ನ್ಯಾಯಾಂಗದಲ್ಲಿ ಛಾಪು ಮೂಡಿಸಿದ ಸ್ವಾತಿ: ಅಡ್ವೊಕೇಟ್ ಆಗಿ ಜನಮನ್ನಣೆ ಪಡೆದಿರುವ ಯುವ ವಕೀಲೆ! Vijayaratna Award

Vijayaratna Award
Published on

Vijayaratna Award : ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿ ಈ ಸಾಧಕಿಗೆ ಅಕ್ಷರಶಃ ಅನ್ವಯಿಸುತ್ತದೆ. ಯುಪಿಎಸ್​ಸಿ ಪರೀಕ್ಷೆ ಪಾಸಾಗಿಲ್ಲ ಎಂದು ಕೆಲ ಕಾಲ ಚಿಂತೆಯಲ್ಲಿದ್ದ ಇವರು, ಸಮಯ ವ್ಯರ್ಥ ಮಾಡದೆ ಕೂಡಲೇ ತಮ್ಮ ನಿರ್ಧಾರ ಬದಲಿಸಿ ಕಾನೂನು ಪದವಿ ಪಡೆದು, ಜನಪ್ರಿಯ ವಕೀಲರಾಗಿ ನ್ಯಾಯಾಂಗ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಸ್ವಾತಿ ಲಾ ಅಕಾಡೆಮಿಯನ್ನು ಸ್ಥಾಪಿಸಿ ನೂರಾರು ಕಾನೂನು ವಿದ್ಯಾರ್ಥಿಗಳ ಪಾಲಿಗೆ ದಾರಿದೀಪವಾಗಿದ್ದಾರೆ. ಇವರ ಸಾಧನೆಗೆ ಪಾಲಕರು ಮತ್ತು ಪತಿ ಬೆನ್ನೆಲುಬಾಗಿ ನಿಂತಿದ್ದಾರೆ. ಕುಟುಂಬ ಮತ್ತು ತಮ್ಮ ವೃತ್ತಿಯನ್ನು ಸಮತೋಲನವಾಗಿ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ವಿಜಯವಾಣಿ ಪತ್ರಿಕೆಯು ಪ್ರತಿಷ್ಠಿತ ‘ವಿಜಯರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ.

ಜೀವನದಲ್ಲಿ ನಾವು ಅಂದುಕೊಳ್ಳುವುದೇ ಒಂದು, ಆಗುವುದೇ ಇನ್ನೊಂದು. ಇದೇ ರೀತಿ ಈ ಸಾಧಕಿಯ ಬಾಳಿನಲ್ಲಿಯೂ ಹಲವು ತಿರುವುಗಳು ಎದುರಾಗಿವೆ. ಅವುಗಳನ್ನು ಎದೆಗುಂದದೆ ಎದುರಿಸಿದ ಪರಿಣಾಮ ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಸಫಲರಾಗಿದ್ದಾರೆ. ಆ ಸಾಧಕಿಯೇ ಬಿ.ವಿ. ಸ್ವಾತಿ.

Vijayaratna Award Swathi

ಸ್ವಾತಿ ಲಾ ಅಕಾಡೆಮಿ ಸಂಸ್ಥಾಪಕಿ ಮತ್ತು ನಿರ್ದೇಶಕಿಯಾಗಿರುವ ಸ್ವಾತಿ, ಅಡ್ವೊಕೇಟ್ ಆಗಿ ಸಾಧನೆ ಮಾಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಮಗಳನ್ನು ಐಎಎಸ್ ಅಧಿಕಾರಿ ಮಾಡಬೇಕೆಂದು ತಂದೆ ಕನಸು ಕಂಡಿದ್ದರು. ಆದರೆ, ಮಗಳಿಗೆ ಐಟಿ ಕಂಪನಿಯಲ್ಲಿ ದೊಡ್ಡ ಅಧಿಕಾರಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಇತ್ತು. ಈಗ ಪತಿಯ ಆಸೆ ಮತ್ತು ಸಹಕಾರದಿಂದ ಅಡ್ವೊಕೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಸಿಎ, ಎಲ್​ಎಲ್​ಬಿ ಮತ್ತು ಎಲ್​ಎಲ್​ಎಂ ವಿದ್ಯಾಭ್ಯಾಸ ಮಾಡಿ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದಾರೆ.

