ಬದಲಾಗಿವೆ ಕ್ರಿಕೆಟ್​ ಕರಾರು!: ಎಂಜಲು ಹಚ್ಚಿದರೆ ಚೆಂಡು ಬದಲಿಲ್ಲ, ಡಿಆರ್​ಎಸ್​ ನಿಯಮಕ್ಕೂ ತಿದ್ದುಪಡಿ

blank

ನವದೆಹಲಿ: ಕ್ರಿಕೆಟ್​ ನಿಯಮಾವಳಿಗಳು ಕಾಲಕಾಲಕ್ಕೆ ಬದಲಾಗುತ್ತ ಅಥವಾ ತಿದ್ದುಪಡಿಯಾಗುತ್ತಲೇ ಬಂದಿವೆ. ನಿಯಮಗಳಲ್ಲಿ ಕಾಣಿಸುವ ದೋಷಗಳು ಮತ್ತು ತಂತ್ರಜ್ಞಾನದ ಅನುಕೂಲಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇದರಂತೆ ಐಸಿಸಿ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಟದ ಕರಾರುಗಳಲ್ಲಿ (ಪ್ಲೇಯಿಂಗ್​ ಕಂಡೀಷನ್​) ಕೆಲ ಬದಲಾವಣೆಗಳನ್ನು ತಂದಿವೆ. ಬೌಂಡರಿ ಗೆರೆ ಬಳಿ ಕ್ಯಾಚ್​ ಹಿಡಿಯುವ ಮತ್ತು ಏಕದಿನದಲ್ಲಿ 35ನೇ ಓವರ್​ ಬಳಿಕ ಒಂದೇ ಚೆಂಡು ಬಳಸುವ ನಿಯಮ ಈಗಾಗಲೆ ಬಹಿರಂಗಗೊಂಡಿತ್ತು.

ಇದೀಗ ಐಸಿಸಿ ತನ್ನ ಸದಸ್ಯ ರಾಷ್ಟ್ರಗಳಿಗೆ ಕಳುಹಿಸಿರುವ ಮೂರೂ ಮಾದರಿಯ ಕ್ರಿಕೆಟ್​ ಆಟದ ಬದಲಾದ ಕರಾರುಗಳ ಪಟ್ಟಿಯಲ್ಲಿ ಇನ್ನಷ್ಟು ತಿದ್ದುಪಡಿ ಅಥವಾ ಹೊಸ ನಿಯಮಗಳ ವಿವರ ಬೆಳಕಿಗೆ ಬಂದಿವೆ. ಈ ಪೈಕಿ ಟೆಸ್ಟ್​ ಕ್ರಿಕೆಟ್​ನಲ್ಲಿ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 4ನೇ ಆವೃತ್ತಿಯ ಆರಂಭದಿಂದಲೇ ಈ ನಿಯಮಗಳು ಬಳಕೆಯಾಗುತ್ತಿದ್ದರೆ, ಸೀಮಿತ ಓವರ್​ ಪ್ರಕಾರದಲ್ಲಿ ಜುಲೈ 2ರಿಂದ ಜಾರಿಗೆ ಬರಲಿವೆ. ಅಂಥ ಕೆಲ ಬದಲಾದ ನಿಯಮಗಳ ಸಂಪ್ತ ವಿವರ ಇಲ್ಲಿದೆ…

