ಶಿಕ್ಷಣ ರಂಗದ ದ್ರೋಣಾಚಾರ್ಯ: ಹರ್ಷ ಇನ್​ಸ್ಟಿಟ್ಯೂಟ್​ನ ಸಂಸ್ಥಾಪಕ ಎಸ್. ಶಿವಕುಮಾರ್ ಸಾಧನೆಗೆ ಸಂದ ಗೌರವ! Vijayaratna Award 2025

Vijayaratna Award 2025
Published on

Vijayaratna Award 2025 : ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಎಸ್. ಶಿವಕುಮಾರ್ ಅವರು ಹರ್ಷ ಇನ್​ಸ್ಟಿಟ್ಯೂಟ್ ಮೂಲಕ ಜ್ಞಾನವನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಕೈಗೆಟುಕುವ ದರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಪಾಲಿನ ದ್ರೋಣಾಚಾರ್ಯ ಆಗಿದ್ದಾರೆ. ಜೀವನದಲ್ಲಿ ಹಲವು ಏಳು-ಬೀಳು ಕಂಡಿರುವ ಇವರು ನಿರಂತರ ಪ್ರಯತ್ನದಿಂದ ಹರ್ಷ ಇನ್​ಸ್ಟಿಟ್ಯೂಟ್ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ. ಒಂದು ಕಾಲದಲ್ಲಿ ಚಾಲಕನಾಗಿದ್ದ ಇವರು ಇಂದು ಮಾಲೀಕನಾಗಿ ನೂರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಶ್ರೀಮಂತಿಕೆ ಇದ್ದರೂ ಸರಳವಾಗಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಾಧಕನ ಮುಡಿಗೆ ವಿಜಯರತ್ನ ಪ್ರಶಸ್ತಿ ಸೇರಿರುವುದು ಸರ್ವರೂ ಹೆಮ್ಮೆ ಪಡುವ ವಿಷಯವಾಗಿದೆ.

‘ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ’ ಎಂದು ಬಲವಾಗಿ ನಂಬಿರುವ ಈ ವ್ಯಕ್ತಿ, ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದು, ಛಲ ಬಿಡದೆ ನಿರಂತರ ಪ್ರಯತ್ನದಿಂದ ಹರ್ಷ ಇನ್​ಸ್ಟಿಟ್ಯೂಟ್ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ. ಈ ಅಪೂರ್ವ ಸಾಧಕನ ಹೆಸರು- ಎಸ್. ಶಿವಕುಮಾರ್. ನೆಲಮಂಗಲದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಹರ್ಷ ಇನ್​ಸ್ಟಿಟ್ಯೂಟ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಸಂಸ್ಥೆ ಜನರಿಗೆ ಕೈಗೆಟುಕುವ ದರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುತ್ತಿದೆ.

S Shivakumar

ಶಿವಕುಮಾರ್ ಅವರು ದೊಡ್ಡಬಳ್ಳಾಪುರದ ರಾಮೇಶ್ವರ ಗ್ರಾಮದವರು. ಗಿರಿಜಾ ಬಾಳಸಂಗಾತಿಯಾಗಿದ್ದು, ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಮೊದಲನೇ ಮಗ ಹರ್ಷ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರೆ, ಎರಡನೇ ಮಗ ಯಶಸ್ 3ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ.