ಸ್ವಾತಿ ತಂದೆ ಬಿ.ಆರ್. ವೆಂಕಟರಾಮಪ್ಪ ಸೇನೆಯಲ್ಲಿ (ಸಿಐಎಸ್​ಎಫ್) ಸೇವೆ ಸಲ್ಲಿಸುತ್ತಿದ್ದು, ತಾಯಿ ಮಂಜುಳಾ ಗೃಹಿಣಿ ಆಗಿದ್ದಾರೆ. ಸಹೋದರ ಅಕ್ಷಯ್ಕುಮಾರ್ ಐಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಮಯಾಂಕ್ ಯಾದವ್ ದೆಹಲಿ ಹೈಕೋರ್ಟ್​ನಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ್ದಾರೆ. ಇವರಿಗೆ ಮಾಧವ್ ಎಂಬ ಪುತ್ರನಿದ್ದಾನೆ.

Swathi 2

ಸ್ವಾತಿ ಮಾವ ಭೂಪೇಂದ್ರಸಿಂಗ್ ಯಾದವ್, ಮಾಹಿತಿ ಮತ್ತು ಪ್ರಚಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು (ಐಎಎಸ್). ಅತ್ತೆ ಸುನೀತಾ ಯಾದವ್ ಸರ್ಕಾರಿ ಶಾಲೆಯೊಂದರಲ್ಲಿ ಪ್ರಾಂಶುಪಾಲ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತ್ತೆ ಮತ್ತು ಮಾವ ಉತ್ತರಪ್ರದೇಶ ಮೂಲದವರಾಗಿದ್ದು, ಸದ್ಯ ಲಖ್ನೋದಲ್ಲಿದ್ದಾರೆ. ಸ್ವಾತಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬಲವನಹಳ್ಳಿಯವರು. ಇವರ ತಂದೆಯವರದು ರೈತ ಕುಟುಂಬ. ವೆಂಕಟರಾಮಪ್ಪ ಅವರು ಅಮ್ಮನ ಕನಸಿನಂತೆ ಚೆನ್ನಾಗಿ ಓದಿ ಸೇನೆಗೆ ಸೇರಿದರು. ತಂದೆ ಸೇನೆಯಲ್ಲಿರುವ ಹಿನ್ನೆಲೆ ಸ್ವಾತಿ ಅವರ ಕುಟುಂಬಸ್ಥರು ದೇಶದುದ್ದಕ್ಕೂ ಪ್ರಯಾಣ ಮಾಡಿದ್ದಾರೆ.

ಬಹು ಭಾಷಾ ಪ್ರವೀಣೆ: ಸ್ವಾತಿ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದು, ನಂತರ ಮಂಗಳೂರು, ಹೈದರಾಬಾದ್, ದೆಹಲಿ ಸೇರಿ ದೇಶದ ಇತರ ಕಡೆಗಳಲ್ಲಿ ಪ್ರವಾಸ ಮಾಡಿದ್ದು, ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ ಪರಿಚಯ ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಚತುರತೆ ಹೊಂದಿದ್ದಾರೆ. ಇವರು ಕೇಂದ್ರೀಯ ವಿದ್ಯಾಲಯದಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಜೈನ್ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡಿದ್ದಾರೆ. ಐ.ಟಿ. ಕ್ಷೇತ್ರಕ್ಕೆ ಹೋಗುವ ಆಸೆಯನ್ನು ಸ್ವಾತಿ ಹೊಂದಿದ್ದು, ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಿತ್ತು. ಆದರೆ, ಆ ಕೆಲಸಕ್ಕೆ ಹೋಗಲಿಲ್ಲ.

ಮಗಳನ್ನು ಐಎಎಸ್ ಅಥವಾ ಐಪಿಎಸ್ ಮಾಡಬೇಕೆಂಬುದು ತಂದೆಯ ದೊಡ್ಡ ಕನಸಾಗಿತ್ತು. ಹೀಗಾಗಿ ಯುಪಿಎಸ್​ಸಿ ಪರೀಕ್ಷೆ ಬರೆಯಲು ಹೇಳಿದ್ದರು. ನಂತರ ಸ್ವಾತಿ ಅವರು ಯುಪಿಎಸ್​ಸಿ ಕೋಚಿಂಗ್ ಪಡೆಯಲು ದೆಹಲಿಗೆ ತೆರಳಿದ್ದರು. ಮೊದಲು ಪೂರ್ವಭಾವಿ ಪರೀಕ್ಷೆ ಬರೆದರು. ಮೊದಲ ಯತ್ನದಲ್ಲಿ ಸಫಲರಾಗದಿದ್ದರೂ, 2ನೇ ಪ್ರಯತ್ನದಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೂ, ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯವಾಗಲಿಲ್ಲ. ಮೂರನೇ ಪ್ರಯತ್ನದಲ್ಲಿಯೂ ಯುಪಿಎಸ್​ಸಿ ಪಾಸಾಗಲಿಲ್ಲ. ಆದರೆ, ಜೀವನದಲ್ಲಿ ಸೋಲು ಒಪ್ಪಲು ಸಿದ್ಧರಿಲ್ಲದ ಅವರಿಗೆ ಕೋಚಿಂಗ್ ವೇಳೆ ಮಯಾಂಕ್ ಯಾದವ್ (ಪತಿ) ಪರಿಚಯವಾಯಿತು. ಇದು ಸ್ವಾತಿ ಅವರ ಜೀವನಕ್ಕೆ ಹೊಸ ತಿರುವು ಕೊಟ್ಟಿತು.

