ಚಾಲಕರು ಸಂಚಾರ ನಿಯಮ ಪಾಲಿಸಲಿ

Published on

ಗೌರಿಬಿದನೂರು: ಖಾಸಗಿ ಶಾಲಾ ವಾಹನ ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕು ಎಂದು ವೃತ್ತ ನಿರೀಕ್ಷಕ ಅಂಜನ್​ ಕುಮಾರ್​ ತಿಳಿಸಿದರು.ನಗರದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಶಾಲಾ ಮುಖ್ಯಸ್ಥರಿಗೆ ಮತ್ತು ಶಾಲಾ ವಾಹನ ಚಾಲಕರಿಗೆ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.ಮಕ್ಕಳು ಈ ದೇಶದ ಆಸ್ತಿ. ಪಾಲಕರು ಪ್ರೀತಿಯಿಂದ ಮಕ್ಕಳನ್ನು ಸಾಕಿರುತ್ತಾರೆ. ಮಕ್ಕಳಿಗೆ ತೊಂದರೆಯಾದರೆ ನೋವು ಅನುಭವಿಸುತ್ತಾರೆ.ಆದ್ದರಿಂದ ಅವರನ್ನು ಸುರತವಾಗಿ ನಿಗದಿತ ಸ್ಥಳ ಮುಟ್ಟಿಸುವುದು ಚಾಲಕರ ಗುರಿ. ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ಶಾಲಾ ವಾಹನ ಚಾಲಕರು ಕಡ್ಡಾಯವಾಗಿ ವಾಹನ ಪರವಾನಗಿ ಹೊಂದಿರಬೇಕು.ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಕಿರಿದಾದ ರಸ್ತೆಯಲ್ಲಿ ವೇಗವಾಗಿ ಚಲಾಯಿಸುವುದು ಸೇರಿ ಸಂಚಾರಿ ನಿಯಮ ಉಲ್ಲಂಸುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.ಎಸ್​ಐ ಗೋಪಾಲ್​ ಮಾತನಾಡಿ, ಶಾಲೆಗಳ ವಾಹನ ಚಾಲಕರು ಚಾಲನೆ ಮಾಡುವಾಗ ಯಾವುದೇ ಕಾರಣಕ್ಕೂ ಮೊಬೈಲ್​ ಬಳಸಬಾರದು.ಚಾಲಕರು ಅಜಾಗರುಕತೆಯಿಂದ ಚಾಲನೆ ಮಾಡುತ್ತಿರುವುದು ಕಂಡುಬಂದಲ್ಲಿ ಪಾಲಕರು ಸಂಬಂಧಿತ ವಿದ್ಯಾಸಂಸ್ಥೆ ಇಲ್ಲವೇ ಪೊಲೀಸ್​ ಇಲಾಖೆಗೆ ಮಾಹಿತಿ ನೀಡಬೇಕು ಎಂದರು. ಪೊಲೀಸ್​ ಸಿಬ್ಬಂದಿಗಳಾದ ಮಂಜುನಾಥ್​, ನವೀನ್​ ಮತ್ತು ಶಾಲಾ ಶಿಕ್ಷಕರು, ವಾಹನ ಚಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net