

ಕೊಳ್ಳೇಗಾಲ: ಪಟ್ಟಣದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಗುರುವಾರ ಶ್ರೀ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಆಲಹಳ್ಳಿ ಮಠದ ಪೀಠಾಧಿಪತಿ ಶ್ರೀ ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು.
ಮಲೆ ಮಹದೇಶ್ವರ ಬೆಟ್ಟದಿಂದ ಬುಧವಾರ ಆಗಮಿಸಿದ ಪ್ರಚಾರ ರಥವನ್ನು ಜೆಎಸ್‌ಎಸ್ ಕಾಲೇಜಿನಲ್ಲಿ ಇರಿಸಲಾಗಿತ್ತು. ಗುರುವಾರ ಪ್ರಚಾರ ರಥ ಯಳಂದೂರು ಕಡೆಗೆ ತೆರಳಿತು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ದಕ್ಷಿಣ ಭಾರತದಲ್ಲಿ ನಡೆಯುವ ಜಾತ್ರೆಗಳಲ್ಲಿ ಶ್ರೀ ಸುತ್ತೂರು ಜಾತ್ರೆ ದೊಡ್ಡದು. ಫೆ.6 ರಿಂದ 11ರವರೆಗೆ ನಡೆಯುವ ಜಾತ್ರೆಯ ಸಂದೇಶವನ್ನು ಚಾಮರಾಜನಗರ ಭಾಗಕ್ಕೆ ತಿಳಿಸಲು ರಥವು ಸಂಚರಿಸುತ್ತಿದೆ. ಜಾತಿ, ಭೇದ, ವರ್ಗ ಭಿನ್ನವಿಲ್ಲದೆ ಜಾತ್ರೆಯಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳುತ್ತಾರೆ. ರೈತರು, ಕಾರ್ಮಿಕರು ಇನ್ನಿತರ ವರ್ಗದ ಶ್ರಮಿಕರು ಜಾತ್ರೆಯಲ್ಲಿ ಹೆಚ್ಚು ಭಾಗವಹಿಸುತ್ತಾರೆ ಎಂದರು.
ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವ ಸಾಂಸ್ಕೃತಿಕ ಉತ್ಸವವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಯಶಸ್ವಿಗೊಳಿಸೋಣ ಎಂದರು.
ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ, ಶ್ರೀ ಗುರುಮಲ್ಲೇಶ್ವರ ಭಿಕ್ಷದ ಶಿವಪ್ಪ ಸ್ವಾಮೀಜಿ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ ಮಧುವನಹಳ್ಳಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಹದೇವಪ್ರಸಾದ್, ಕಾರ್ಯದರ್ಶಿ ಬಾಲಸುಬ್ರಮಣ್ಯಸ್ವಾಮಿ, ಅಭಾವಿ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷ ಜಗದಾಂಬ ಸದಾಶಿವಮೂರ್ತಿ, ಕದಳಿ ವೇದಿಕೆ ಅಧ್ಯಕ್ಷ ರೂಪಾ ತೋಟೇಶ್, ಲಯನ್ಸ್ ಶಾಲೆಯ ಕಾರ್ಯದರ್ಶಿ ಜಿಎಸ್‌ಎಂ ಪ್ರಸಾದ್, ಅಚ್ಗಾಳ್ ನಾಗರಾಜಯ್ಯ, ಜಿ.ಪಂ ಮಾಜಿ ಸದಸ್ಯ ಕೊಪ್ಪಳಿನಾಯಕ ಇತರರು ಇದ್ದರು.