ನನ್ನ ಸಾಧನೆಗೆ ಕುಟುಂಬ ಸದಸ್ಯರು ಮತ್ತು ಪತಿ ಮಯಾಂಕ್ ಯಾದವ್ ಬೆಂಬಲವಾಗಿ ನಿಂತಿದ್ದಾರೆ. ಇವರೆಲ್ಲರ ಸಹಕಾರದಿಂದ ಈ ಹಂತದವರೆಗೂ ಬೆಳೆದಿರುವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸ ಮಾಡುವ ಇಚ್ಛೆ ಇದೆ. ನನ್ನ ಸಾಧನೆಯನ್ನು ಗುರುತಿಸಿ ವಿಜಯವಾಣಿ ಪತ್ರಿಕೆಯವರು ‘ವಿಜಯರತ್ನ ಪ್ರಶಸ್ತಿ’ ನೀಡಿರುವುದು ತುಂಬಾ ಖುಷಿ ತಂದಿದೆ. ಜೀವನದಲ್ಲಿ ಮತ್ತಷ್ಟು ಸಾಧನೆ ಮಾಡಲು ಇದು ಸ್ಪೂರ್ತಿ ತುಂಬಲಿದೆ. | ಬಿ.ವಿ. ಸ್ವಾತಿ ಅಡ್ವೊಕೇಟ್ ಮತ್ತು ಸ್ವಾತಿ ಲಾ ಅಕಾಡೆಮಿ ಸಂಸ್ಥಾಪಕಿ

ಸ್ಪೂರ್ತಿ ತುಂಬಿದ್ದ ಮಯಾಂಕ್ ಯಾದವ್

ಯುಪಿಎಸ್​ಸಿ ಪರೀಕ್ಷೆಯನ್ನು ಮೂರು ಪ್ರಯತ್ನದಲ್ಲಿ ಪಾಸ್ ಮಾಡಲಾಗದೆ ಮುಂದೇನು ಮಾಡಬೇಕೆಂದು ತಿಳಿಯದೇ ಸ್ವಾತಿ ಮೌನಕ್ಕೆ ಶರಣಾಗಿದ್ದರು. ಈ ವೇಳೆ ಅಡ್ವೊಕೇಟ್ ಆಗಿದ್ದ ಮಯಾಂಕ್ ಅವರು ಸ್ವಾತಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಿದರು. ಮಯಾಂಕ್ ಮನೆಯವರು ಉನ್ನತ ವ್ಯಾಸಂಗ ಮಾಡಿದ್ದ ಕುಟುಂಬದವರಾಗಿದ್ದರಿಂದ ಸ್ವಾತಿ ಅವರನ್ನು ಹುರಿದುಂಬಿಸಿದರು. ಮಯಾಂಕ್ ಸಲಹೆಯಂತೆ ಸ್ವಾತಿ ಅಡ್ವೊಕೇಟ್ ಆಗಲು ನಿರ್ಧರಿಸಿದ್ದರು. ದೆಹಲಿ ವಿವಿಯಲ್ಲಿ ಪ್ರವೇಶಾತಿ ಪರೀಕ್ಷೆ ಬರೆದು ಅದರಲ್ಲಿ ಪಾಸಾದರು. ಇದು ಇವರ ಜೀವನಕ್ಕೆ ತಿರುವು ಕೊಟ್ಟಿತು.

