

* ಕಾಡಿನಿಂದ ನಾಡಿನತ್ತ ಬಂದ ವನ್ಯ ಜೀವಿಗಳು
* ರಸ್ತೆ ಪಕ್ಕ ಸುರಿದ ಕೋಳಿ ತ್ಯಾಜ್ಯ ತಿನ್ನಲು ಬರುವ ಪ್ರಾಣಿಗಳು
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಆಹಾರ ಅರಸಿಯೋ, ಇಲ್ಲ ದಾರಿ ತಪ್ಪಿಯೋ ನಾಡಿನತ್ತ ಬಂದು ಹೋಗುತ್ತಿದ್ದ ಚಿರತೆ, ಕರಡಿಗಳು ಈಗ ಮಾನವರ ಮೇಲೆ ಎರಗುತ್ತಿದ್ದು, ಇದರಿಂದ ಅರಣ್ಯದಂಚಿನ ಗ್ರಾಮಗಳ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಚಿಂತೆ ಉಂಟುಮಾಡಿದೆ.
ತಾಲೂಕಿನಲ್ಲಿ ಆನೆ ಉಪಟಳ ಒಂದು ಕಡೆಯಾದರೆ ಕರಡಿ, ಚಿರತೆ ಉಪಟಳವೂ ಹೆಚ್ಚಾಗಿದೆ. ಅರಣ್ಯ ಇಲಾಖೆ ಆನೆಗಳ ನಿಯಂತ್ರಣ ಮಾಡುತ್ತಿದ್ದರೆ, ಇತ್ತ ಚಿರತೆ, ಕರಡಿಗಳ ನಿಯಂತ್ರಣ ದೊಡ್ಡ ಸವಾಲಾಗಿದೆ.
ಕೋಳಿ ತ್ಯಾಜ್ಯ, ಸತ್ತ ಕೋಳಿಗಳನ್ನು ಸರಿಯಾಗಿ ಮಣ್ಣಿನಲ್ಲಿ ಹೂತು ವಿಲೇವಾರಿ ಮಾಡದೆ ರಸ್ತೆ ಪಕ್ಕಕ್ಕೆ ಬಿಸಾಡಿ ಹೋಗುತ್ತಿರುವುದರಿಂದ ಚಿರತೆಗಳು ಇದನ್ನು ತಿನ್ನಲು ಬರುವ ಸಮಯದಲ್ಲಿ ರಸ್ತೆ ದಾಟುವಾಗ ಮಾನವರ ಮೇಲೆ ಎರಗುತ್ತಿವೆ. ಕೋಳಿ ತ್ಯಾಜ್ಯ ಸರಿಯಾಗಿ ವಿಲೇ ಮಾಡಿದರೆ ಚಿರತೆಗಳು ನಾಡಿನತ್ತ ಮುಖ ಮಾಡಲಾರವು ಎಂಬುದು ಅರಣ್ಯಾಧಿಕಾರಿಗಳಿಂದ ಕೇಳಿಬರುವ ಮಾತು.
ಕರಡಿಗಳಿಗೆ ಹಣ್ಣೆಂದರೆ ಪಂಚಪ್ರಾಣ. ರೈತರು ತೋಟದ ಬೆಳೆ ಬೆಳೆಯಲು ಮುಂದಡಿ ಇಟ್ಟ ಪರಿಣಾಮ ಬಾಳೆ, ಸೀಬೆ, ಮಾವು, ಹಲಸಿನ ಹಣ್ಣಿನ ವಾಸನೆ ಹಿಡಿದು ಜಮೀನುಗಳಿಗೆ ಲಗ್ಗೆ ಇಟ್ಟಾಗ ಮನುಷ್ಯ ಎದುರಿಗೆ ಸಿಕ್ಕಿದಾಗ ದಾಳಿ ಮಾಡಿ ಹೋಗುತ್ತಿವೆ. ಒಂದೆಡೆ ಅರಣ್ಯ ಪ್ರದೇಶವಿದ್ದರೂ ಹಿಂದೆ ಗ್ರಾಮಗಳ ಬಳಿ ಗೋಮಾಳ ಜಮೀನು ಕೂಡ ಇತು.್ತ ಅದರಲ್ಲಿ ನೇರಳೆ, ಹಲಸು ಸೇರಿ ಕರಡಿಗಳಿಗೆ ಬೇಕಾದ ಆಹಾರ ಸಿಗುತ್ತಿತ್ತು. ಆದರೆ ಇಂದು ಆ ಜಮೀನು ರಸ್ತೆ, ನಿವೇಶನ ಇನ್ನಿತರ ಕಾರ್ಯಗಳಿಗೆ ಬಳಕೆಯಾಗಿರುವುದರಿಂದ ಕರಡಿಗಳು ನಾಡಿನತ್ತ ಮುಖ ಮಾಡುತ್ತಿವೆ ಎನ್ನಲಾಗಿದೆ.