ಟೆಸ್ಟ್​ನಲ್ಲೂ ಸ್ಟಾಪ್​ ಕ್ಲಾಕ್​
ಒಂದು ಓವರ್​ ಮುಗಿದ 60 ಸೆಕೆಂಡ್​ನೊಳಗೆ ಮುಂದಿನ ಓವರ್​ ಆರಂಭಗೊಳ್ಳಬೇಕೆಂಬ “ಸ್ಟಾಪ್​ ಕ್ಲಾಕ್​’ ನಿಯಮ ಈಗಾಗಲೆ 2024ರಿಂದಲೇ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಜಾರಿಯಲ್ಲಿದ್ದವು. ಇದೀಗ ಡಬ್ಲ್ಯುಟಿಸಿ 4ನೇ ಆವೃತ್ತಿಯಿಂದ ಇದು ಟೆಸ್ಟ್​ ಕ್ರಿಕೆಟ್​ನಲ್ಲೂ ಜಾರಿಗೆ ಬಂದಿದೆ. ಓವರ್​ಗತಿ ಸುಧಾರಣೆ ಇದರ ಪ್ರಮುಖ ಉದ್ದೇಶವಾಗಿದೆ. ಸ್ಟಾಪ್​ ಕ್ಲಾಕ್​ ನಿಯಮದನ್ವಯ ಓವರ್​ ಮುಗಿದ 60 ಸೆಕೆಂಡ್​ನೊಳಗೆ ಮರುಓವರ್​ ಶುರುವಾಗದಿದ್ದರೆ, ಅಂಪೈರ್​ ಎರಡು ಬಾರಿ ಫೀಲ್ಡಿಂಗ್​ ತಂಡಕ್ಕೆ ಎಚ್ಚರಿಕೆ ನೀಡುತ್ತಾರೆ. 3ನೇ ಬಾರಿ ಇದೇ ತಪು ಮಾಡಿದಾಗ ಅಂಪೈರ್​ ಬೌಲಿಂಗ್​ ತಂಡಕ್ಕೆ 5 ರನ್​ ಪೆನಾಲ್ಟಿ ವಿಧಿಸುತ್ತಾರೆ. ಪ್ರತಿ ಇನಿಂಗ್ಸ್​ನ 80ನೇ ಓವರ್​ ಬಳಿಕ ಅಂಪೈರ್​ ಎಚ್ಚರಿಕೆ ಶೂನ್ಯಕ್ಕೆ ಮರುಹೊಂದಿಕೆ (ರೀಸೆಟ್​) ಆಗುತ್ತದೆ. ಸ್ಟಾಪ್​ ಕ್ಲಾಕ್​ 0ಯಿಂದ 60 ಸೆಕೆಂಡ್​ಗೆ ಎಣಿಸುತ್ತದೆ.

ಎಂಜಲು ಬಳಸಿದರೆ ಚೆಂಡು ಬದಲಾಗದು
ಚೆಂಡಿಗೆ ಎಂಜಲು ಹಚ್ಚಿ ಶೈನ್​ ಮಾಡಲು ಯತ್ನಿಸುವುದನ್ನು ಐಸಿಸಿ ಕರೋನಾ ಕಾಲದಲ್ಲಿ ನಿಷೇಧಿಸಿತ್ತು. ಕಳೆದ ಐಪಿಎಲ್​ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ, ಎಂಜಲು ಬಳಸಲು ಅವಕಾಶ ನೀಡಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೆಂಡಿಗೆ ಎಂಜಲು ಹಚ್ಚುವುದರ ಮೇಲಿನ ರ್ನಿಬಂಧ ಮುಂದುವರಿಯಲಿದೆ. ಹಾಗೆಂದು ಇನ್ನು ಮುಂದೆ, ಚೆಂಡಿಗೆ ಎಂಜಲು ಹಚ್ಚಿರುವುದು ಕಂಡು ಬಂದ ತಕ್ಷಣ ಅದನ್ನು ಬದಲಾಯಿಸಲಾಗುವುದಿಲ್ಲ. ಕೆಲ ತಂಡಗಳು ಚೆಂಡು ಬದಲಾವಣೆಗಾಗಿ, ಉದ್ದೇಶಪೂರ್ವಕವಾಗಿ ಎಂಜಲು ಹಚ್ಚುವುದನ್ನು ತಡೆಯಲು ಈ ತಿದ್ದುಪಡಿ ತರಲಾಗಿದೆ.