Swathi 3

ದೆಹಲಿಯಲ್ಲಿದ್ದರೂ ಕಡಿಮೆಯಾಗದ ಕನ್ನಡದ ಪ್ರೇಮ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿದ್ದಾಗ ಕನ್ನಡ ಹಾಗೂ ಬೆಂಗಳೂರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು. ಅಲ್ಲಿ ಅವರಿಗೆ ಕನ್ನಡ ಮಾತನಾಡಲು ಯಾರೂ ಸಿಗುತ್ತಿರಲಿಲ್ಲ. ಹೀಗಾಗಿ ಇನ್​ಸ್ಟಾಗ್ರಾಂ ಚಾನಲ್ ಪ್ರಾರಂಭಿಸಿದರು. ಅದರ ಮೂಲಕ ಕನ್ನಡಿಗರಿಗೆ ಕಾನೂನು ಸಲಹೆಗಳನ್ನು ನೀಡಲಾರಂಭಿಸಿದರು. ಅದು ಅವರಿಗೆ ಕನ್ನಡ ಮಾತನಾಡಲು ಉತ್ತಮ ವೇದಿಕೆಯಾಯಿತು. ಅದರ ಮೂಲಕ ಹೆಚ್ಚು ಕನ್ನಡಿಗರನ್ನು ತಲುಪಲು ಕಾರಣವಾಯಿತು. ಇದಕ್ಕೆ ಇವರ ಪತಿ ಕೂಡ ಸಾಥ್ ನೀಡಿದರು. ನಂತರ ದೆಹಲಿಯಲ್ಲಿ ಎರಡು ಕೋಚಿಂಗ್ ಇನ್​ಸ್ಟಿಟ್ಯೂಟ್​ನಲ್ಲಿ ಉತ್ತರಾಖಂಡ ಮತ್ತು ದೆಹಲಿಯ ವಿದ್ಯಾರ್ಥಿಗಳಿಗೆ ಪಾರ್ಟ್ ಟೈಂ ಲಾ ಪಾಠ ಮಾಡುತ್ತಿದ್ದರು. ಕರ್ನಾಟಕ ಸಿವಿಲ್ ಜಡ್ಜ್ ಎಕ್ಸಾಂಗಾಗಿ ಟೀಚರ್ ಒಬ್ಬರಿಗಾಗಿ ಅಕಾಡೆಮಿಯೊಂದು ಹುಡುಕಾಟ ನಡೆಸಿತ್ತು. (ಅನ್ ಅಕಾಡೆಮಿ) ಆ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಒಪ್ಪಿದ ಸ್ವಾತಿ ಅವರು 6 ತಿಂಗಳ ಕಾಲ ಗುತ್ತಿಗೆಯಡಿ ಟೀಚಿಂಗ್ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದರು. ಆನಂತರ ವಿದ್ಯಾರ್ಥಿಗಳಿಂದ ಬೇಡಿಕೆ ಬಂದ ಕಾರಣ ಸ್ವಾತಿಯವರು ಯೂಟ್ಯೂಬ್ ಚಾನಲ್ (ಠಡಿಚಠಿಜಜಿ ್ಝಡಿ ಚ್ಚಚಛಛಿಞಢ) ಮತ್ತು ಕೋಚಿಂಗ್ ಸೆಂಟರ್ ಆರಂಭಿಸಿ ಯಶಸ್ಸಿನ ಮಾರ್ಗ ಕಂಡುಕೊಂಡರು.

ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್...