ಆಗ ಚಾಲಕ- ಈಗ ಅಧ್ಯಕ್ಷ: ಸ್ವಗ್ರಾಮ ರಾಮೇಶ್ವರ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿವರೆಗೆ ವ್ಯಾಸಂಗ ಮಾಡಿದ ಶಿವಕುಮಾರ್, ಮನೆಯಲ್ಲಿ ಕಡುಬಡತನವಿದ್ದ ಕಾರಣ ಅವರ ತಾಯಿ, ಶಿವಗಂಗೆಯ ಕರಿತಿಮ್ಮಯ್ಯನಪಾಳ್ಯದಲ್ಲಿ (ಕಂಬಾಳ) ಇರುವ ತನ್ನ ಸಹೋದರನ ಮನೆಗೆ ಕಳುಹಿಸಿದ್ದರು. ಅಲ್ಲಿ 6ನೇ ತರಗತಿವರೆಗೆ ವ್ಯಾಸಂಗ ಮಾಡಿದರು. ನಂತರ ದೊಡ್ಡಬಳ್ಳಾಪುರ ಹಿಂದುಳಿದ ವರ್ಗಗಳ ಹಾಸ್ಟೆಲ್​ಗೆ ಸೇರ್ಪಡೆಯಾದರು. ಅಲ್ಲಿ 10ನೇ ತರಗತಿವರೆಗೂ ಓದಿದರು. ಕೆಲವು ವರ್ಷಗಳ ನಂತರ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದರು. ಎಸ್.ಶಿವಕುಮಾರ್ ಅವರ ತಾಯಿಯ ಮತ್ತೊಬ್ಬ ಸಹೋದರ ಅರಣ್ಯ ಇಲಾಖೆಯಲ್ಲಿದ್ದರು. ಶಿವಮೊಗ್ಗದಲ್ಲಿದ್ದ ಅವರ ಮನೆಗೆ ಶಿವಕುಮಾರ್ ಹೋಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಆನಂತರ ಅವರಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕೋಲಾರ ಮತ್ತು ಬನ್ನೇರುಘಟ್ಟಕ್ಕೆ ಅವರ ಜತೆ ಕೆಲಸಕ್ಕೆ ಹೋದರು. 1991ರಲ್ಲಿ ಹೈಕೋರ್ಟ್ ವಕೀಲರಾಗಿದ್ದ ಕೆ.ಎಲ್. ಮಂಜುನಾಥ್ (ನಿವೃತ್ತ ನ್ಯಾಯಾಧೀಶರು) ಅವರ ಕಚೇರಿ ಸಿಬ್ಬಂದಿ ಮತ್ತು ವಾಹನ ಚಾಲಕರಾಗಿ ಕೆಲಸಕ್ಕೆ ಸೇರಿದರು.

S Shivakumar 2 (1)
ಕೈ ಹಿಡಿದ ಉದ್ಯಮ: ಏನಾದರೂ ಸ್ವಂತವಾಗಿ ಮಾಡಬೇಕು ಎಂಬ ತುಡಿತವನ್ನು ಮೊದಲಿನಿಂದಲೂ ಹೊಂದಿದ್ದ ಶಿವಕುಮಾರ್, 1992ರಲ್ಲಿ ಚಾಲಕ ವೃತ್ತಿ ತೊರೆದು ಸಂಜಯನಗರದ ಆರ್​ಎಂವಿ ಆಸ್ಪತ್ರೆಯಲ್ಲಿ ಡಾ. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದರು. ಇಲ್ಲಿ ಐದು ವರ್ಷಗಳ ಸೇವೆ ಸಲ್ಲಿಸಿದ ನಂತರ ಸ್ವಂತವಾಗಿ ಆಂಬುಲೆನ್ಸ್ ಸರ್ವೀಸ್ ಪ್ರಾರಂಭಿಸಿದರು. ನಂತರ ಅನನ್ಯ ಮತ್ತು ಶ್ಯಾನ್​ಭೋಗ್ ಆಸ್ಪತ್ರೆ ಮಾಲೀಕ ಡಾ. ರಾಜಶೇಖರ್ ಅವರು ಶಿವಕುಮಾರ್​ರನ್ನು ಕರೆದು ‘ಆಸ್ಪತ್ರೆ ಮಾಡೋಣ ಬಾ’ ಎಂದು ಆಹ್ವಾನಿಸಿದರು. ಈಗಿನ ಪೀಪಲ್ ಟ್ರೀ ಆಸ್ಪತ್ರೆಯನ್ನು 1998ರಲ್ಲಿ ಭೋಗ್ಯಕ್ಕೆ ಪಡೆದು ಮುನ್ನಡೆಸಿದ್ದರು. ಬಳಿಕ 2003ರಲ್ಲಿ ನರ್ಸಿಂಗ್ ಶಾಲೆ ಆರಂಭಿಸಿದರು. ಆನಂತರ ಎಸ್. ಶಿವಕುಮಾರ್ ಮುಟ್ಟಿದ್ದೆಲ್ಲವೂ ‘ಚಿನ್ನ’ವಾಯಿತು.

