

ಗೌರಿಬಿದನೂರು: ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ಕುಮ್ಮಕ್ಕಿನಂತೆ ನಡೆದುಕೊಳ್ಳುತ್ತಿರುವ ದುರ್ಬಲ ರಾಜ್ಯಪಾಲರನ್ನು ರಾಜ್ಯದಿಂದ ಓಡಿಸಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಶಾಸಕರ ಬಣದ ನೇತೃತ್ವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ನಲವತ್ತು ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದೇವೆ. ಅನೇಕ ರಾಜಕಾರಣಿಗಳ ಆಡಳಿತ ದುರಾಸೆಗಳನ್ನು ಕಂಡಿದ್ದೇವೆ. ಅವರ ಅವಧಿಯಲ್ಲಿ ಸ್ವಂತಕ್ಕೆ ಏನಾದರೂ ಮಾಡಿಕೊಳ್ಳಲು ನೋಡುತ್ತಾರೆ. ಆದರೆ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿ, 2 ಬಾರಿ ಉಪಮುಖ್ಯಮಂತ್ರಿ, ಹಲವು ಬಾರಿ ಹಣಕಾಸು ಮಂತ್ರಿಯಾಗಿದ್ದರು. ಸುಧೀರ್ಘ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕಿಯಿಲ್ಲದಂತೆ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ. ಮನಸ್ಸು ಮಾಡಿದ್ದರೆ ಸಾವಿರಾರು ಎಕರೆ ಜಮೀನು, ಆಸ್ತಿ ಮಾಡಿಕೊಳ್ಳಬಹುದಿತ್ತು. ಆದರೆ ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿ. ನಾನು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಲು ಪ್ರಮುಖ ಕಾರಣವೇ ಸಿದ್ದರಾಮಯ್ಯನವರು ಎಂದರು.
ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯಪಾಲರು ಅನ್ಯಾಯದ ಮಾರ್ಗಕ್ಕೆ ಕೈಹಾಕಿದ್ದಾರೆ. ಹುನ್ನಾರ ಮಾಡಿ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಲು ಹೊರಟಿದ್ದಾರೆ. ಪತ್ನಿಗೆ ದಾನ ನೀಡಿದ ಜಮೀನಿನ ಕ್ಷುಲ್ಲಕ ವಿಚಾರ ಇಟ್ಟುಕೊಂಡು ಸಿದ್ದರಾಮಯ್ಯನವರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು. ಇಂತಹ ಅಪ್ರಾಮಾಣಿಕ, ದುರ್ಬಲ ರಾಜ್ಯಪಾಲರನ್ನು ರಾಜ್ಯದಿಂದ ಓಡಿಸಬೇಕು ಪುಟ್ಟಸ್ವಾಮಿಗೌಡ ಹೇಳಿದರು.