ಕೆಲವು ದಂಪತಿಗಳು ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸುತ್ತಾರೆ. ಒಂದು ಕೇಸ್​ನಲ್ಲಿ ನಾನು ನೋಡಿದಂತೆ, ಮದುವೆಯಾದ ಎರಡನೇ ದಿನಕ್ಕೆ ಡಿವೋರ್ಸ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಕಾರಣ ಕೇಳಿದ್ದಕ್ಕೆ ಆಕೆ ತನಗೆ ಪ್ರಿಯತಮ ಇದ್ದ ಎಂಬ ವಿಚಾರ ಹೇಳಿರಲಿಲ್ಲ, ಹೀಗಾಗಿ ಡಿವೋರ್ಸ್ ಕೊಡಿಸಿ ಎಂದು ದಂಪತಿ ಬಂದಿದ್ದರು. ಇವರಿಗೆ ತುಂಬಾ ಜಾಸ್ತಿ ಜ್ವರ ಬರುತ್ತೆ, ಇವರು ಹಲ್ಲಿನ ಸೆಟ್ ಹಾಕಿಕೊಂಡಿರುವುದು ಹೇಳಿರಲಿಲ್ಲ.. ಹೀಗಾಗಿ ಡಿವೋರ್ಸ್ ಕೊಡಿಸಿ, ಪತಿ ವಿದೇಶಕ್ಕೆ ಹೋಗಬೇಕೆಂದುಕೊಂಡಿದ್ದಾನೆ ನನಗೆ ಇಷ್ಟವಿಲ್ಲ... ಹೀಗಾಗಿ ಡಿವೋರ್ಸ್ ಬೇಕು ಎಂದು ಸಮಸ್ಯೆ ಹೇಳಿಕೊಳ್ಳುತ್ತಾರೆ. ದಂಪತಿಗಳು ಮುಕ್ತವಾಗಿ ಒಬ್ಬರಿಗೊಬ್ಬರು ಮಾತನಾಡಿದರೆ ವಿಚ್ಛೇದನ ಆಗುವ ಮಾತೇ ಬರುವುದಿಲ್ಲ. ಇತ್ತೀಚೆಗೆ ಲಿವಿಂಗ್ ಅಪಾರ್ಟ್ ಟುಗೆದರ್ ಎಂಬ ಪರಿಕಲ್ಪನೆ ಶುರುವಾಗಿದೆ. ಅಂದರೆ, ಮದುವೆಯ ನಂತರ ನೀವು ನಿಮ್ಮ ಮನೆಯಲ್ಲಿ ಇರಿ, ನಾವು ನಮ್ಮ ಮನೆಯಲ್ಲಿ ಇರುತ್ತೇವೆ ಎಂಬ ಹೊಸ ಟ್ರೆಂಡ್ ಮುನ್ನೆಲೆಗೆ ಬರುತ್ತಿದೆ. ಒಂದೇ ಮನೆಯಲ್ಲಿ ಇಬ್ಬರೂ ಇರುವುದು ಬೇಡ. ಫ್ಯಾಮಿಲಿ ಫಂಕ್ಷನ್ ಇದ್ದಾಗ ಸಿಗೋಣ ಎಂದು ನಿರ್ಧರಿಸಲಾಗುತ್ತದೆ. ಈ ರೀತಿಯಾಗಿ ಸಮಾಜದಲ್ಲಿ ಬದಲಾವಣೆಯಾಗುತ್ತಿದೆ. ದಂಪತಿಯ ತಾಯಂದಿರ ಇಗೋನಿಂದ ಗಂಡ - ಹೆಂಡತಿ ದೂರವಾಗುತ್ತಿದ್ದು, ಇದು ಸಮಾಜಕ್ಕೆ ಆರೋಗ್ಯಕರ ಲಕ್ಷಣವಲ್ಲ ಎನ್ನುತ್ತಾರೆ ಸ್ವಾತಿ.