ಸಹೋದರನ ಸಾವು ಆಸ್ಪತ್ರೆ ನಿರ್ಮಾಣಕ್ಕೆ ನಾಂದಿ

ಎಸ್. ಶಿವಕುಮಾರ್ ಸಹೋದರನಿಗೆ ಕುಣಿಗಲ್ ವೃತ್ತದ ಬಳಿ ಅಪಘಾತವಾಗಿತ್ತು. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆ ತೆಗೆದುಕೊಂಡು ಹೋಗಲಾಯಿತು, ಆ ವೇಳೆ ಅವರು 2-3 ಗಂಟೆ ಉಸಿರಾಡುತ್ತಿದ್ದರು. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮೃತಪಟ್ಟಿದ್ದರು. ಈ ನೋವು ಶಿವಕುಮಾರ್ ಅವರನ್ನು ಬಹಳ ಕಾಡಿತ್ತು. ಏನಾದರೂ ಮಾಡಿ ಈ ನೆಲಮಂಗಲ ಭಾಗದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ವಿುಸಬೇಕು ಎಂದು ಪಣ ತೊಟ್ಟರು. ಹೀಗಾಗಿ 2004ರಲ್ಲಿ ಮಡದಿಯ ಸಹೋದರರ ಜತೆಗೂಡಿ ಹರ್ಷ ಆಸ್ಪತ್ರೆ ಆರಂಭಿಸಿದ್ದರು. 2005ರಲ್ಲಿ ಆಸ್ಪತ್ರೆ ಉದ್ಘಾಟನೆಗೊಂಡಿತು. ಕೆಲ ವರ್ಷಗಳ ಹಿಂದೆ ನೆಲಮಂಗಲ, ಕುಣಿಗಲ್ ಮತ್ತು ತುಮಕೂರು ರಸ್ತೆಗಳು ಏಕಪಥವಾಗಿದ್ದವು. ಹೀಗಾಗಿ ಹೆಚ್ಚಿನ ಅಪಘಾತಗಳಾಗುತ್ತಿದ್ದವು. ಅಪಘಾತಗಳಾದ ಸಂದರ್ಭದಲ್ಲಿ ಹರ್ಷ ಆಸ್ಪತ್ರೆಯಲ್ಲಿ ಮೊದಲು ರೋಗಿಗಳಿಗೆ ಚಿಕಿತ್ಸೆ ನೀಡಿ, ಆನಂತರ ಹಣ ಕಟ್ಟಿಸಿಕೊಳ್ಳಲಾಗುತ್ತಿತ್ತು. ಆ ಕ್ರಮ ಇಂದಿಗೂ ಮುಂದುವರಿದೆ. ಆಸ್ಪತ್ರೆಯಲ್ಲಿ ಈವರೆಗೆ ಸಾವಿರಾರು ರೋಗಿಗಳಿಗೆ ಜೀವದಾನ ಮಾಡಿದ್ದಾರೆ.

ಹರ್ಷ ಸಂಸ್ಥೆಯ ಕೋರ್ಸ್​ಗಳು

ಹರ್ಷ ಇಂಟನ್ಯಾಷನಲ್ ಪಬ್ಲಿಕ್ ಸ್ಕೂಲ್, ಹರ್ಷ ಸ್ಕೂಲ್ ಆಫ್ ನರ್ಸಿಂಗ್, ಹರ್ಷ ಇನ್​ಸ್ಟಿಟ್ಯೂಟ್ ಆಫ್ ಫಾರ್ಮಸಿ, ಹರ್ಷ ಇನ್​ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ಹರ್ಷ ಇನ್​ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಹರ್ಷ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಹರ್ಷ ಇನ್​ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್.