ಹೀಗಾಗಿ ಇನ್ನು ಮುಂದೆ ಚೆಂಡಿನ ಸ್ಥಿತಿ ತೀರಾ ಬಿಗಡಾಯಿಸಿದ್ದಲ್ಲಿ ಮಾತ್ರ ಅದನ್ನು ಬದಲಿಸುವರು. ಎಂಜಲು ಬಳಕೆಯಿಂದಲೂ ಚೆಂಡಿನ ಸ್ಥಿತಿ ತೀರಾ ಹದಗೆಟ್ಟಲ್ಲಿ ಮಾತ್ರ ಬದಲಿಸಲು ಅಂಪೈರ್​ ನಿರ್ಧಾರ ತೆಗೆದುಕೊಳ್ಳಬಹುದು. ಬೌಲಿಂಗ್​ ತಂಡ ಚೆಂಡಿಗೆ ಎಂಜಲು ಹಚ್ಚಿದಾಗ ಬ್ಯಾಟಿಂಗ್​ ತಂಡಕ್ಕೆ 5 ರನ್​ ನೀಡುವ ನಿಯಮ ಮುಂದುವರಿಯಲಿದೆ.

ಡಿಆರ್​ಎಸ್​ ಶಿಷ್ಟಾಚಾರ ಬದಲು
ಬ್ಯಾಟರ್​ ವಿರುದ್ಧ ಕ್ಯಾಚ್​ ತೀರ್ಪಿಗಾಗಿ ಡಿಆರ್​ಎಸ್​ ಮೊರೆ ಹೋದಾಗ ತೃತೀಯ ಅಂಪೈರ್​ ಅಲ್ಟ್ರಾಎಡ್ಜ್​ ಪರಿಶೀಲಿಸುತ್ತಾರೆ. ಆಗ ಚೆಂಡು ಬ್ಯಾಟ್​ ಸ್ಪರ್ಶಿಸದೆ ಇರುವುದು ಕಂಡು ಬಂದರೆ ಅದು ಕ್ಯಾಚ್​ ಔಟ್​ ಆಗಿರುವುದಿಲ್ಲ. ಬಳಿಕ ಟಿವಿ ಅಂಪೈರ್​, ಅದೇ ಎಸೆತದಲ್ಲಿ ಬ್ಯಾಟರ್​ ಎಲ್​ಬಿಡಬ್ಲ್ಯು ಆಗಿರುವರೇ ಎಂದೂ ಪರಿಶೀಲಿಸುತ್ತಾರೆ. ಈ ವೇಳೆ ಎಲ್​ಬಿಡಬ್ಲ್ಯು ತೀರ್ಪಿನ ಬಾಲ್​-ಟ್ರಾಕಿಂಗ್​ನಲ್ಲಿ “ಅಂಪೈರ್ಸ್​ ಕಾಲ್​’ ಬಂದರೆ ಇದುವರೆಗೆ ಅದನ್ನು “ನಾಟೌಟ್​’ ಎಂದೇ ಪರಿಗಣಿಸಲಾಗುತಿತ್ತು. ಆದರೆ ಇನ್ನು ಮುಂದೆ ಅದು “ಔಟ್​’ ಆಗಲಿದೆ. ಯಾಕೆಂದರೆ ಇನ್ನು ಮುಂದೆ ಒಂದೇ ಎಸೆತದ 2ನೇ ಡಿಆರ್​ಎಸ್​ ಪರಿಶೀಲನೆ ವೇಳೆ, ಮೈದಾನದ ಅಂಪೈರ್​ನ “ಮೂಲ ನಿರ್ಧಾರ’ವನ್ನು “ಔಟ್​’ ಎಂದೇ ಪರಿಗಣಿಸಲಾಗುತ್ತದೆ.

