

ಹಿರೇಕೆರೂರ: ಬೈಕ್ ಸವಾರರು ರಸ್ತೆಯಲ್ಲಿ ಸಂಚರಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ನಿಮ್ಮ ಸುರಕ್ಷೆಯಾಗುವುದರ ಜತೆಗೆ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ದೀಪು ಎಂ.ಟಿ. ಹೇಳಿದರು.
ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷಾ ಸಪ್ತಾಹದ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸಂಘದ ಸದಸ್ಯರು ಹಾಗೂ ಪಟ್ಟಣದ ಮಹಿಳೆಯರು ಪಟ್ಟಣದ ಸರ್ವಜ್ಞ ವೃತ್ತದ ಬಳಿ ಶನಿವಾರ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಅವರು ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ರಸ್ತೆ ನಿಯಮಗಳನ್ನು ಪಾಲಿಸಬೇಕು. ಶಾಲೆ- ಕಾಲೇಜು, ಜನನಿಬಿಡ ಪ್ರದೇಶದಲ್ಲಿ ವೇಗವಾಗಿ ಬೈಕ್ ಚಲಾಯಿಸದೆ, ತಿರುವಿನಲ್ಲಿ ಜಾಗ್ರತೆಯಿಂದ ಸಾಗಬೇಕು ಎಂದರು.
ಪಪಂ ಉಪಾಧ್ಯಕ್ಷೆ ಸುಧಾ ಚಿಂದಿ ಮಾತನಾಡಿ, ರಸ್ತೆ ನಿಯಮ ಅರಿತು ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸಬೇಕು. ಅವಸರವೇ ಅಪಘಾತಕ್ಕೆ ಕಾರಣ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಸಂಘದವರು ಹಾಗೂ ಸ್ಥಳೀಯ 32 ಮಹಿಳೆಯರಿಗೆ ಪಪಂ ಉಪಾಧ್ಯಕ್ಷೆ ಸುಧಾ ಚಿಂದಿ ಅವರು ಉಚಿತವಾಗಿ ಹೆಲ್ಮೆಟ್ಗಳನ್ನು ವಿತರಿಸಿದರು. ನಂತರ ಸರ್ವಜ್ಞ ವೃತ್ತದಿಂದ ಜಿ.ಬಿ. ಶಂಕರರಾವ್ ವೃತ್ತದವರೆಗೆ ಬೈಕ್ ರ‍್ಯಾಲಿ ನಡೆಯಿತು.
ಮೃತ್ಯುಂಜಯ ಚಿಂದಿ, ಭಾಗ್ಯ ಚಿಂದಿ, ಗೀತಾ ದಂಡಗೀಹಳ್ಳಿ, ರೇಖಾ ನಲವಾಲದ, ಪಲ್ಲವಿ ಬಡಿಗೇರ, ಅನುರಾಧಾ ಬಡಿಗೇರ, ಸುನಿತಾ ಪ್ರಕಾಶ, ಗಂಗಾ ಪಾಟೀಲ, ವಿಜಯಲಕ್ಷ್ಮೀ ರಾಜೇಶ, ಗೌರಮ್ಮ ಬಣಕಾರ, ಅದ್ವಿಕಾ ಮಧೂರಕರ, ಹಾಗೂ ಮಹಿಳಾ ಸಂಘದ ಸದಸ್ಯರು ಇದ್ದರು.