52 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಪ್ರಸ್ತುತ ವರ್ಷದಿಂದ ಶಿವಕುಮಾರ್ ಪತ್ನಿ ಗಿರಿಜಾ ಅವರ ಹೆಸರಿನಲ್ಲಿ 52 ವಿದ್ಯಾರ್ಥಿಗಳಿಗೆ 1.40 ಕೋಟಿ ರೂ. ವೆಚ್ಚದಲ್ಲಿ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಸಿಂಗಲ್ ಪೇರೆಂಟ್ ಇರುವ ಮಕ್ಕಳಿಗೆ ಪದವಿವರೆಗೂ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತದೆ. ಇದಕ್ಕಾಗಿ ಸಮಿತಿ ರಚಿಸಲಾಗಿದೆ. ಆ ಸಮಿತಿ ನೀಡುವ ಶಿಫಾರಸಿನ ಮೇರೆಗೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಸಿಬ್ಬಂದಿಯ ಮಕ್ಕಳಿಗೆ ಶೇ.50 ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ ಪ್ರತಿವರ್ಷ ಗಿರಿಜಾ ಅವರು ವರಮಹಾಲಕ್ಷ್ಮೀ ಹಬ್ಬದಂದು ಸುಮಾರು 250 ಮಹಿಳಾ ಸಿಬ್ಬಂದಿಗೆ ಸೀರೆ ಮತ್ತು ಊಟದ ವ್ಯವಸ್ಥೆ ಮಾಡುತ್ತಾರೆ. ಹರ್ಷ ಸಂಸ್ಥೆಯ ವತಿಯಿಂದ ಪ್ರತಿ ತಿಂಗಳು ಉಚಿತ ಆರೋಗ್ಯ ಶಿಬಿರ ಮಾಡಲಾಗುತ್ತಿದೆ. ಈ ಸಂಸ್ಥೆಯ ಸಮಾಜಮುಖಿ ಕೆಲಸ ಕಾರ್ಯಗಳಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ನರ್ಸ್ ಕೋರ್ಸ್​ಗೆ ಹೆಚ್ಚಿನ ಒತ್ತು

ನಮ್ಮ ದೇಶಕ್ಕೆ 10 ಲಕ್ಷ ನರ್ಸ್​ಗಳ ಕೊರತೆಯಿದೆ. ಇದನ್ನು ಮನಗಂಡು ನಮ್ಮ ಸಂಸ್ಥೆಯಲ್ಲಿ ನರ್ಸ್ ಕೋರ್ಸ್​ಗೆ ಒತ್ತು ನೀಡಲಾಗಿದೆ. ನಮ್ಮಲ್ಲಿ ಜರ್ಮನ್ ಮತ್ತ ಜಪಾನ್ ಭಾಷೆಯ ಕ್ಲಾಸ್​ಗಳನ್ನು ನಡೆಸಲಾಗುತ್ತಿದೆ. ಆ ದೇಶದಿಂದ ಬಂದವರು ಉಚಿತವಾಗಿ ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಆ ದೇಶದ ಜನರು ನಮ್ಮ ದಕ್ಷಿಣ ಭಾರತದ ನರ್ಸ್​ಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಲ್ಲಿಯೂ ಕೇರಳದ ಮೂಲದ ನರ್ಸ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ.

S Shivakumar 8 (1)

5,000 ಗಿಡಗಳ ಪೋಷಣೆ

ದೊಡ್ಡಬಳ್ಳಾಪುರದಲ್ಲಿ 2021ರಲ್ಲಿ 10 ಎಕರೆ ಖರೀದಿಸಲಾಗಿದ್ದು, ಅಲ್ಲಿ 7 ಎಕರೆಯಲ್ಲಿ ಟಿಶ್ಯೂ ಕಲ್ಚರ್ ಮಾಡಿ 2,500 ತೇಗ ಹಾಗೂ 2,500 ಶ್ರೀಗಂಧದ ಗಿಡಗಳನ್ನು ನೆಡಲಾಗಿದೆ. ಇದೇ ಸ್ಥಳದಲ್ಲಿ ಎರಡು ಎಕರೆಯಲ್ಲಿ ಐ ವ್ಯಾಲ್ಯೂ ಕಾಂಕ್ರೀಟ್ ಬ್ಲಾಕಿಂಗ್ ತಯಾರಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಗುಣಮಟ್ಟದ ಸಿಮೆಂಟ್ ಇಟ್ಟಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