ಬಿಜೆಪಿಯವರಿಗೆ ಸಿಎಂ ವರ್ಚಸ್ಸು ಸಹಿಸಲಾಗುತ್ತಿಲ್ಲ
ರಾಜ್ಯಕ್ಕೆ ಒಳ್ಳೆಯದು ಮಾಡುತ್ತಾರೆ ಎಂಬ ಕಾರಣಕ್ಕೆ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದೆ. ಆದರೆ ಪ್ರಾಮಾಣಿಕ ಮುಖ್ಯಮಂತ್ರಿ ಇದ್ದರೆ ಮುಂದೆ 2029ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿಯವರ ಚಿಂತೆಯಾಗಿದೆ. ಕೇಂದ್ರ ಸರ್ಕಾರ, ನರೇಂದ್ರ ಮೋದಿ ಅವರ ಸಂವಿಧಾನ ವಿರೋಧಿ ನಡೆಗಳನ್ನು ಸಿದ್ದರಾಮಯ್ಯನವರು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದರು. ಅವರ ವರ್ಚಸ್ಸಿನಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳಿಸಿ ಅಧಿಕಾರಕ್ಕೆ ಬಂದಿದ್ದಲ್ಲದೆ ತೆಲಂಗಾಣದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇದನ್ನು ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಎಂ. ನರಸಿಂಹಮೂರ್ತಿ ಮಾತನಾಡಿ, ರಾಜ್ಯದಲ್ಲಿ ಶೇ.70ರಷ್ಟು ಬಡವರಿಗೆ ಅನ್ನಭಾಗ್ಯ ನೀಡಿದ ಸಿದ್ದರಾಮಯ್ಯ ಅವರು ಅನ್ನರಾಮಯ್ಯ ಎಂದೇ ಹೆಸರಾಗಿದ್ದಾರೆ. ಅವರನ್ನು ವಾಮಮಾರ್ಗದ ಮೂಲಕ ಕುರ್ಚಿಯಿಂದ ಕೆಳಗಿಳಿಸುವ ಪ್ರಯತ್ನ ಮಾಡಿದರೆ ಇಡೀ ರಾಜ್ಯವೇ ತಿರುಗಿ ಬೀಳಲಿದೆ ಎಂದರು.
ವಕೀಲ ರಂಗರಾಜು ಮಾತನಾಡಿ, ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಮೊದಲಿನಿಂದಲೂ ಸಂವಿಧಾನ ವಿರೋಧಿ ನಡೆಗಳನ್ನು ಅನುರಿಸಿಕೊಂಡು ಬರುತ್ತಿದ್ದಾರೆ. ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಆಟ ರಾಜ್ಯದಲ್ಲಿ ನಡೆಯುವುದಿಲ್ಲ ಎಂದರು. ಮುಖಂಡರಾದ ವಕೀಲ ರಂಗರಾಜು, ಆರ್. ಅಶೋಕ್ ಕುಮಾರ್, ಗೋಪಿ, ಫರೀದ್, ಲಕ್ಷ್ಮೀನಾರಾಯಣಪ್ಪ, ಲಕ್ಷ್ಮಣರಾವ್, ಜೈರಾಮ್, ಅಬ್ದುಲ್ಲಾ, ಗಂಗಾಧರಪ್ಪ ಇನ್ನಿತರ ಮುಖಂಡರು ಹಾಜರಿದ್ದರು.
ಬೃಹತ್ ಮೆರವಣಿಗೆ
ಗೌರಿಬಿದನೂರಿನ ಶನಿಮಹಾತ್ಮ ಸ್ವಾಮಿ ದೇವಾಲಯದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈಕಾರ ಕೂಗಿ, ಗೋ ಬ್ಯಾಕ್ ಗವರ್ನರ್ ಎಂದು ಘೋಷಣೆಗಳನ್ನು ಮೊಳಗಿಸಲಾಯಿತು.
ಸಿಎಂ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ
ಕೋಲಾರ - ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನಿರ್ದೇಶಕ ಜೆ .ಕಾಂತರಾಜು ಮಾತನಾಡಿ, ರಾಜ್ಯಪಾಲರು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯಪಾಲರ ಹಿಂದೆ ತೆರೆಮರೆಯಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ಅವರಿಗೆ ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಸಿದ್ದರಾಮಯ್ಯನವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಆದರೆ ಅವರ ಯತ್ನ ಫಲ ನೀಡುವುದಿಲ್ಲ. ಸ್ವಾಭಿಮಾನಿ ಕನ್ನಡಿಗರು ಪ್ರಾಮಾಣಿಕ ರಾಜಕಾರಣಕ್ಕೆ ಗೌರವ ನೀಡಲಿದ್ದಾರೆ. ಬಿಜೆಪಿಯವರು ನಡೆಸುತ್ತಿರುವ ಕುತಂತ್ರಗಳು ಅವರಿಗೇ ತಿರುಗುಬಾಣವಾಗಲಿವೆ ಎಂದರು.