ವಾಣಿಜ್ಯ ಬೆಳೆಗೆ ಹನಿ ನೀರಾವರಿ ಪದ್ಧತಿ ಸೂಕ್ತ

07arsph1ep
Published on

ಅರಸೀಕೆರೆ: ರೈತರು ಆರ್ಥಿಕ ಸ್ವಾಲಂಬನೆ ಸಾಧಿಸಲು ಹನಿ ನಿರಾವರಿ ಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ ಎಂದು ಬೆಂಗಳೂರಿನ ಲಾಲ್‌ಬಾಗ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಸ್.ರಮೇಶ್ ಹೇಳಿದರು.


ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ನಗರದ ಹೊರವಲಯದಲ್ಲಿರುವ ಕಸ್ತೂರ ಬಾ ಸೇವಾಶ್ರಮದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಪದ್ಧತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತೆಂಗು, ಅಡಕೆ, ಬಾಳೆ, ಸಪೋಟಾ, ಮಾವು, ದಾಳಿಂಬೆ, ಪಪ್ಪಾಯಿ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಹನಿ ನಿರಾವರಿ ಪದ್ಧತಿ ಅತ್ಯಂತ ಸೂಕ್ತ ವಿಧಾನವಾಗಿದೆ ಎಂದು ಹೇಳಿದರು.


ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಪ್ರೊ.ಡಾ.ವಾಸುದೇವನ್ ಮಾತನಾಡಿ, ಕಾಲ ಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸುವುದರಿಂದ ಫಲವತ್ತತೆ ತಿಳಿಯಬಹುದು. ನೀರು ಹಾಗೂ ಮಣ್ಣಿನ ಮಹತ್ವ ಅರಿತು ಕೃಷಿ ಮಾಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಮಿತ ನೀರಿನ ಬಳಕೆ ಜತೆಗೆ ಅಂತರ್ಜಲ ಸಂರಕ್ಷಣೆಗೂ ಒತ್ತು ನೀಡುವುದು ಅಗತ್ಯವಿದೆ ಎಂದರು.


ತೋಟಗಾರಿಕೆ ಇಲಾಖೆ ತಾಂತ್ರಿಕ ಸಲಹೆಗಾರ ಡಾ.ಅಂಜಿನಪ್ಪ, ಡಾ.ನಾಗಪ್ಪ ದೇಸಾಯಿ, ವಿಭಾಗೀಯ ಜಂಟಿ ನಿರ್ದೇಶಕ ನಾಗರಾಜ್, ತಾಲೂಕು ಸಹಾಯಕ ನಿರ್ದೇಶಕ ಸತೀಶ್, ಶಿವಕುಮಾರ್, ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ತಾಂತ್ರಿಕ ಉಪಕರಣಗಳ ವಸ್ತುಪ್ರದರ್ಶನ, ಮಾರಾಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net