4,000 ವಿದ್ಯಾರ್ಥಿಗಳ ವ್ಯಾಸಂಗ

ಶಿವಕುಮಾರ್ ಅವರು 2006ರಲ್ಲಿ ಯುರೋ ಕಿಡ್ಸ್ ಶಾಲೆ ತೆರೆದರು. ಅದೇ ವರ್ಷ ಫಿಜಿಯೋಥೆರಪಿ ಕಾಲೇಜು ಕೂಡ ಆರಂಭಿಸಲಾಯಿತು. ನಂತರ 2014 ಸಿಬಿಎಸ್​ಇ ಶಾಲೆಗೆ ಚಾಲನೆ ಲಭಿಸಿತು. ನರ್ಸರಿಯಿಂದ 12ನೇ ತರಗತಿವರೆಗೂ 1,400 ವಿದ್ಯಾರ್ಥಿಗಳು ಇದ್ದಾರೆ. ಎರಡು ನರ್ಸಿಂಗ್ ಕಾಲೇಜಿನಲ್ಲಿ ಸಾವಿರ ವಿದ್ಯಾರ್ಥಿಗಳಿರುವುದು ವಿಶೇಷ. ಫಿಜಿಯೋಥೆರಪಿಯಲ್ಲಿ 400 ವಿದ್ಯಾರ್ಥಿಗಳಿದ್ದಾರೆ. ಅಲೈಡ್ ಮತ್ತು ಪ್ಯಾರಾಮೆಡಿಕಲ್​ನಲ್ಲಿ 400 ವಿದ್ಯಾರ್ಥಿಗಳು, ಫಾರ್ಮಸಿಯಲ್ಲಿ 400, ಬಿಕಾಂ, ಎಂಬಿಎ, ಎಕಾಂನಲ್ಲಿ 700 ಮಂದಿ ಇದ್ದಾರೆ. ಒಟ್ಟಾರೆ 4 ಸಾವಿರ ವಿದ್ಯಾರ್ಥಿಗಳಿದ್ದಾರೆ. 500 ಸಿಬ್ಬಂದಿ ಇದ್ದಾರೆ. ಶೇ.90 ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವುದು ಈ ಸಂಸ್ಥೆಯ ವೈಶಿಷ್ಟ್ಯ.

ನಮ್ಮ ಮನೆಯಲ್ಲಿ ಮೊದಲಿನಿಂದಲೂ ವಿಜಯವಾಣಿ ಪತ್ರಿಕೆಯನ್ನು ತರಿಸುತ್ತಿದ್ದೇವೆ. ನಮ್ಮ ಸಮಾಜ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ನೀಡಿರುವುದು ಹೆಚ್ಚಿನ ಸಂತೋಷ ಉಂಟು ಮಾಡಿದೆ. ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿಯಾದ ಕೆಲಸ ಮಾಡಲು ಸ್ಪೂರ್ತಿ ನೀಡಿದೆ. | ಎಸ್. ಶಿವಕುಮಾರ್, ಹರ್ಷ ಇನ್​ಸ್ಟಿಟ್ಯೂಷನ್ ಅಧ್ಯಕ್ಷ