ಇಬ್ಬರು ಶಿಕ್ಷಾರ್ಥಿಗಳೀಗ ಜಡ್ಜ್

2023ರಲ್ಲಿ ಸ್ವಾತಿ ಲಾ ಅಕಾಡೆಮಿ ಹೆಸರಿನಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿದರು. ಸಿವಿಲ್ ಜಡ್ಜ್ ಪರೀಕ್ಷೆಗೆ ತಯಾರಾಗುತ್ತಿದ್ದ ಕರ್ನಾಟಕದ ವಿದ್ಯಾರ್ಥಿಗಳಿಗೆ ಟೀಚ್ ಮಾಡಲು ಪ್ರಾರಂಭಿಸಿದ ಬಳಿಕ ಆ ಬ್ಯಾಚ್​ನ ನಮ್ರತಾ ಎಸ್. ಹೊಸಮಠ್ ಮತ್ತು ವಿಕಾಸ್ ದಳವಾಯಿ ಕ್ರಮವಾಗಿ 3 ಮತ್ತು 11ನೇ ರ್ಯಾಂಕ್ ಗಳಿಸಿ ನ್ಯಾಯಾಧೀಶರ ಹುದ್ದೆ ಪಡೆದರು. ಇದರಿಂದ ಸ್ವಾತಿ ಅವರಿಗೆ ವಕೀಲ ವೃತ್ತಿ ಮತ್ತು ಟೀಚಿಂಗ್ ಮೇಲೆ ಮತ್ತಷ್ಟು ಗೌರವ ಹೆಚ್ಚಾಯಿತು. ಇವರ ಲಾ ಅಕಾಡೆಮಿಯೂ ಮತ್ತಷ್ಟು ವಿಸ್ತಾರಗೊಂಡಿತು. ಜತೆಗೆ ಸ್ವಾತಿ ಲಾ ಅಕಾಡೆಮಿಯ ವೆಬ್​ಸೈಟ್ ಮತ್ತು ಅಪ್ಲಿಕೇಷನ್ ಕೂಡ ಇದೆ. ಇದರ ಮೂಲಕ ಪ್ರತಿದಿನ ಆನ್​ಲೈನ್, ಲೈವ್ ಕ್ಲಾಸ್ ನಡೆಸಲಾಗುತ್ತಿದೆ. ಈವರೆಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಹಾಲಿ ಬ್ಯಾಚ್​ನಲ್ಲಿ 160ಕ್ಕೂ ಹೆಚ್ಚು ಶಿಕ್ಷಾರ್ಥಿಗಳಿದ್ದಾರೆ. ಸ್ವಾತಿ ಅವರು ಇನ್​ಸ್ಟಾಗ್ರಾಮ್ಲ್ಲಿ (ಠಡಿಚಠಿಜಜಿ.ಚಡಿ) ಕಾನೂನು ಬಗ್ಗೆ ನೀಡುತ್ತಿದ್ದ ಮಾಹಿತಿ ಇರುವ ರೀಲ್ಸ್​ಗಳು ವೈರಲ್ ಆಗಿವೆ. ಅವುಗಳಲ್ಲಿ ಕೆಲವೊಂದು ಮಾಧ್ಯಮಗಳಲ್ಲಿಯೂ ಪ್ರಸಾರವಾಗಿವೆ. ಇವು ಇವರಿಗೆ ಇನ್ನಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಇನ್​ಸ್ಟಾಗ್ರಾಮ್ಲ್ಲಿ ಎರಡು ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಇದಾದ ಬಳಿಕ ಸ್ವಾತಿ ಅವರಿಗೆ ಕಾನೂನು ಸಲಹೆಗಳಿಗೆ ಹೆಚ್ಚಿನ ಕರೆಗಳು ಬರಲು ಪ್ರಾರಂಭವಾಯಿತು. 1 ಸಾವಿರಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿ ಕಾನೂನು ಸಲಹೆಗಳನ್ನು ನೀಡಿದ್ದಾರೆ. ಕನ್ನಡಿಗರ ಸ್ಪಂದನೆ ನೋಡಿದ ಇವರು ಇತ್ತೀಚೆಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಇಲ್ಲಿಯೇ ನೆಲೆಗೊಂಡಿದ್ದಾರೆ. ಇಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ಮನ ಸೋತಿರುವ ಸ್ವಾತಿ, ದೆಹಲಿಯಲ್ಲಿರುವ ತಮ್ಮ ವಕೀಲಿಕೆ ಸದಸ್ಯತ್ವವನ್ನು ಬೆಂಗಳೂರಿಗೆ ವರ್ಗಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿಯೇ ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ನಿರ್ಧರಿಸಿ, ಹೈಕೋರ್ಟ್​ನಲ್ಲಿ ಲಾ ಪ್ರಾಕ್ಟಿಸ್ ಮಾಡುವವರಿದ್ದಾರೆ. ಲಾ ಅಕಾಡೆಮಿ ಕ್ಷೇತ್ರದಲ್ಲಿನ ಸಾಧನೆ ಗಮನಿಸಿ ಸ್ವಾತಿ ಅವರಿಗೆ ಮಹಿಳಾ ದಿನದಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ದಂಪತಿಯನ್ನು ಒಂದುಗೂಡಿಸಲು ಆದ್ಯತೆ

ಸ್ವಾತಿ ಅವರು ವೃತ್ತಿ ಜೀವನ ಆರಂಭಿಸಿದಾಗ ಮೊದಲು ಸಿವಿಲ್ ಕೇಸ್ ನೋಡುತ್ತಿದ್ದರು. ಇನ್​ಸ್ಟಾಗ್ರಾಂಗೆ ಬಂದಮೇಲೆ ಫ್ಯಾಮಿಲಿ ಲಾಯರ್ ಆದರು. ಫ್ಯಾಮಿಲಿ ಕೇಸ್ ಮತ್ತು ವಿಚ್ಛೇದನ ಕೇಸ್​ಗಳನ್ನು ಹೆಚ್ಚಿಗೆ ತೆಗೆದುಕೊಳ್ಳುತ್ತಿದ್ದರು. ಸುಮಾರು 500 ಫ್ಯಾಮಿಲಿ ಕೇಸ್​ಗಳನ್ನು ಅಟೆಂಡ್ ಮಾಡಿದ್ದಾರೆ. ಫ್ಯಾಮಿಲಿ ಲಾಯರ್ ಆಗಿರುವ ಜತೆಗೆ ವಿವಾಹ ವಿಚ್ಛೇದನ ಮಾಡಿಕೊಳ್ಳಲು ಮುಂದಾಗುವ ದಂಪತಿಗೆ ಸೂಕ್ತ ಸಮಾಲೋಚನೆ ನಡೆಸಿ ಒಂದುಗೂಡಿಸುವ ಪ್ರಯತ್ನ ಮಾಡುತ್ತಾರೆ. ಮಗು ಆದ ನಂತರ ಯಾವುದೇ ಕಾರಣಕ್ಕೂ ವಿಚ್ಛೇದನ ಮಾಡಿಕೊಳ್ಳಬಾರದು. ಮಗುವಿಗೆ ತಂದೆ-ತಾಯಿ ಪ್ರೀತಿ ಬೇಕಾಗುತ್ತದೆ ಎಂದು ಕಿವಿಮಾತು ಹೇಳುತ್ತಾರೆ. ವಿಚ್ಛೇದನಕ್ಕೂ ಮೊದಲು ಆರ್​ಸಿಆರ್ ಪ್ರೊಸೀಡಿಂಗ್ ಮಾಡಿ ಒಂದುಮಾಡುವ ಪ್ರಯತ್ನ ಮಾಡುವುದು ಸ್ವಾತಿಯವರ ವಿಶೇಷತೆ.