ಇನ್ನೊಂದು ಡಿಆರ್​ಎಸ್​ ಶಿಷ್ಟಾಚಾರ ಬದಲಾವಣೆಯ ಅನ್ವಯ, ಮೈದಾನದ ಅಂಪೈರ್​ ಮತ್ತು ಆಟಗಾರರು ಏಕಕಾಲದಲ್ಲಿ ಟಿವಿ ಅಂಪೈರ್​ ಪರಾಮರ್ಶೆಗೆ ಮನವಿ ಸಲ್ಲಿಸಿದಾಗ, ಮೈದಾನದಲ್ಲಿ ಟನೆಗಳನ್ನು ಕಾಲಾನುಕ್ರಮದಲ್ಲಿ ಪರಿಶೀಲಿಸಲಾಗುತ್ತದೆ. ಉದಾಹರಣೆಗೆ, ಏಕಕಾಲದಲ್ಲಿ ತೃತೀಯ ಅಂಪೈರ್​ಗೆ ಎಲ್​ಬಿಡಬ್ಲ್ಯು ಮತ್ತು ರನೌಟ್​ ತೀರ್ಪಿಗಾಗಿ ಮನವಿ ಸಲ್ಲಿಸಿದಾಗ, ಮೊದಲಿಗೆ ಎಲ್​ಬಿಡಬ್ಲ್ಯು ಪರಿಶೀಲಿಸಲಾಗುತ್ತದೆ. ಅದು ಔಟ್​ ಆಗಿದ್ದರೆ ಅಲ್ಲಿಗೆ ಆ ಚೆಂಡು ಡೆಡ್​ ಎಂದು ಪರಿಗಣಿಸಲಾಗುತ್ತದೆ. ಎಲ್​ಬಿಡಬ್ಲ್ಯು ಔಟ್​ ಇಲ್ಲದಿದ್ದರೆ ಮಾತ್ರ ರನೌಟ್​ ಪರಿಶೀಲಿಸಲಾಗುತ್ತದೆ ಮತ್ತು ಆ ಎಸೆತದಲ್ಲಿ ಓಡಿದ ರನ್​ ಪರಿಗಣಿಸಲಾಗುತ್ತದೆ.

ನೋಬಾಲ್​ನಲ್ಲಿ ಕ್ಯಾಚ್​ ಮಾನ್ಯತೆ ಪರಿಶೀಲನೆ
ಎಸೆತವೊಂದರಲ್ಲಿ ಫೀಲ್ಡರ್​ ಕ್ಯಾಚ್​ ಹಿಡಿದಾಗ ಆ ಕ್ಯಾಚ್​ ಕ್ಲೀನ್​ ಆಗಿದೆಯೇ ಎಂದು ಮೈದಾನದ ಅಂಪೈರ್​ ಯೋಚಿಸುತ್ತಿರುವಾಗಲೇ, ಆ ಎಸೆತ ನೋಬಾಲ್​ ಎಂದು ತೃತೀಯ ಅಂಪೈರ್​ ಸಂದೇಶ ರವಾನಿಸುತ್ತಾರೆ. ಹಿಂದಿನ ಸಂದರ್ಭಗಳಲ್ಲಿ, ಟಿವಿ ಅಂಪೈರ್​ ನೋಬಾಲ್​ ಎಂದಾಗ ಆ ಕ್ಯಾಚ್​ ಮಾನ್ಯವಾಗಿದೆಯೇ ಎಂದು ಮತ್ತೆ ಪರಿಶೀಲಿಸುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹೊಸ ಆಟದ ಕರಾರಿನ ಅನ್ವಯ, ಅದು ನೋಬಾಲ್​ ಆಗಿದ್ದರೂ ಕ್ಯಾಚ್​ ಕ್ಲೀನ್​ ಆಗಿತ್ತೇ ಎಂದು ಪರಿಶೀಲಿಸಲಾಗುತ್ತದೆ. ಅಲ್ಲದೆ ಆ ಕ್ಯಾಚ್​ ಕ್ಲೀನ್​ ಆಗಿದ್ದರೆ, ಬ್ಯಾಟಿಂಗ್​ ತಂಡಕ್ಕೆ ನೋಬಾಲ್​ನ 1 ರನ್​ ಮಾತ್ರ ನೀಡಲಾಗುತ್ತದೆ. ಒಂದು ಆ ಕ್ಯಾಚ್​ ಕ್ಲೀನ್​ ಆಗಿರದಿದ್ದರೆ, ಆ ಎಸೆತದಲ್ಲಿ ಬ್ಯಾಟರ್​ಗಳು ಓಡಿರುವ (ರನ್​ ಓಡಿದ್ದರೆ) ರನ್​ಗಳನ್ನೂ ಬ್ಯಾಟಿಂಗ್​ ತಂಡಕ್ಕೆ ನೀಡಲಾಗುತ್ತದೆ.