ನುರಿತ ಸಿಬ್ಬಂದಿ ಕೈಗೆಟುಕುವ ದರ

ಹರ್ಷ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನುರಿತ ಸಿಬ್ಬಂದಿ ಇದ್ದಾರೆ. ಅವರಿಗೆ ಉತ್ತಮ ವೇತನ ನೀಡಲಾಗುತ್ತಿದೆ. ವಸತಿ, ಬಸ್ ವ್ಯವಸ್ಥೆ, ಕೌನ್ಸೆಲಿಂಗ್, ಸ್ಮಾರ್ಟ್ ಕ್ಲಾಸ್, ನೋಟ್​ಬುಕ್, ಪಠ್ಯಪುಸ್ತಕ, ಸಮವಸ್ತ್ರ, ಶೂ, ಕಂಪ್ಯೂಟರ್ ಲ್ಯಾಬ್, ಯೋಗ, ಡಾನ್ಸ್, ಆರ್ಟ್ ಆಂಡ್ ಕ್ರಾಫ್ಟ್, ಸ್ಪೋರ್ಟ್ಸ್ ಮತ್ತು ಹವಾನಿಯಂತ್ರಿತ ಆಡಿಟೋರಿಯಂ ಸೇರಿ ಉತ್ತಮ ಮೂಲಸೌಕರ್ಯ ಒದಗಿಸಲಾಗಿದೆ. ಸಿಬಿಎಸ್​ಇ, ನೀಟ್, ಪೊಲೀಸ್ ಪರೀಕ್ಷೆ, ನವೋದಯ ಸೇರಿ ಹಲವು ಪರೀಕ್ಷೆಗಳನ್ನು ಇಲ್ಲಿಯೇ ನಡೆಸಲಾಗುತ್ತದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಹರ್ಷ ಶಾಲೆಯ ಮಕ್ಕಳನ್ನು ಪರೀಕ್ಷೆಗೆ ಬೇರೆ ಶಾಲೆಗೆ ಕಳುಹಿಸಿಕೊಡಲಾಗುತ್ತದೆ. ಇಲ್ಲಿನ ಸಿಬ್ಬಂದಿ ವರ್ಗ ಮತ್ತು ಕುಟುಂಬದವರ ಬೆನ್ನಿಗೆ ಶಿವಕುಮಾರ್ ಸದಾ ನಿಂತಿದ್ದಾರೆ.

S Shivakumar 7 (1)

ಅಳಿಲು ಸೇವೆ

ಹರ್ಷ ಸಂಸ್ಥೆಯು ಶ್ರೀನಿವಾಸ ಚಾರಿಟಬಲ್ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ತನ್ನ ಶಾಲೆಯ ಶಿಕ್ಷಕರನ್ನು ಹಿಂದುಳಿದಿರುವ ಮತ್ತು ಗ್ರಾಮಾಂತರ ಸರ್ಕಾರಿ ಶಾಲೆಗೆ ಕಳುಹಿಸಿ ಕೊಟ್ಟು, 10ನೇ ತರಗತಿ ಮಕ್ಕಳಿಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ, ಜೀವಶಾಸ್ತ್ರ ಪಾಠ ಮಾಡಲಾಗುತ್ತಿದೆ. ಇವರ ಶಾಲೆಯ ಲ್ಯಾಬ್ ಅನ್ನು ಬಳಸಿಕೊಳ್ಳಲು ನೀಡಲಾಗುತ್ತಿದೆ. ಜತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. 200-300 ಮಕ್ಕಳಿಗೆ ಕಳೆದ ಮೂರು ತಿಂಗಳಿನಿಂದ ಉಚಿತ ಪಾಠ ಮಾಡಲಾಗುತ್ತಿದೆ. ಇನ್ಮುಂದೆ ಇದನ್ನು ಪ್ರತಿ ವರ್ಷ ಮಾಡಲಾಗುತ್ತದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಪಿಐಎಲ್ ಹಾಕಿದ್ದರು

ಎಸ್. ಶಿವಕುಮಾರ್ ಅವರು ಕರೊನಾ ಕಾಲದಲ್ಲಿ ತಮ್ಮ ಸಿಬ್ಬಂದಿಗೆ ಪೂರ್ತಿ ಸಂಬಳ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿ ಸಾವಿರಾರು ಜನರನ್ನು ಬದುಕಿಸಿದ್ದಾರೆ. ರೆಮ್​ಸಿವಿರ್ ಇಂಜೆಕ್ಷನ್ ಕೊರತೆ ಉಂಟಾಗಿತ್ತು. ಅದನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದರ ವಿರುದ್ಧ ಶಿವಕುಮಾರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಹಾಕಿದ್ದರು. ಆನಂತರ ಅದಕ್ಕೆ ಒಂದು ಸಮಿತಿಯನ್ನು ಸರ್ಕಾರ ರಚಿಸಿತ್ತು. ಬಳಿಕ ಎಲ್ಲರಿಗೂ ರೆಮ್​ಸಿವಿರ್ ದೊರಕುವಂತಾಗಿತ್ತು. ಬೇರೆ ಖಾಸಗಿ ಆಸ್ಪತ್ರೆಗಳು ಕರೊನಾ ವೇಳೆ ಐಸಿಯುಗೆ ಪ್ರತಿದಿನ ಒಂದೂವರೆಯಿಂದ 2 ಲಕ್ಷ ರೂ.ವರೆಗೂ ಶುಲ್ಕ ಪಡೆಯುತ್ತಿದ್ದರು. ಆ ಸಂಬಂಧವೂ ಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದರು ಶಿವಕುಮಾರ್. ಅದಕ್ಕೂ ಸರ್ಕಾರ ಸಮಿತಿ ರಚನೆ ಮಾಡಿತ್ತು.