ಐದು ಮಂದಿ ನನ್ನ ಬೆನ್ನೆಲುಬು

ಅಪ್ಪ, ಅಮ್ಮ, ತಮ್ಮ, ಪತಿ ಮತ್ತು ಮಾವ - ಈ ಐದು ಮಂದಿ ಸ್ವಾತಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ‘ನಾನು ಇಂದು ಅಡ್ವೊಕೇಟ್ ಆಗಿರುವುದಕ್ಕೆ ಪ್ರಮುಖ ಕಾರಣ ನನ್ನ ಪತಿ. ಪ್ರತಿ ಹಂತದಲ್ಲಿಯೂ ನನ್ನ ಜತೆ ನಿಂತು ಸ್ಪೂರ್ತಿ ತುಂಬಿದ್ದಾರೆ. ಇದಕ್ಕಿಂತ ಮೊದಲು ನನ್ನ ಅಪ್ಪ ನಾನು ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದರು. ಆದರೆ, ನಾನು ದೊಡ್ಡ ಅಧಿಕಾರಿಯಾಗದಿದ್ದರೂ, ಸದಾ ನನಗೆ ಬೆಂಬಲವಾಗಿ ನಿಂತಿದ್ದಾರೆ. ದೊಡ್ಡ ದೊಡ್ಡ ಕನಸು ಕಾಣಬೇಕೆಂದು ನನಗೆ ಹೇಳಿಕೊಟ್ಟಿದ್ದೇ ತಂದೆಯವರು. ಅವರು ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧ್ದೆ ನಡೆಸಲು ದೆಹಲಿಗೆ ಕಳುಹಿಸದೆ ಹೋಗಿದ್ದರೆ ನಾನು ಲಾ ಓದುತ್ತಿರಲಿಲ್ಲ. ಲಾ ಓದಿಲ್ಲವಾದರೆ ವಕೀಲೆ ಆಗುತ್ತಿರಲಿಲ್ಲ. ಜತೆಗೆ ನನ್ನ ಅಮ್ಮ ಎಲ್ಲ ರೀತಿಯಲ್ಲಿಯೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನ್ನ ಸಹೋದರ ನನಗೆ ಒಳ್ಳೆಯ ಫ್ರೆಂಡ್ ರೀತಿ ಇದ್ದು, ಎಲ್ಲ ರೀತಿಯಲ್ಲಿಯೂ ಬೆಂಬಲವಾಗಿ ನಿಂತಿದ್ದಾನೆ. ಜತೆಗೆ ನಮ್ಮ ಪಾಲಕರಿಗೆ ನನ್ನ ಪ್ರೀತಿ ವಿಚಾರವನ್ನು ಹೇಳಿ ಒಪ್ಪಿಸಿದ್ದ. ನನ್ನ ಅಮ್ಮನ ಅಣ್ಣನಾದ ವೆಂಕಟಾಚಲಪತಿ ಅವರು ವಿದ್ಯಾವಂತರಾಗಿದ್ದು, ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. ಅವರು ತಂದೆ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಿದ್ದಾರೆ. ನಾನು ದೆಹಲಿಯಲ್ಲಿದ್ದಾಗಲೂ ಮಾವ ಬಂದು ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅವರು ನನ್ನ ದೊಡ್ಡ ಶಕ್ತಿ. ನನ್ನ ಪತಿಯ ಅಪ್ಪ-ಅಮ್ಮ ಕೂಡ ತುಂಬಾ ಒಳ್ಳೆಯವರು. ನನ್ನ ಪ್ರತಿ ಹಂತದಲ್ಲಿಯೂ ಬೆಂಬಲವಾಗಿ ನಿಂತಿದ್ದಾರೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಸ್ವಾತಿ.

