ಶ್ರೀ ಗುರುನರಸಿಂಹ ಸಹಕಾರಿ ಸಂಘ ಸಾಮಾನ್ಯ ಸಭೆ

KOTA (9)
Published on

ಸಾಲಿಗ್ರಾಮ: ಇಲ್ಲಿನ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 15ನೇ ವಾರ್ಷಿಕ ಸಾಮಾನ್ಯ ಸಭೆಯು ಇತ್ತೀಚೆಗೆ ಸಾಲಿಗ್ರಾಮದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ವರ್ಷದಲ್ಲಿ ಸಂಘವು ಸದಸ್ಯರಿಂದ 15.00 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಿ 14.00 ಕೋಟಿ ರೂ.ಗೂ ಅಧಿಕ ಸಾಲ ವಿತರಿಸಿದ್ದು ಶೇ.99.76ರ ವಸೂಲಾತಿ ಮಾಡಿದೆ. ಸಂಘವು ಆರಂಭದಿಂದಲೂ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ದಕ್ಷ ಆಡಳಿತ ಮಂಡಳಿಯ ಮಾರ್ಗದರ್ಶನ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಸೇವೆಯಿಂದ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು. ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಮುಂದಿನ ಸಾಲಿನಿಂದ ವಾರ್ಷಿಕ ಸಾಮಾನ್ಯ ಸಭೆಯನ್ನು ಸಂಘದ ಕಟ್ಟಡದಲ್ಲಿಯೇ ನಡೆಸುವು ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಕಳೆದ ಸಾಲಿನಲ್ಲಿ ಸಂಘವು 32.50 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25ರ ಲಾಭಾಂಶ ನೀಡಲಾಯಿತು. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶೇ.25ರ ಗರಿಷ್ಠ ಲಾಭಾಂಶ ನೀಡಿ ಪ್ರಾಥಮಿಕ ರಂಗದಲ್ಲಿ ದಾಖಲೆ ನಿರ್ಮಿಸಿದೆ ಎಂದರು. ನಿರ್ದೇಶಕರಾದ ಸಂಜೀವ ಜಿ., ಮಂಜುನಾಥ ಎಸ್.ಕೆ., ಡಾ.ಕೆ.ಕೃಷ್ಣ ಕಾಂಚನ್, ಕೆ.ಶಂಕರ ಬಂಗೇರ, ವಸಂತ ಶೆಟ್ಟಿ, ವೈ.ಕೃಷ್ಣಮೂರ್ತಿ ಐತಾಳ, ಸವಿತಾ ಎಸ್.ಪೂಜಾರಿ, ಶಾಂತಾ ಭಟ್ಟ, ನಾಗರತ್ನಾ ಬಾಯರಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಎಸ್.ಸೋಮಯಾಜಿ ವರದಿ ಮಂಡಿಸಿದರು. ಶಾಂತಾ ಭಟ್ಟ ವಂದಿಸಿದರು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪುರಸ್ಕಾರ

2024-25ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಾಲಾವಾರು ವಿದ್ಯಾರ್ಥಿಗಳು ಮತ್ತು ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸಿ ಅಭಿನಂದಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಲವು ಹಿರಿಯ ನಾಗರಿಕರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net