ಹರ್ಷ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಜತೆಗೆ ಕೈಗೆಟುಕುವ ದರದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಮಹಿಳೆಯರ ಸಬಲೀಕರಣ ಮಾಡಲು ನಮ್ಮ ಹರ್ಷ ಸಂಸ್ಥೆಯಲ್ಲಿ ಶೇ.90 ಮಹಿಳೆಯರಿಗೆ ಉದ್ಯೋಗವನ್ನು ನೀಡಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಹರ್ಷ ಸಂಸ್ಥೆಯನ್ನು ಒಂದು ಯೂನಿವರ್ಸಿಟಿ ಮಾಡಬೇಕು ಎಂಬ ಅಭಿಲಾಷೆ ಇದೆ. | ಎಸ್. ಶಿವಕುಮಾರ್, ಹರ್ಷ ಇನ್​ಸ್ಟಿಟ್ಯೂಷನ್ ಅಧ್ಯಕ್ಷ

ಹೊಸ ಕ್ಯಾಂಪಸ್

ಜಕ್ಕನಹಳ್ಳಿಯಲ್ಲಿ ಇತ್ತೀಚೆಗೆ 30 ಎಕರೆ ವಿಶಾಲ ಪ್ರದೇಶದಲ್ಲಿ ಹೊಸ ಕ್ಯಾಂಪಸ್ ಆರಂಭಿಸಲಾಗಿದೆ. ಅಲ್ಲಿ ಫಾರ್ಮಸಿ ಕಾಲೇಜು, ಎಂಬಿಎ, ಎಂಸಿಎ, ಬಿಕಾಂ, ಬಿಸಿಎ, ನರ್ಸಿಂಗ್ ಕಾಲೇಜು ಆರಂಭಿಸಲಾಗಿದೆ. ಜತೆಗೆ ಈ ಶೈಕ್ಷಣಿಕ ವರ್ಷದಿಂದ ಇಂಜಿನಿಯರಿಂಗ್ ಮತ್ತು ಕಾನೂನು ಕಾಲೇಜ್ ಆರಂಭಿಸಲಾಗುತ್ತದೆ. 1,600 ವಿದ್ಯಾರ್ಥಿಗಳು ಹಾಸ್ಟೆಲ್​ನಲ್ಲಿದ್ದಾರೆ. ಇವರಲ್ಲಿ 700 ಹೆಣ್ಣುಮಕ್ಕಳಿರುವುದು ಗಮನಾರ್ಹ.

S Shivakumar 4 (1)

ಯೂನಿವರ್ಸಿಟಿ ಮಾಡುವ ಅಭಿಲಾಷೆ

ಅಂಗನವಾಡಿಯಲ್ಲಿ ಎಲ್​ಕೆಜಿ ಮತ್ತು ಯುಕೆಜಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ನೆರವಿನ ಹಸ್ತ ಚಾಚಬೇಕು. ಸಾಧ್ಯವಾದರೆ ಕೆಲ ಸರ್ಕಾರಿ ಶಾಲೆಗಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳು ದತ್ತು ತೆಗೆದುಕೊಂಡು ಮುನ್ನಡೆಸಬೇಕು. ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬುದು ನನ್ನ ಹಂಬಲ. ಮುಂದಿನ 5 ವರ್ಷದಲ್ಲಿ ಹರ್ಷ ಸಂಸ್ಥೆಯನ್ನು ವಿಶ್ವವಿದ್ಯಾಲಯವಾಗಿಸುವ ಅಭಿಲಾಷೆ ಇದೆ ಎಂದು ಶಿವಕುಮಾರ್ ಹೇಳುತ್ತಾರೆ.

