

ಶಿಡ್ಲಘಟ್ಟ: ಕೃಷಿ ಇಲಾಖೆಯಿಂದ ಹನಿ ನೀರಾವರಿಗೆ ವಿತರಿಸಿರುವ ಪೈಪ್ ಮತ್ತು ಲ್ಯಾಟರಲ್ ಕಳಪೆಯಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಕಂಪನಿ, ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ದೊರಕದ ಕಾರಣ ಕುಪಿತಗೊಂಡ ರೈತ ಪೈಪ್‌ಗಳನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮುಂಭಾಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಅಪ್ಪೇಗೌಡನಹಳ್ಳಿಯ ರೈತ, ತಾಪಂ ಮಾಜಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ ಅವರು ಕೇಶವಪುರ ಬಳಿಯ ತೋಟದಲ್ಲಿ ಹನಿ ನೀರಾವರಿ ಅಳವಡಿಕೆಗಾಗಿ ಕೃಷಿ ಇಲಾಖೆಯಿಂದ ಪಡೆದಿದ್ದ ಪೈಪ್ ಮತ್ತು ಲ್ಯಾಟರಲ್‌ಗಳು ಕಳಪೆಯಾಗಿವೆ. ಇದರಿಂದ ನೀರೆಲ್ಲ ಪೋಲಾಗಿ ಬೆಳೆ ಒಣಗಲಾರಂಭಿಸಿದೆ. ಈ ಕುರಿತು ಲಕ್ಷ್ಮಿನಾರಾಯಣರೆಡ್ಡಿ ಅವರು ಕೃಷಿ ಸಹಾಯಕ ನಿರ್ದೇಶಕ ರವಿ ಹಾಗೂ ಪೈಪ್, ಲ್ಯಾಟರಲ್ ಪೂರೈಕೆ ಮಾಡಿದ್ದ ಕಂಪನಿಯ ಮುಖ್ಯಸ್ಥರೊಂದಿಗೆ ಮಾತನಾಡಿದ್ದು, ಕಂಪನಿಯವರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪೈಪ್‌ಗಳು ಕಳಪೆಯಾಗಿರುವುದನ್ನು ಒಪ್ಪಿಕೊಂಡು ಬದಲಿಸಿಕೊಡುವ ಭರವಸೆ ನೀಡಿದ್ದರಾದರೂ ಪೈಪ್ ಬದಲಿಸಿಕೊಟ್ಟಿಲ್ಲ. ಇದರಿಂದ ಕುಪಿತಗೊಂಡ ರೈತ ಪೈಪ್‌ಗಳನ್ನು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಎದುರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
"ಜಮೀನಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಪಡೆದ ಪೈಪ್ ಮತ್ತು ಲ್ಯಾಟರಲ್‌ಗಳು ಕಳಪೆಯಾಗಿವೆ. ಈ ಬಗ್ಗೆ ಕಂಪನಿ ಮುಖ್ಯಸ್ಥರು, ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಉಪಯೋಗ ಆಗಲಿಲ್ಲ. ಕಳಪೆ ಪೈಪ್‌ಗಳ ಪೂರೈಕೆ ಬಗ್ಗೆ ತನಿಖೆ ಆಗುವವರೆಗೂ ಬಿಡುವುದಿಲ್ಲ. ಇದು ನನ್ನೊಬ್ಬನ ಸಮಸ್ಯೆಯಲ್ಲ. ಕೃಷಿ ಇಲಾಖೆಯಿಂದ ಪೈಪ್ ಪಡೆದ ಎಲ್ಲ ರೈತರ ಸಮಸ್ಯೆಯಾಗಿದೆ."
- ಕೆ.ಲಕ್ಷ್ಮಿನಾರಾಯಣರೆಡ್ಡಿ, ತಾಪಂ ಮಾಜಿ ಅಧ್ಯಕ್ಷ
"ಶಿಡ್ಲಘಟ್ಟ ತಾಲೂಕಿನಾದ್ಯಂತ ಈವರೆಗೂ ಸುಮಾರು 28 ರೈತರಿಗೆ ಪೈಪ್‌ಗಳನ್ನು ನೀಡಲಾಗಿದೆ. ಇದುವರೆಗೂ ಎಲ್ಲೂ ದೂರು ಬಂದಿಲ್ಲ. ಆದರೆ, ಲಕ್ಷ್ಮಿನಾರಾಯಣರೆಡ್ಡಿ ಅವರ ತೋಟದಲ್ಲಿನ ಪೈಪ್‌ಗಳ ಕಳಪೆ ಬಗ್ಗೆ ದೂರು ಬಂದಿದ್ದು, ಅವುಗಳನ್ನು ಪೂರೈಸಿದ ಕಂಪನಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಕಳಪೆಯಾಗಿರುವುದು ಕಂಡು ಬಂದಿದೆ. ಕಂಪನಿಯ ಸಿಬ್ಬಂದಿ ಕೂಡ ಒಪ್ಪಿಕೊಂಡು ಬದಲಿಸಿಕೊಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು."
- ರವಿ, ಕೃಷಿ ಸಹಾಯಕ ನಿರ್ದೇಶಕ