ಶಾರ್ಟ್​ ರನ್​ ರೂಲ್ಸ್​ ತಿದ್ದುಪಡಿ
ವಿಕೆಟ್​ ನಡುವಿನ ಓಟದ ವೇಳೆ ಬ್ಯಾಟರ್​ ಶಾರ್ಟ್​ ರನ್​ ತೆಗೆದುಕೊಳ್ಳುವುದು ಅಂದರೆ ಕ್ರೀಸ್​ನೊಳಗೆ ಬ್ಯಾಟ್​ ಅಥವಾ ಕಾಲು ಸ್ಪರ್ಶಿಸದೆ ಇನ್ನೊಂದು ಸ್ಟ್ರೆಕ್​ನತ್ತ ಓಡುವುದು ಕಂಡು ಬಂದರೆ, ಇದುವರೆಗೆ ಅಂಪೈರ್​ ಬ್ಯಾಟಿಂಗ್​ ತಂಡಕ್ಕೆ 5 ರನ್​ ಪೆನಾಲ್ಟಿ ನೀಡುತ್ತಿದ್ದರು. ಆದರೆ ಇನ್ನು ಮುಂದೆ ಬ್ಯಾಟರ್​ಗಳು ವಿಕೆಟ್​ ನಡುವಿನ ಓಟದ ವೇಳೆ, ಅಂಪೈರ್​ ಕಣ್ತಪ್ಪಿಸಲು ಅಥವಾ ಸ್ಟ್ರೆಕ್​ ಕಾಯ್ದುಕೊಳ್ಳಲು ಉದ್ದೇಶಪೂರ್ವಕವಾಗಿ ಶಾರ್ಟ್​ ರನ್​ ಕಸಿಯುವುದು ಕಂಡುಬಂದರೆ, ಅಂಪೈರ್​ಗಳು ಫೀಲ್ಡಿಂಗ್​ ತಂಡಕ್ಕೆ ಯಾವ ಬ್ಯಾಟರ್​ ಸ್ಟ್ರೆಕ್​ನಲ್ಲಿರಬೇಕೆಂದು ನಿರ್ಧರಿಸುವ ಅಧಿಕಾರ ನೀಡುತ್ತಾರೆ. ಜತೆಗೆ 5 ಪೆನಾಲ್ಟಿ ರನ್​ ಕೂಡ ಲಭಿಸುತ್ತದೆ. ಆದರೆ ಅದು ಉದ್ದೇಶಪೂರ್ವಕ ಶಾರ್ಟ್​ ರನ್​ ಆಗಿಲ್ಲ ಎಂದು ಅಂಪೈರ್​ ಪರಿಗಣಿಸಿದರೆ, ಈಗಿನಂತೆ 5 ರನ್​ ಪೆನಾಲ್ಟಿ ಮಾತ್ರ ನೀಡಲಾಗುತ್ತದೆ.

ಗಾಯಾಳುಗೆ ಪೂರ್ಣ ಬದಲಿ ಆಟಗಾರ
ಕ್ರಿಕೆಟ್​ನಲ್ಲಿ ಸದ್ಯ, ತಲೆಗೆ ಚೆಂಡೇಟು ಬಿದ್ದಾಗ “ಕನ್​ಕಷನ್​’ ಬದಲಿಯಾಗಿ ಬರುವ ಆಟಗಾರನಿಗೆ ಬ್ಯಾಟಿಂಗ್​&ಬೌಲಿಂಗ್​ ಅವಕಾಶ ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ಆಟಗಾರನೊಬ್ಬ ಗಂಭೀರ ಬಾಹ್ಯ ಗಾಯದಿಂದ ಮೈದಾನ ತೊರೆದಾಗ ಬರುವ ಬದಲಿ ಆಟಗಾರನಿಗೂ ಈ ಅವಕಾಶ ನೀಡುವ ಸಾಧ್ಯತೆ ಇದೆ. ಈ ಸಂಬಂಧ ಐಸಿಸಿ ಎಲ್ಲ ದೇಶಗಳ ಕ್ರಿಕೆಟ್​ ಮಂಡಳಿಗಳಿಗೆ ದೇಶೀಯ ಪ್ರಥಮ ದರ್ಜೆ ಪಂದ್ಯಗಳಲ್ಲಿ ಇದನ್ನು ಜಾರಿಗೊಳಿಸಲು ಸೂಚಿಸಿದೆ.