10 ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿವಕುಮಾರ್ ಸರ್ ಮತ್ತು ಅವರ ಕುಟುಂಬ ಸದಸ್ಯರು ಎಲ್ಲರನ್ನು ಬಹಳ ಗೌರವಯುತವಾಗಿ ಕಾಣುತ್ತಾರೆ. ಜತೆಗೆ ಆಯಾರಿಂದ ಹಿಡಿದು ಪ್ರಾಂಶುಪಾಲರವರೆಗೂ ಯಾವುದೇ ತಾರತಮ್ಯ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. | ಪ್ರೀತಿ, ಉಪ ಪ್ರಾಂಶುಪಾಲರು ಹರ್ಷ ಸಂಸ್ಥೆಯಲ್ಲಿ ನುರಿತ ಶಿಕ್ಷಕರು ಇದ್ದಾರೆ. ಪ್ರತಿ ವಿದ್ಯಾರ್ಥಿ ಮೇಲೆ ಕಾಳಜಿ ವಹಿಸಲಾಗುತ್ತದೆ. ಹೀಗಾಗಿ ಇಲ್ಲಿ ಶೇ.100 ಫಲಿತಾಂಶ ಬರುತ್ತಿದೆ. ನಾವು ಇಲ್ಲಿ ಕೆಲಸ ಮಾಡುವಾಗ ನಮಗೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆ ಉಂಟಾಗುತ್ತದೆ. ಏಕೆಂದರೆ ಶಿವಕುಮಾರ್ ಸರ್ ಅವರು ಅಂತಹ ವಾತಾವರಣ ಇರುವಂತೆ ನೋಡಿಕೊಂಡಿದ್ದಾರೆ. | ವೀಣಾ, ವಿಜ್ಞಾನ ವಿಭಾಗದ ಮುಖ್ಯಸ್ಥರು ನಾನು ಕಳೆದ 15 ವರ್ಷಗಳಿಂದ ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸು ತ್ತಿದ್ದೇನೆ. ಕೇವಲ 50 ವಿದ್ಯಾರ್ಥಿ ಗಳಿಂದ ಆರಂಭವಾದ ಈ ಶಾಲೆಯಲ್ಲಿ ಇಂದು 1,500 ವಿದ್ಯಾರ್ಥಿಗಳಿದ್ದಾರೆ. ಶಿವಕುಮಾರ್ ಸರ್ ಮತ್ತು ಅವರ ಮನೆಯ ಸದಸ್ಯರು ಇಲ್ಲಿನ ಸಿಬ್ಬಂದಿ ಮತ್ತು ನೌಕರರನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಹೇಳಿಕೊಡಲಾಗುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಕಲಿಸಲಾಗುತ್ತಿದೆ. | ಪೂರ್ಣಿಮಾ, ಪ್ರೀ ಸ್ಕೂಲ್ ಪ್ರಾಂಶುಪಾಲರು

ನಾರಾಯಣಗೌಡರ ನೆನಪು

ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದ ನಾರಾಯಣ ಗೌಡ ಅವರು ನಮ್ಮ ಸಂಸ್ಥೆಯ ಸಿಇಒ ಆಗಿದ್ದರು. ಶಿಸ್ತುಬದ್ಧವಾದ ವ್ಯಕ್ತಿಯಾದ ಅವರು ನಿವೃತ್ತಿಯ ನಂತರ 9 ವರ್ಷಗಳ ಕಾಲ ಸಿಇಒ ಆಗಿ ಸಮರ್ಥವಾಗಿ ನಮ್ಮ ಸಂಸ್ಥೆಯನ್ನು ಮುನ್ನಡೆಸಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ಇಂದಿಗೂ ಮುಂದುವರಿಯುತ್ತಿದ್ದೇವೆ. ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ನಮ್ಮನ್ನು ಅಗಲಿದರು ಎಂದು ನಾರಾಯಣಗೌಡ ಅವರನ್ನು ಶಿವಕುಮಾರ್ ಸ್ಮರಿಸುತ್ತಾರೆ.

S Shivakumar 6 (1)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net