ಅರಣ್ಯ ಪ್ರದೇಶದಂಚಿನ ಜನರು ಸಂಜೆ ವೇಳೆಯಲ್ಲಿ ಬಹಳ ಎಚ್ಚರಿಕೆಯಿಂದ ಜಮೀನುಗಳ ಬಳಿ ಓಡಾಟ ನಡೆಸಬೇಕು. ಕರಡಿಗಳು ಹಣ್ಣಿನ ಆಸೆಗೆ ಗ್ರಾಮಗಳ ಬಳಿ ಬಂದರೆ, ಚಿರತೆಗಳು ಸಾಕು ಪ್ರಾಣಿಗಳನ್ನು ತಿನ್ನಲು ಓಡಾಟ ನಡೆಸುತ್ತಿರುತ್ತವೆ. ಮನೆ ಸುತ್ತಮುತ್ತ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮಾಡಿಕೊಂಡು ಓಡಾಡಬೇಕು ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.
ಕರಡಿ, ಚಿರತೆ, ಆನೆ ಸೇರಿ ವನ್ಯಪ್ರಾಣಿಗಳಿಂದ ಉಂಟಾಗುವ ಮಾನವನ ಗಾಯಕ್ಕೆ ಅರಣ್ಯ ಇಲಾಖೆ ಸರ್ಕಾರ ನಿಗದಿಪಡಿಸಿದ ದರದಂತೆ ಚಿಕಿತ್ಸೆಗೆ ನೆರವು ನೀಡುತ್ತದೆ. ಜತೆಗೆ ಶಾಶ್ವತ ಅಂಗವಿಕತೆಗೆ ಪರಿಹಾರ ನೀಡುವುದರ ಜತೆಗೆ ವೈದ್ಯರ ಶಿಫಾರಸಿನ ಮೇರೆಗೆ ಆದ ಮಾನವ ಗಾಯಕ್ಕೆ ಅರವತ್ತು ಸಾವಿರದವರೆಗೂ ನೆರವು ನೀಡುತ್ತದೆ.
ಎರಡು ದಿನಗಳ ಹಿಂದಷ್ಟೇ ವಡೇರಹಳ್ಳಿ ಬಳಿ ಆಹಾರ ಅರಸಿ ನಾಡಿನತ್ತ ಮುಖ ಮಾಡಿದ್ದ ಕರಡಿಯನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿತ್ತು. ಜತೆಗೆ ಹೆಚ್ಚು ಉಪಟಳ ನೀಡುವ ಚಿರತೆಗಳ ಬಗ್ಗೆ ನಿಗಾವಹಿಸಿರುವ ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆಹಿಡಿದು ಒಂದಷ್ಟು ಚಿರತೆ ಉಪಟಳಕ್ಕೆ ಬ್ರೇಕ್ ಹಾಕುತ್ತಿದೆ.
ಎರಡು ವರ್ಷಗಳಿಂದ ತಾಲೂಕಿನಲ್ಲಿ ಚಿರತೆ ದಾಳಿಯಿಂದ 17 ಜನ, ಆನೆ ದಾಳಿಯಿಂದ 2, ಕರಡಿ ದಾಳಿಯಿಂದ 7, ಕಾಡುಹಂದಿ ದಾಳಿಯಿಂದ 3 ಜನ ರೈತರು ಗಾಯಗೊಂಡಿದ್ದಾರೆ.
ಅರಣ್ಯ ಇಲಾಖೆ ವನ್ಯ ಪ್ರಾಣಿಗಳು ನಾಡಿಗೆ ಬರದಂತೆ ಎಚ್ಚರವಹಿಸಿದೆ. ಕೋಳಿ ತ್ಯಾಜ್ಯ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದ ಪರಿಣಾಮ ರಸ್ತೆಯ ಅಕ್ಕಪಕ್ಕ ಎಸೆದು ಹೋಗುತ್ತಿರುವುದರಿಂದ ಚಿರತೆಗಳು ನಾಡಿನತ್ತ ಮುಖ ಮಾಡುತ್ತಿವೆ. ಸಂಬಂಧಿಸಿದ ನಗರಸಭೆ, ಗ್ರಾಪಂಗಳಿಗೆ ಅರಣ್ಯ ಇಲಾಖೆ ಪತ್ರ ಬರೆದು ತಿಳಿಸುವ ಕೆಲಸ ಮಾಡುತ್ತದೆ. ಮಹಮ್ಮದ್ ಮನ್ಸೂರ್ವಲಯ ಅರಣ್ಯಾಧಿಕಾರಿ, ರಾಮನಗರಚಿರತೆ, ಕರಡಿಗಳ ದರ್ಶನ ಆಗಾಗ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಕಾಣುತ್ತಿವೆ. ಚಿರತೆ ಗ್ರಾಮದ ಕಡೆ ಮುಖ ಮಾಡದಂತೆ ಕೋಳಿ ತ್ಯಾಜ್ಯ ಸುರಿಯುವ ಸ್ಥಳ ಗುರುತಿಸಿ ಅವರ ಮೇಲೆ ಕ್ರಮ ಜರುಗಿಸುವ ಕೆಲಸ ಇಲಾಖೆ ಮಾಡಬೇಕು. ಜತೆಗೆ ಕರಡಿಗಳಿಗೆ ಅರಣ್ಯದಲ್ಲೇ ಸೂಕ್ತ ಆಹಾರ ಸಿಗುವ ಹಣ್ಣಿನ ಗಿಡ ಬೆಳೆಸಲು ಮುಂದಾಗಬೇಕು.ಚಂದ್ರುಹೊಸೂರುದೊಡ್ಡಿ