ಇದರನ್ವಯ ಗಂಭೀರ ಬಾಹ್ಯ ಗಾಯಗೊಂಡ ಆಟಗಾರನಿಗೆ ಬದಲಿಯಾಗಿ ಕನ್​ಕಷನ್​ ಬದಲಿಯಂತೆ, ವೇಗಿಗೆ ವೇಗಿ, ಸ್ಪಿನ್ನರ್​ಗೆ ಸ್ಪಿನ್ನರ್​, ಬ್ಯಾಟರ್​ಗೆ ಬ್ಯಾಟರ್​, ಆಲ್ರೌಂಡರ್​ಗೆ ಆಲ್ರೌಂಡರ್​, ಕೀಪರ್​ಗೆ ಕೀಪರ್​ ಬದಲಿಗರಾಗಿ ಆಡಬಹುದು. ಅಲ್ಲದೆ ಇದಕ್ಕೆ ಮ್ಯಾಚ್​ ರೆಫ್ರಿ ಒಪ್ಪಿಗೆಯೂ ಅಗತ್ಯ. ಆದರೆ ಸ್ನಾಯುಸೆಳೆತ ಅಥವಾ ಸಣ್ಣಪುಟ್ಟ ಗಾಯಗಳಾದಾಗ ಬರುವ ಬದಲಿ ಫೀಲ್ಡರ್​ಗೆ ಈ ಅವಕಾಶ ಲಭಿಸುವುದಿಲ್ಲ. ಆತ ಫೀಲ್ಡಿಂಗ್​ ಮಾತ್ರ ಮಾಡಲು ಅವಕಾಶವಿರುತ್ತದೆ. ದೇಶೀಯ ಕ್ರಿಕೆಟ್​ನಲ್ಲಿ ಇದರ ಪ್ರಾಯೋಗಿಕ ಜಾರಿ ಯಶಸ್ವಿಯಾದರೆ, ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಐಸಿಸಿ ಇದನ್ನು ಜಾರಿಗೊಳಿಸಲಿದೆ.

 

 

 

Share This Article

ಯಾವುದೇ ಕೆಲಸಕ್ಕೆ ಹೊರಗೆ ಹೋಗುವಾಗ ಸೀನುವುದು ಒಳ್ಳೆಯದಲ್ಲ! ಇದು ಯಾವುದರ ಸೂಚನೆ ಎಂದು ನಿಮಗೆ ತಿಳಿದಿದೆಯೇ? Sneezing

Sneezing  : ನಾವು ಯಾವುದೇ ಪ್ರಮುಖ ಕೆಲಸದ ಮೇಲೆ ಹೊರಗೆ ಹೋದಾಗ, ಕೆಲವು ಅನಿರೀಕ್ಷಿತ ಘಟನೆಗಳು…

ನೀವು ಪ್ರತಿದಿನ ಬಿಸಿನೀರಿನಿಂದ ಸ್ನಾನ ಮಾಡುತ್ತೀರಾ? ಇದನ್ನು ತಿಳಿದುಕೊಳ್ಳಲೇಬೇಕು.. Bathing

Bathing : ಪ್ರತಿನಿತ್ಯ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ನಾವು ವಾತಾವರಣಕ್ಕೆ ಹೊಂದಿಕೆಯಾಗಿ ಬಿಸಿ, ತಣ್ಣಿರನ್ನು…