

ಗೋಣಿಕೊಪ್ಪ: ಕುಂದತ್ ಬೊಟ್ಟ್‌ಲ್ ನೇಂದಾ ಕುದುರೆ… ಪಾರಣಮಾನಿಲ್ ಅಳ್‌ಂಜ ಕುದುರೆ… ಎಂಬ ಬೇಡುಹಬ್ಬದ ಹಾಡಿನ ಸಾಲಿನಲ್ಲಿಯೇ ಅಡಕವಾಗಿರುವ ಇತಿಹಾಸ ಪ್ರಸಿದ್ಧ ಬೊಟ್ಟ್‌ಲಪ್ಪ (ಈಶ್ವರ) ದೇವರ ವಾರ್ಷಿಕ ಬೋಡ್ ನಮ್ಮೆ ಮಂಗಳವಾರ, ಬುಧವಾರ ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ ನಾಡ್ ಕುಂದ ಮುಗುಟಿಗೇರಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷ ಕಾವೇರಿ ತೀರ್ಥೋದ್ಭವದ ದಿನದಂದು ನಡೆಯುವ ಬೊಟ್ಟಿಯತ್ ನಾಡ್ ಕುಂದ ಮುಗುಟಿಗೇರಿ ಗ್ರಾಮದ ಈ ಬೇಡು ಹಬ್ಬದಲ್ಲಿ ತಲಕಾವೇರಿಯಿಂದ ಪವಿತ್ರ ತೀರ್ಥವನ್ನು ತಂದು ಕುಂದಬೆಟ್ಟದ ಮೇಲಿರುವ ಈಶ್ವರ ದೇವರಿಗೆ ಅರ್ಪಿಸುವ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ದೊರೆಯಿತು.
ಪ್ರತಿವರ್ಷ ತೀರ್ಥೋದ್ಭವಕ್ಕೆ ಒಂದು ದಿನ ಮುಂಚೆ ಹಾಗೂ ತೀರ್ಥೋದ್ಭವದ ಮರುದಿನ ಇಲ್ಲಿ ಹಬ್ಬ ನಡೆಯಲಿದ್ದು, ಈ ಬಾರಿ ತೀರ್ಥೋದ್ಭವ ಅ.17ರ ಮಧ್ಯರಾತ್ರಿಯ ನಂತರ ಹಾಗೂ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಅ.18ರ ಮುಂಜಾನೆ 1.27ಕ್ಕೆ ಆಗಿರುವ ಕಾರಣ ಕುಂದ ಬೋಡ್ ನಮ್ಮೆ ಅ.17 ಹಾಗೂ 18ರಂದು ನಡೆಯಿತು.
ಹಬ್ಬಕ್ಕೆ ವಾರದ ಮುಂಚೆ ಅಂದರೆ ಅ.11ರಂದು ಕುಂದ ಗ್ರಾಮದಲ್ಲಿರುವ ನಾಡ್ ದೇವಸ್ಥಾನ (ಈಶ್ವರ ದೇವಸ್ಥಾನ) ಹತ್ತಿರ ಇರುವ ಅಂಬಲದಲ್ಲಿ ಬೋಡ್ ನಮ್ಮೆ ದೋಳ್ ಇಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಪ್ರತಿನಿತ್ಯ ಸಂಜೆ ಹಬ್ಬದತನಕ ಸಾಂಪ್ರದಾಯಿಕ ದೋಳ್ ಬಾರಿಸುವ ಮೂಲಕ ಹಬ್ಬದ ವಿವಿಧ ಸಾಂಪ್ರದಾಯಕ್ಕೆ ಚಾಲನೆ ದೊರೆಯಿತು. ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಹಬ್ಬ ನಡೆಯಿತು.
ಅ.17ರಂದು ರಾತ್ರಿ ಇಲ್ಲಿನ ಅಂಬಲ ಹಾಗೂ ಈಶ್ವರ ದೇವಸ್ಥಾನದಲ್ಲಿ ಕಳಿ ಪೊರಡುವೋ ಆಚರಣೆ ಬಳಿಕ 18ರಂದು ಮಧ್ಯಾಹ್ನ ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬಸ್ಥರ ಬಲ್ಯಮನೆಯಿಂದ ಕೃತಕವಾಗಿ ಶೃಂಗರಿಸಲಾದ ಎರಡು ಕುದುರೆಗಳು ಹೊರಟು ನಂತರ ಅಂಬಲದಲ್ಲಿ ಸೇರಿ ಕಡಿದಾದ ದಾರಿಯ ಮೂಲಕ ಬೆಟ್ಟವನ್ನು ಏರಿ, ಕುಂದಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.