ದೃಷ್ಟಿ ಯೋಜನೆ ಜಿಲ್ಲಾದ್ಯಂತ ವಿಸ್ತರಣೆ

drishti
drishti
Published on

ಬ್ರಹ್ಮಾವರ: ಸಾರ್ವನಿಕರ ಜೀವ, ವಸ್ತುವಿನ ಭದ್ರತೆಗೆ ಸಾರ್ವಜನಿಕರ ಮತ್ತು ಗ್ರಾಮಪಂಚಾಯಿತಿ ಸಹಭಾಗಿತ್ವದಲ್ಲಿ ದೃಷ್ಟಿ ಯೋಜನೆಯನ್ನು ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ಆರಂಭಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ ಹೇಳಿದರು.

ಸೋಮವಾರ ಬ್ರಹ್ಮಾವರದ ಹೋಟೆಲ್ ಆಶ್ರಯ ಸಭಾಂಗಣದಲ್ಲಿ ಬ್ರಹ್ಮಾವರ ಪೊಲೀಸ್ ವೃತ್ತನಿರೀಕ್ಷಕರ ಕಚೇರಿ ಮತ್ತು ಪೊಲೀಸ್ ಠಾಣೆ ಹಾಗೂ ಚಾಂತಾರು ಗ್ರಾಮ ಪಂಚಾಯಿತಿ, ಜಂಬೋಸ್ಟಾರ್ ಸೆಕ್ಯುರಿಟೀಸ್ ಸಹಭಾಗಿತ್ವದಲ್ಲಿ ಜರುಗಿದ ದೃಷ್ಟಿ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಠಾಣೆಗಳಲ್ಲಿ ಅವಿರತವಾಗಿ ದುಡಿಯುವ ಪೊಲೀಸ್ ಸಿಬ್ಬಂದಿಯ ಜತೆಗೆ ಸ್ಥಳೀಯ ನಿವೃತ್ತ ಸೈನಿಕರು ಮತ್ತು ತರಬೇತಿ ಹೊಂದಿದ ಗನ್‌ಮ್ಯಾನ್‌ಗಳು ರಾತ್ರಿ ಹೊತ್ತು ನಿಗದಿತ ಸ್ಥಳದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಾರ್ವಜನಿಕಿರಗೆ ಎಲ್ಲ ರೀತಿಯ ಸುರಕ್ಷತೆಯನ್ನು ನೀಡುವ ಮತ್ತು ಪ್ರತೀ ಕ್ಷಣದ ಸಿಸಿ ಟಿವಿ ಕ್ಯಾಮರಾ ಚಿತ್ರಣವನ್ನು ಸೆಕ್ಯುರಿಟಿ ಸಂಸ್ಥೆಗೆ ರವಾನೆ ಮಾಡಲಿದ್ದಾರೆ. ಈ ವಿನೂತನ ಯೋಜನೆಯಿಂದ ಉಡುಪಿ ಜಿಲ್ಲೆಯಲ್ಲಿ ಕಳವು ಮತ್ತು ಅಪರಾಧ ಕಡಿಮೆಗೊಳಿಸಲು ಸಹಕಾರಿಯಾಗಲಿದ್ದು ಈ ಯೋಜನೆಯನ್ನು ಉಡುಪಿ ಜಿಲ್ಲಾದ್ಯಂತ ವಿಸ್ತರಿಸಲಾಗುವುದು ಎಂದು ಎಸ್‌ಪಿ ಹೇಳಿದರು.

ಡಿವೈಎಸ್‌ಪಿ ಪ್ರಭು ಡಿ.ಟಿ., ಚಾಂತಾರು ಗ್ರಾಪಂ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸತೀಶ್ ನಾಯ್ಕ, ಜಂಬೋಸ್ಟಾರ್ ಸೆಕ್ಯುರಿಟೀಸ್‌ನ ವಿಜಯ ಫರ್ನಾಂಡೀಸ್ ಉಪಸ್ಥಿತರಿದ್ದರು. ಚೇತನ್ ಕುಮಾರ್ ಶೆಟ್ಟಿ ಮತ್ತು ಮಟಪಾಡಿ ವಿಶ್ವನಾಥ್ ಶೆಟ್ಟಿ ಯೋಜನೆಯ ಉಪಯುಕ್ತತೆ ಕುರಿತು ಮಾತನಾಡಿದರು. ಗ್ರಾಮ ಪಂಚಾಯಿತಿಯ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು. ಬ್ರಹ್ಮಾವರ ಎಎಸ್‌ಐ ವಿಠಲ್ ಎಂ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಜಯಕುಮಾರ್ ವಂದಿಸಿದರು. ಶಿಕ್ಷಕ ಶ್ರೀಕಾಂತ್ ಸಾಮಂತ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net