದೆ.

ನಾಲ್ಕು ವಿಭಾಗಗಳಲ್ಲಿ ತಂಡ

ಒಂದು ತಂಡದಲ್ಲಿ 25- 30 ಜನರಂತೆ ನಾಲ್ಕು ತಂಡ ರಚನೆ ಆಗಿದ್ದು, ಒಂದು ತಂಡ ಆನೆಗಳನ್ನು ಹಿಮ್ಮೆಟ್ಟಿಸಿದರೆ, ಮತ್ತೊಂದು ತಂಡ ವಾಹನಗಳ ಚಾಲನೆ ಸಿಬ್ಬಂದಿಗೆ ಔಷ‘ಧ, ನೀರು, ಊಟ, ಸಲಕರಣೆ ಸರಬರಾಜು, ಮತ್ತೊಂದು ತಂಡ ಡ್ರೋನ್ ಕ್ಯಾಮರಾ ನಿರ್ವಹಣೆ, ಮಗದೊಂದು ತಂಡ ಆನೆಗಳನ್ನು ಸಾಗ ಹಾಕುವಾಗ ರೈತರಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡುವ ಜತೆಗೆ ಸಿಬ್ಬಂದಿಗೆ ಆನೆ ಸಾಗುವ ಮಾರ್ಗದ ಸೂಚನೆ ನೀಡಲಿದೆ.

ಪ್ರತಿ ತಂಡದಲ್ಲಿ ಸಿಬ್ಬಂದಿ ಜತೆಗೆ ರಾಮನಗರ, ಚನ್ನಪಟ್ಟಣ, ಕನಕಪುರ, ಸಾತನೂರು, ಮಾಗಡಿ ವಲಯಗಳ ವಲಯ ಅರಣ್ಯಾಧಿಕಾರಿಗಳು ಮೇಲುಸ್ತುವಾರಿ ವಹಿಸಲಿದ್ದಾರೆ. ಜತೆಗೆ ಉಪ ವಲಯ ಅರಣ್ಯ ಅಧಿಕಾರಿಗಳು ಸಿಬ್ಬಂದಿ ಜತೆಯಲ್ಲಿರುವರು.

ಬನ್ನೇರುಘಟ್ಟ ಆನೆ

ಪ್ರತಿ ಬಾರಿ ಕಾವೇರಿ ವನ್ಯಜೀವಿಧಾಮದಿಂದ ಬರುತ್ತಿದ್ದ ಆನೆಗಳು, ಕಳೆದ ವಾರ ಬನ್ನೇರುಘಟ್ಟದಿಂದ ಮೂರು ಆನೆಗಳು ಕನಕಪುರ ಅಚ್ಚಲು ಅರಣ್ಯಕ್ಕೆ ಬಂದಿವೆ. ಆ ಆನೆಗಳನ್ನು ಪ್ರತ್ಯೇಕ ತಂಡ ಬನ್ನೇರುಘಟ್ಟಕ್ಕೆ ಸಾಗಿಸಲು ಮಂಗಳವಾರ ಸಂಜೆ ಕಾರ್ಯಾಚರಣೆ ನಡೆಸಲಿದೆ ಎನ್ನಲಾಗಿದೆ.

ಸ್ವಸ್ಥಾನಕ್ಕೆ ಅಟ್ಟಲು ಎಲ್ಲ ತಯಾರಿ

ತೆಂಗಿನಕಲ್ಲು 8, ಚಿಕ್ಕಮಣ್ಣುಗುಡ್ಡೆ 3, ಹಂದಿಗೊಂದಿ 2, ಅಚ್ಚಲು 1, ಕಬ್ಬಾಳು 1 ಇದರ ಜತೆಗೆ ಬನ್ನೇರುಘಟ್ಟದಿಂದ ಬಂದಿರುವ 3 ಆನೆಗಳು ಕಾರ್ಯಾಚರಣೆಯಲ್ಲಿ ಸ್ವಸ್ಥಾನ ಸೇರಲಿವೆ. ಉಳಿದಂತೆ 5 ಆನೆಗಳು ಕಬ್ಬಾಳು ಅರಣ್ಯದತ್ತ ‘ಭಾನುವಾರದ ಕಾರ್ಯಾಚರಣೆಯಲ್ಲಿ ಸಾಗಿವೆ ಎನ್ನಲಾಗಿದೆ. ಅರಣ್ಯ ಇಲಾಖೆ ಮಂಗಳವಾರ 20ಕ್ಕೂ ಹೆಚ್ಚು ಆನೆಗಳನ್ನು ಸ್ವಸ್ಥಾನಕ್ಕೆ ಅಟ್ಟಲು ಎಲ್ಲ ತಯಾರಿ ಮಾಡಿಕೊಂಡಿದೆ.