ಸ್ವಾತಿ ಸಾಧನೆ ಬಗ್ಗೆ ಹೆಮ್ಮೆ ಇದೆ. ಜತೆಗೆ ಅವರಿಗೆ ‘ವಿಜಯರತ್ನ ಪ್ರಶಸ್ತಿ’ ಬಂದಿರುವುದು ತುಂಬಾ ಖುಷಿ ಇದೆ. ಅವರು ಇನ್ನಷ್ಟು ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಹಾರೈಸುವೆ. | ಜಿ.ಆರ್. ವೆಂಕಟಾಚಲಪತಿ ಸ್ವಾತಿ ಸೋದರಮಾವ ಸ್ವಾತಿ ಮೇಡಂ ಅವರು ಜ್ಯುಡಿಷಿಯರಿ ಎಕ್ಸಾಂಗೆ ಯಾವ ರೀತಿ ಸಿದ್ದತೆ ನಡೆಸಬೇಕು ಎಂದು ಹೇಳಿಕೊಡುತ್ತಾರೆ. ಯಾವುದೇ ಗೊಂದಲಗಳಿದ್ದರೂ ಬಗೆಹರಿಸುತ್ತಾರೆ. ಕನ್ನಡ ಮತ್ತು ಇಂಗ್ಲಿಷ್​ನಲ್ಲಿಯೂ ಟೀಚ್ ಮಾಡುತ್ತಾರೆ. ಇವರು ಟೀಚ್ ಮಾಡುವ ವಿಧಾನದಿಂದ ನನಗೆ ಎಕ್ಸಾಂ ಪಾಸ್ ಮಾಡುವ ಆತ್ಮವಿಶ್ವಾಸ ಬಂದಿದೆ. | ಎಂ.ಕೆ. ಬಸವರಾಜ್ ಸ್ವಾತಿ ಲಾ ಅಕಾಡೆಮಿ ಶಿಕ್ಷಾರ್ಥಿ ಯುಪಿಎಸ್​ಸಿ, ಕೆಪಿಎಸ್​ಸಿಗೆ ಕೋಚಿಂಗ್ ಇದೆ. ಆದರೆ, ಜ್ಯುಡಿಷಿಯರಿ ಪರೀಕ್ಷೆಗೆ ಸಿದ್ಧ್ದೆ ನಡೆಸುವವರಿಗೆ ಯಾವುದೇ ಕೋಚಿಂಗ್ ಇಲ್ಲ. ಸ್ವಾತಿ ಲಾ ಅಕಾಡೆಮಿಯು ಜ್ಯುಡಿಷಿಯರಿ ಎಕ್ಸಾಂ ತಯಾರಿ ನಡೆಸುವವರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದೆ. ಇದಕ್ಕಾಗಿ ಸ್ವಾತಿ ಮೇಡಂಗೆ ಧನ್ಯವಾದ ಹೇಳುತ್ತೇನೆ. | ಬೃಂದಾ ಸ್ವಾತಿ ಲಾ ಅಕಾಡೆಮಿಯ ವಿದ್ಯಾರ್ಥಿನಿ ಸ್ವಾತಿ ಅವರು, ತಮ್ಮ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಬದ್ಧತೆ ಯಿಂದ ಮಾಡುತ್ತಾರೆ. ಅವರು ಕಕ್ಷಿದಾರ ರೊಂದಿಗೆ ಅತ್ಯುತ್ತಮವಾಗಿ ಸಂವಹನ ಮಾಡುತ್ತಾರೆ. ಅವರ ಸೇವೆ ನಮಗೆ ತೃಪ್ತಿ ನೀಡಿದೆ. ಆಳವಾದ ಕಾನೂನಿನ ಜ್ಞಾನವಿದೆ. ಇದರಿಂದ ನನ್ನ ಕೋರ್ಟ್ ಕೇಸೊಂದು ಸುಲಭವಾಗಿ ಬಗೆಹರಿದಿದೆ. ಹಣಕ್ಕೆ ಬೆಲೆ ಕೊಡದೆ ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸದಾ ಶ್ರಮಿಸುತ್ತಾರೆ. ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ. | ವಿ. ಮನೋಜ್ ಕಕ್ಷಿದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net