

ಹಾವೇರಿ: ಕೋವಿಡ್ ನಿಯಂತ್ರಣಕ್ಕಾಗಿ ಗ್ರಾಮಗಳಿಗೆ ತೆರಳಿ ಜ್ವರ ತಪಾಸಣೆ ನಡೆಸಲು ಅನುಕೂಲವಾಗುವಂತೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ನ್ನು ಸಂಚಾರಿ ಫಿವರ್ ಕ್ಲಿನಿಕ್ ಆಗಿ ರೂಪಾಂತರಗೊಳಿಸಿದ್ದು, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಅವರು ಜಿಲ್ಲಾಡಳಿತ ಭವನದಲ್ಲಿ ಗುರುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯ ರಾಣೆಬೆನ್ನೂರ ತಾಲೂಕಿನಲ್ಲಿ ವಾಹನ ಸಂಚರಿಸಲಿದೆ ಎಂದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ. ಬಸವರಾಜ ಕೆಲಗಾರ ಮಾತನಾಡಿ, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕೋವಿಡ್ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿರುವವರು ಗ್ರಾಮೀಣ ಭಾಗದಿಂದ ಆಸ್ಪತ್ರೆಗೆ ಬರಲು ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಈ ಮೊಬೈಲ್ ಫಿವರ್ ಕ್ಲಿನಿಕ್ ಮೂಲಕ ಪ್ರತಿ ಗ್ರಾಮಗಳಿಗೆ ವೈದ್ಯರು ಸಂಚರಿಸಿ ಜ್ವರ ತಪಾಸಣೆ ಹಾಗೂ ರ್ಯಾಪಿಡ್ ಪರೀಕ್ಷೆ ನಡೆಸಿ ಕೋವಿಡ್ ಹಾಗೂ ನಾನ್ಕೋವಿಡ್ ರೋಗಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗಲಿದೆ ಎಂದರು.
ಕಾನ್ಸನ್ ಟ್ರೇಟರ್ ಹಸ್ತಾಂತರ: ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ರಾಣೆಬೆನ್ನೂರ ಗಂಗಾ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ಸದಸ್ಯರು 2.38ಲಕ್ಷ ಮೌಲ್ಯದ 3ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಜಿಲ್ಲಾಡಳಿತಕ್ಕೆ ಗುರುವಾರ ಹಸ್ತಾಂತರಿಸಿದರು.
ಡಿಎಚ್ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ, ವಿಭಾಗೀಯ ತಾಂತ್ರಿಕ ಶಿಲ್ಪಿ ಚಂದ್ರಶೇಖರ ಇಟಗಿ, ಡಾ. ಸಿದ್ದೇಶ್ವರ ಕಲಕೋಟಿ, ಶಿವಾನಂದ ಭಾಗಾದಿ, ರತ್ನಾಕರ ಕುಂದಾಪುರ, ಹನುಮಂತಪ್ಪ ಕಬ್ಬೂರ ಇತರರಿದ್ದರು.
ಮಿನಿ ಆಸ್ಪತ್ರೆಯಂತಿದೆ ಒಳಾಂಗಣ: ವಾಯವ್ಯ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ನ ಒಳಾಂಗಣವನ್ನು ಮರು ವಿನ್ಯಾಸಗೊಳಿಸಲಾಗಿದೆ. ಸಾರ್ವಜನಿಕರ ತಪಾಸಣೆ ಕೊಠಡಿ, ವೈದ್ಯರ ವಿಭಾಗ, ಸ್ಟಾಫ್ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ಗಳಿಗೆ ಪ್ರತ್ಯೇಕ ಟೇಬಲ್ ಮತ್ತು ಆಸನ ವ್ಯವಸ್ಥೆ ಇರುವ ಪ್ರತ್ಯೇಕ ವಿಭಾಗ ಹಾಗೂ ಔಷಧ ಕ್ಯಾಬಿನ್, ಹ್ಯಾಂಡ್ವಾಷ್ ಯೂನಿಟ್ಗಳನ್ನು ಪ್ರತ್ಯೇಕಿಸಲಾಗಿದೆ. ತಪಾಸಣೆಗೆ ಒಂದು ಬೆಡ್ನ ವ್ಯವಸ್ಥೆಯನ್ನೂ ಮಾಡಲಾಗಿದೆ. ಪ್ರತಿಯೊಂದು ಕ್ಯಾಬಿನ್ಗಳನ್ನು ಪ್ರತ್ಯೇಕ್ಕಿಸಲು ಪರದೆ ವ್ಯವಸ್ಥೆ ಮಾಡಲಾಗಿದೆ. ಮಿನಿ ಆಸ್ಪತ್ರೆಯಂತೆ ಒಳಾಂಗಣವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.