ಹಿಂಡು ಆನೆಗಳ ಜತೆ ಒಂಟಿ ಆನೆ

ಮೂರು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಗೆ ಸಿಗದೆ ಇಲಾಖೆ ಸಿಬ್ಬಂದಿಗೆ ತಲೆನೋವಾಗಿದ್ದ ಒಂಟಿ ಆನೆಗಳನ್ನು ಆನೆ ಹಿಂಡಿನ ಜತೆ ಸೇರಿಸಿದ್ದೇವೆ. ಅವುಗಳೊಟ್ಟಿಗೆ ಒಂಟಿ ಆನೆಗಳು ಸ್ವಸ್ಥಾನ ಸೇರುತ್ತವೆ ಎಂದು ಇಲಾಖೆ ಹೇಳುತ್ತದೆ. ಆದರೆ, ಅವು ಜತೆ ಸೇರಿವೆಯೇ, ಇಲ್ಲ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತವೆಯೇ ಕಾದು ನೋಡಬೇಕಿದೆ.

ಪ್ರತಿಭಟನೆಗೆ ಸಜ್ಜು

ಆನೆಗಳ ಉಪಟಳದಿಂದ ರೋಸಿಹೋಗಿರುವ ರೈತರು, ರೈತ ಸಂಘಟನೆಗಳ ಜತೆಗೂಡಿ ಬೃಹತ್ ಮಟ್ಟದಲ್ಲಿ ಡಿ. 12 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅರಣ್ಯ ಮಂತ್ರಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲೆಗೆ ಬರಬೇಕು. ಆನೆಗಳ ಉಪಟಳ ಅರಿಯಬೇಕು, ರೈತರ ಕಷ್ಟ ಕೇಳಬೇಕು. ಆನೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟಿಸಲು ಮುಂದಾಗಿದ್ದಾರೆ.

ಹದಿಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಆನೆಗಳ ಉಪಟಳದಿಂದ ರೈತರ ಬದುಕು ನಾಶವಾಗಿದೆ. 1 ಸಾವಿರ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಇಲಾಖೆ ಕಾರ್ಯಾಚರಣೆ ಅಂದಿನ ದಿನಕ್ಕಷ್ಟೇ ಎಂಬಂತಾಗಿದೆ. ಆದರೆ, ಇದು ಜಿಲ್ಲೆಯ ಅಧಿಕಾರಿಗಳಿಂದ ಸಾಧ್ಯವಾಗುವುದಿಲ್ಲ. ಅರಣ್ಯ ಮಂತ್ರಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಬಂದು ಸಮಸ್ಯೆ ಅರಿತು ಶಾಶ್ವತ ಪರಿಹಾರ ನೀಡಿದಾಗಷ್ಟೇ ಆನೆಗಳ ನಿಯಂತ್ರಣ ಸಾಧ್ಯ.ಸಿ ಪುಟ್ಟಸ್ವಾಮಿ, ಮುಖಂಡರು, ರೈತ ಸಂಘಟನೆ.ನೂರಕ್ಕೂ ಹೆಚ್ಚು ನುರಿತ ಸಿಬ್ಬಂದಿ ತಂಡದ ಜತೆಗೆ ಡ್ರೋನ್ ಕ್ಯಾಮರಾ ಸಹಾಯದಿಂದ ತೆಂಗಿನಕಲ್ಲು ಅರಣ್ಯದಿಂದ ಕಾರ್ಯಾಚರಣೆ ನಡೆಸಲಾಗುತ್ತದೆ. ಯಶಸ್ವಿಯಾಗುವ ಭರವಸೆ ಸಿಕ್ಕಿದೆ. ಸ್ವಸ್ಥಾನ ತಲುಪುವವರೆಗೂ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಯಲಿದೆ. ರಾಮಕೃಷ್ಣಪ್ಪ, ಡಿಸಿಎಫ್, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net